ಭಾರತ ಅಫ್ಘಾನಿಸ್ತಾನದಲ್ಲಿ ಆರಂಭಿಸಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ: ತಾಲಿಬಾನ್ ವಕ್ತಾರ
ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
Published: 18th August 2021 09:28 AM | Last Updated: 18th August 2021 01:21 PM | A+A A-

ಕಾಬುಲ್ ನಲ್ಲಿ ನಿನ್ನೆ ಸುದ್ದಿಗೋಷ್ಠಿ ನಡೆಸಿದ ನಂತರ ಪತ್ರಕರ್ತರೊಬ್ಬರ ಕೈ ಕುಲುಕುತ್ತಿರುವ ತಾಲಿಬಾನ್ ವಕ್ತಾರ ಝುಬಿಹುಲ್ಲಾ ಮುಜಾಹಿದ್
ನವದೆಹಲಿ: ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಬೇರೆ ರಾಷ್ಟ್ರಗಳಿಗೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಹೇಳಿರುವ ತಾಲಿಬಾನ್, ಭಾರತ ಬಯಸುವುದಾದರೆ ಮೂಲಭೂತ ಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಲಿ ಎಂದು ಅದರ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ.
ಯಾರ ವಿರುದ್ಧವೂ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ಯಾವುದೇ ದೇಶಕ್ಕೆ ನಾವು ಬಿಡುವುದಿಲ್ಲ. ಇದು ಸ್ಪಷ್ಟ, ಅಫ್ಘಾನಿಸ್ತಾನದಲ್ಲಿ ಭಾರತ ಹಲವು ಯೋಜನೆಗಳನ್ನು, ನಿರ್ಮಾಣಗಳನ್ನು ಮತ್ತು ಮೂಲಭೂತ ಸೌಕರ್ಯ ಯೋಜನೆಗಳನ್ನು ಮಾಡಿದೆ. ಭಾರತ ಬಯಸುವುದಾದರೆ ಅಪೂರ್ಣಗೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸಲಿ, ಏಕೆಂದರೆ ಯೋಜನೆಗಳು ಜನರ ಪರವಾಗಿದೆ ಎಂದು ವಕ್ತಾರ ಶಹೀನ್ ಪಾಕಿಸ್ತಾನದ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಉರ್ದುವಿನಲ್ಲಿ ಹೇಳಿದ್ದಾರೆ.
ಕಳೆದ ಸೋಮವಾರ ಅಫ್ಘಾನಿಸ್ತಾನವನ್ನು ತಾಲಿಬಾನೀಯರು ವಶಪಡಿಸಿಕೊಂಡ ನಂತರ ಭಾರತ ಬಗ್ಗೆ ನೀಡುತ್ತಿರುವ ಮೊದಲ ಪ್ರತಿಕ್ರಿಯೆ ಇದಾಗಿದೆ.
ತಾಲಿಬಾನ್ ಉಗ್ರರೊಂದಿಗೆ ಮಾತುಕತೆ, ಸಂವಹನಕ್ಕೆ ಸಿದ್ಧ ಎಂದು ಭಾರತ ಸರ್ಕಾರ ಈಗಾಗಲೇ ಸೂಚನೆ ನೀಡಿದ್ದರೂ ಕೂಡ ತಾಲಿಬಾನ್ ಒಂದು ಅಧಿಕೃತ ಸಂಘಟನೆಯಾಗಿ ಗುರುತಿಸಿಕೊಳ್ಳಬೇಕು ಎಂದು ಹೇಳಿದೆ. ಅಫ್ಘಾನಿಸ್ತಾನದ 34 ಪ್ರಾಂತ್ಯಗಳಲ್ಲಿ ಅಭಿವೃದ್ಧಿ ಯೋಜನೆಗಳಲ್ಲಿ ಕೆಲಸ ಮಾಡುತ್ತಿದ್ದ ಎಲ್ಲಾ ವೃತ್ತಿಪರರನ್ನು ಭಾರತ ಇತ್ತೀಚೆಗೆ ಹಿಂದಕ್ಕೆ ಕರೆಸಿಕೊಂಡಿತ್ತು.
ಈ ಯುದ್ಧಪೀಡಿತ ಅಫ್ಘಾನಿಸ್ತಾನದಲ್ಲಿ ಭಾರತ ಹೂಡಿಕೆ ಮಾಡಿರುವ ಮೊತ್ತ 3 ಬಿಲಿಯನ್ ಡಾಲರ್. ಶಟೂಟ್ ಅಣೆಕಟ್ಟು, ಸಲ್ಮಾ ಅಣೆಕಟ್ಟು, ಅಫ್ಘಾನಿಸ್ತಾನದ ಸಂಸತ್ತು ಮತ್ತು ಹಲವು ರಚನಾತ್ಮಕ ರಸ್ತೆಗಳ ನಿರ್ಮಾಣಕ್ಕೆ ಅಫ್ಘಾನಿಸ್ತಾನ ಭಾರತದ ನೆರವನ್ನು ಪಡೆದಿದೆ.
ಈ ಯೋಜನೆಗಳು ಮುಗಿದ ಬಳಿಕ ಇದರಲ್ಲಿ ಭಾರತದ ಪಾತ್ರವೇನೂ ಇರುವುದಿಲ್ಲ, ನಂತರ ಅದನ್ನು ಕಾಪಾಡಿಕೊಳ್ಳುವುದು ಅಫ್ಘಾನಿಸ್ತಾನಕ್ಕೆ ಬಿಟ್ಟ ವಿಚಾರ ಎಂದು ಕಳೆದ ವಾರ ವಿದೇಶಾಂಗ ಸಚಿವಾಲಯ ಹೇಳಿತ್ತು.
ತಮ್ಮ ಶತ್ರುಗಳು, ಮಿಲಿಟರಿ ಉದ್ದೇಶಕ್ಕಾಗಿ ಅಥವಾ ಬೇರೆ ಯಾವುದೇ ರೀತಿಯ ತಮ್ಮ ಸ್ವ ಹಿತಾಸಕ್ತಿಗೆ ಅಫ್ಘಾನಿಸ್ತಾನ ನೆಲವನ್ನು ಬಳಸಿಕೊಳ್ಳಲು ನೋಡಿದರೆ ಅಂತವರ ಉದ್ದೇಶ ಈಡೇರುವುದಿಲ್ಲ, ತಮ್ಮ ಸಂಘಟನೆ ನೀತಿ ಅದಕ್ಕೆ ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ವಕ್ತಾರ ಹೇಳಿದ್ದಾರೆ.