ಮಹಿಳೆಯರಿಗೂ ಎನ್ ಡಿಎ ಪರೀಕ್ಷೆಯಲ್ಲಿ ಭಾಗವಹಿಸಲು ಸುಪ್ರೀಂ ಅವಕಾಶ: ಅಧಿಸೂಚನೆ ಹೊರಡಿಸಲು ಯುಪಿಎಸ್ಸಿಗೆ ಸೂಚನೆ

ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು (ಎನ್ ಡಿಎ) ಸೆಪ್ಟೆಂಬರ್ 5 ರಂದು ನಡೆಸಲು ಉದ್ದೇಶಿಸಿರುವ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹ ಮಹಿಳೆಯರಿಗೆ ಸುಪ್ರೀಂಕೋರ್ಟ್ ಬುಧವಾರ ಅವಕಾಶ ನೀಡಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರೀಯ ರಕ್ಷಣಾ ಅಕಾಡೆಮಿಯು (ಎನ್ ಡಿಎ) ಸೆಪ್ಟೆಂಬರ್ 5 ರಂದು ನಡೆಸಲು ಉದ್ದೇಶಿಸಿರುವ ಪರೀಕ್ಷೆಯಲ್ಲಿ ಭಾಗವಹಿಸಲು ಅರ್ಹ ಮಹಿಳೆಯರಿಗೆ ಸುಪ್ರೀಂಕೋರ್ಟ್ ಬುಧವಾರ ಅವಕಾಶ ನೀಡಿದೆ. ಭದ್ರತಾ ಪಡೆಗಳಲ್ಲಿ ಲಿಂಗ ಸಮಾನತೆ ಸಾಧಿಸುವ ದಿಸೆಯಲ್ಲಿ ಇದೊಂದು ಮಹತ್ವದ ಹೆಜ್ಜೆ ಎಂದು ಹೇಳಲಾಗಿದೆ. ಆದಾಗ್ಯೂ, ಮಹಿಳಾ ಅಭ್ಯರ್ಥಿಗಳು ನ್ಯಾಯಾಲಯದ ಮುಂದಿನ ಆದೇಶಗಳಿಗೆ ಒಳಪಟ್ಟು ಪರೀಕ್ಷೆಯನ್ನು ತೆಗೆದುಕೊಳ್ಳಬಹುದು ಎಂದು ಉನ್ನತ ನ್ಯಾಯಾಲಯ ಹೇಳಿದೆ.

ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಪಡೆ ಅಕಾಡೆಮಿ ಪರೀಕ್ಷೆ ಮತ್ತು ಎನ್ ಡಿಎಯಲ್ಲಿ ತರಬೇತಿಗಾಗಿ ಅರ್ಹ ಮಹಿಳೆಯರಿಗೆ ಅವಕಾಶ ನೀಡಲು ಸಂಬಂಧಿಸಿದ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕುಶ್ ಕಲ್ರಾ ಸಲ್ಲಿಸಿದ ಅರ್ಜಿಯ ಬಗೆಗೆ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರನ್ನೊಳಗೊಂಡ ಪೀಠ ಮಧ್ಯಂತರ ಆದೇಶ ಹೊರಡಿಸಿದೆ. 

ಮಹಿಳಾ ಅಭ್ಯರ್ಥಿಗಳು ರಕ್ಷಣಾ ಅಕಾಡೆಮಿ ನೌಕಾ ಅಕಾಡೆಮಿ ಪರೀಕ್ಷೆಗೂ ಹಾಜರಾಗಬಹುದು, ಎನ್ ಡಿಎಯಲ್ಲಿ ತರಬೇತಿ ಪಡೆಯುವುದಕ್ಕೂ ಅವರಿಗೆ ಅವಕಾಶ ಇದೆ. ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಬೇಕು ಮತ್ತು ಅದಕ್ಕೆ ಅಗತ್ಯ ಪ್ರಚಾರ ನೀಡಬೇಕು ಎಂದು ಕೇಂದ್ರ ಲೋಕಸೇವಾ ಆಯೋಗಕ್ಕೆ (ಯುಪಿಎಸ್ ಸಿ) ಪೀಠ ಸೂಚಿಸಿದೆ.

ಮಹಿಳೆಯರಿಗೆ ಪರೀಕ್ಷೆಗೆ ಅವಕಾಶ ನೀಡುವುದು ನೀತಿಗೆ ಸಂಬಂಧಿಸಿದ ವಿಚಾರ ಎಂಬುದು ಸ್ಪಷ್ಟ. ಹಾಗಾಗಿ ಇದರಲ್ಲಿ ನ್ಯಾಯಾಲಯ ಮಧ್ಯ ಪ್ರವೇಶ ಮಾಡುವಂತಿಲ್ಲ ಎಂದು ಸರ್ಕಾರವು ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ ಎಂಬುದರತ್ತ ಅರ್ಜಿ ದಾರರ ವಕೀಲ ಚಿನ್ಮಯ್ ಪ್ರದೀಶ್ ಶರ್ಮಾ ಪೀಠದ ಗಮನ ಸೆಳೆದರು.

ಭೂ ಸೇನೆ ಮತ್ತು ನೌಕಪಡೆಯಲ್ಲಿ ಮಹಿಳೆಯರನ್ನು ಕಾಯಂ ಸೇವೆಗೆ ಸೇರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಈ ನ್ಯಾಯಾಲಯ ಸ್ಪಷ್ಟವಾದ ತೀರ್ಪ ನೀಡಿದ್ದರೂ ಸರ್ಕಾರವು ಈ ರೀತಿ ಯೋಜಿಸಲು ಕಾರಣವೇನು ಎಂದು ಕೋರ್ಟ್ ಪ್ರಶ್ನಿಸಿದೆ.

ಹಲವು ಮಹಿಳೆಯರನ್ನು ಕಾಯಂ ಸೇವೆಗೆ ನಿಯೋಜಿಸಲಾಗಿದೆ. ಆದರೆ, ಎನ್ ಡಿಎ ಮಹಿಳೆಯರ ಪ್ರವೇಶ ಸರ್ಕಾರದ ನೀತಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರು ಪೀಠಕ್ಕೆ ತಿಳಿಸಿದರು.

ಸಹ ಶಿಕ್ಷಣವು ಅಷ್ಟೊಂದು ಸಮಸ್ಯಾತ್ಮಕವೇ? ಸರ್ಕಾರದ ನೀತಿಯು ಲಿಂಗ ತಾರತಮ್ಯ ಆಧಾರಿತವಾಗಿದೆ ಎಂದು ಹೇಳಿದ ನ್ಯಾಯಾಲಯ, ಸೇನೆಯಲ್ಲಿ ಮಹಿಳೆಯರನ್ನು ಸೇರಿಸುವುದಾದಲ್ಲಿ, ಎನ್ ಡಿಎಯಿಂದ ಏಕೆ ನಿರ್ಬಂಧಿಸಲಾಗುತ್ತಿದೆ. ಸರ್ಕಾರ ಯಾವಾಗಲೂ ನ್ಯಾಯಾಂಗ ಮಧ್ಯಸ್ಥಿಕೆಯನ್ನು ಒತ್ತಾಯಿಸಬಾರದು ಎಂದು ಹೇಳಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com