2 ಗಂಟೆಯಲ್ಲೇ ಓಮಿಕ್ರಾನ್ ಪತ್ತೆಗೆ ಕಿಟ್ ಅವಿಷ್ಕಾರ; ಅಸ್ಸಾಂ ವಿಜ್ಞಾನಿಗಳ ಆವಿಷ್ಕಾರ

ವಿಶ್ವದ ಹಲವೆಡೆ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಭಾರಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಈ ಸೋಂಕು ತಗುಲಿರುವುದನ್ನು ಕೇವಲ ೨ ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್‌ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಆರ್) ಅಭಿವೃದ್ಧಿಪಡಿಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಿಶ್ವದ ಹಲವೆಡೆ ಓಮಿಕ್ರಾನ್ ಹೊಸ ರೂಪಾಂತರಿ ತಳಿ ಭಾರಿ ಭೀತಿಯ ಅಲೆಯನ್ನೇ ಸೃಷ್ಟಿಸಿದೆ. ಈ ಸೋಂಕು ತಗುಲಿರುವುದನ್ನು ಕೇವಲ 2 ಗಂಟೆಗಳಲ್ಲಿ ಪತ್ತೆ ಮಾಡುವ ಕಿಟ್‌ವೊಂದನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಎಂಸಿಆರ್) ಅಭಿವೃದ್ಧಿಪಡಿಸಿದೆ.

ಸೋಂಕಿತರ ಮಾದರಿಗಳಿಂದಲೇ ಕೆಲವೇ ಗಂಟೆಗಳಲ್ಲಿ ಓಮಿಕ್ರಾನ್ ಪತ್ತೆ ಮಾಡುವ ಕಿಟ್ ಇದಾಗಿದೆ. ಈಶಾನ್ಯ ಪ್ರಾಂತ್ಯದ ಪ್ರಾದೇಶಿಕ ವೈದ್ಯಕೀಯ ಸಂಶೋಧನಾ ಕೇಂದ್ರದ ವಿಜ್ಞಾನಿಗಳ ತಂಡ ಈ ಕಿಟ್‌ನ್ನು ಅವಿಷ್ಕಾರಗೊಳಿಸಿದೆ. ಸಂಗ್ರಹಿಸಿದ ಮಾದರಿಯಲ್ಲೇ ಓಮಿಕ್ರಾನ್ ವೈರಾಣು ತಳಿ ಇರುವುದನ್ನು ಪತ್ತೆ ಮಾಡಬಹುದಾಗಿದೆ. ವಿಜ್ಞಾನಿ ಡಾ. ಬಿಸ್ವಜ್ಯೋತಿ ಬೊರ್ಕಕೋತಿ ಅವರ ನೇತೃತ್ವದ ತಂಡ ಅಭಿವೃದ್ಧಿಪಡಿಸಿದೆ.

ಮಹಾರಾಷ್ಟ್ರ, ಕರ್ನಾಟಕ, ದೆಹಲಿ, ರಾಜಸ್ತಾನ ಹಾಗೂ ಗುಜರಾತ್ ರಾಜ್ಯಗಳಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು, ಇದುವರೆಗೆ ದೇಶದಲ್ಲಿ 38 ಓಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ಓಮಿಕ್ರಾನ್ ತಳಿಯ ಪತ್ತೆಗಾಗಿ ದಿಬ್ರೂಘಡದ ಐಸಿಎಂಆರ್ – ಆರ್‌ಎಂಆರ್‌ಸಿ ಓಮಿಕ್ರಾನ್ ತಳಿಯ ಪತ್ತೆಗಾಗಿ ಆರ್‌ಟಿಪಿಸಿಆರ್ ಪರೀಕ್ಷೆಯ ಕಿಟ್‌ನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ ಎಂದು ವಿಜ್ಞಾನಿ ಡಾ. ಬಿಸ್ವಜ್ಯೋತಿ ತಿಳಿಸಿದ್ದಾರೆ.

ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದ ಅಡಿಯಲ್ಲಿ ಕೊಲ್ಕತ್ತ ಮೂಲದ ಜಿಸಿಸಿ ಬಯೋಟೆಕ್ ಕಂಪನಿಯು ಈ ಕಿಟ್‌ನ್ನು ಉತ್ಪಾದಿಸುತ್ತಿದೆ. ಶೇ. 100 ರಷ್ಟು ಫಲಿತಾಂಶ ನಿಖರವಾಗಿ ದೊರೆತಿರುವುದು ಪರಿಶೀಲನೆಗಳಿಂದ ದೃಢಪಟ್ಟಿದೆ ಎಂದು ಹೇಳಿದ್ದಾರೆ. ಈ ವಿಜ್ಞಾನಿಗಳ ತಂಡ ಕಳೆದ ವರ್ಷ ಜುಲೈನಲ್ಲಿ ಕೊರೊನಾ ವೈರಸ್‌ನ್ನು ಅತ್ಯಂತ ಯಶಸ್ವಿಯಾಗಿ ಪ್ರತ್ಯೇಕ ಮಾಡಿತ್ತು. ಈ ವಿನೂತನ ಸಾಧನೆ ಮಾಡಿದ ದೇಶದ 3ನೇ ಪ್ರಯೋಗಾಲಯ ಎಂಬ ಕೀರ್ತಿಗೆ ದಿಬ್ರೂಘಡದ ಐಸಿಎಂಆರ್ – ಆರ್‌ಎಂಆರ್‌ಸಿ ಭಾಜನವಾಗಿತ್ತು.

ಅವರು ಓಮಿಕ್ರಾನ್‌ನೊಂದಿಗೆ ಪತ್ತೆಯಾದ ಇತರೆ ರಾಜ್ಯಗಳ ಕೆಲವು ಸೇರಿದಂತೆ ಕೋವಿಡ್ ರೋಗಿಗಳ 1,000 ಕ್ಕೂ ಹೆಚ್ಚು ಮಾದರಿಗಳೊಂದಿಗೆ ಈ ಕಿಟ್ ಅನ್ನು ಪರೀಕ್ಷಿಸಿ ಸ್ಕ್ಯಾನ್ ಮಾಡಿದ್ದಾರೆ. ಪ್ರಸ್ತುತ, ಈ ಪರೀಕ್ಷಾ ಕಿಟ್‌ನ ಪರವಾನಗಿ ಪ್ರಕ್ರಿಯೆಯು ನಡೆಯುತ್ತಿದೆ ಮತ್ತು ಮುಂದಿನ ವಾರದಿಂದ ಲ್ಯಾಬ್‌ಗೆ ಲಭ್ಯವಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com