ಯುಪಿ ಪ್ಲಸ್ ಯೋಗಿ = ತುಂಬಾ ಉಪಯೋಗಿ: ಯೋಗಿ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಅವರು, "ಯುಪಿ ಪ್ಲಸ್ ಯೋಗಿ ಬಹುತ್ ಹೈ ಉಪಯೋಗಿ"....
ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಶಹಜಹಾನ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವನ್ನು ಹಾಡಿ ಹೊಗಳಿದ ಪ್ರಧಾನಿ ನರೇಂದ್ರ ಮೋದಿ ಅವರು, "ಯುಪಿ ಪ್ಲಸ್ ಯೋಗಿ ಬಹುತ್ ಹೈ ಉಪಯೋಗಿ"(ಯುಪಿ ಪ್ಲಸ್ ಯೋಗಿ = ತುಂಬಾ ಉಪಯೋಗಿ)" ಎಂದು ಶನಿವಾರ ಹೇಳಿದ್ದಾರೆ.

ಇಂದು 594 ಕಿಮೀ ಉದ್ದದ ಸುಮಾರು ರೂ. 36,230 ಕೋಟಿ ರೂ ವೆಚ್ಚದ ಗಂಗಾ ಎಕ್ಸ್‌ಪ್ರೆಸ್‌ವೇಗೆ ಉತ್ತರ ಪ್ರದೇಶದ ಶಹಜಹಾನ್‌ಪುರ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸಿದರು

ಎಕ್ಸ್‌ಪ್ರೆಸ್‌ವೇಗೆ ಶಂಕುಸ್ಥಾಪನೆ ಮಾಡಿದ ನಂತರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಯೋದಿ ಆದಿತ್ಯನಾಥ್ ಸರ್ಕಾರ ಮಾಫಿಯಾಗಳನ್ನು ತೊಡೆದುಹಾಕಲು ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಗಂಗಾ ಎಕ್ಸ್​ಪ್ರೆಸ್​ ಹೈವೇ ಉತ್ತರ ಪ್ರದೇಶದ ಅಭಿವೃದ್ಧಿಗೆ ಸಹಕಾರಿ. ಹಾಗೆ ಯುವಕರಿಗೆ ಉದ್ಯೋಗ ಪಡೆಯಲು ಬಹು ಅನುಕೂಲವಾಗುತ್ತದೆ. ಗಂಗಾ ಎಕ್ಸ್​ಪ್ರೆಸ್​ ಹೈವೇ ಕೆಲಸ ಇಂದಿನಿಂದಲೇ ಪ್ರಾರಂಭವಾಗಲಿದೆ ಎಂದು ಹೇಳಿದರು.

ಮೀರತ್, ಹಾಪುರ್, ಬುಲಂದ್‌ಶಹರ್, ಅಮ್ರೋಹಾ, ಸಂಭಾಲ್, ಬದೌನ್, ಶಹಜಹಾನ್‌ಪುರ್, ಹರ್ದೋಯಿ, ಉನ್ನಾವೋ, ರಾಯ್‌ಬರೇಲಿ, ಪ್ರತಾಪ್‌ಗಢ್ ಮತ್ತು ಪ್ರಯಾಗ್‌ರಾಜ್‌ನಲ್ಲಿರುವ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ. 600 ಕಿಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇಗೆ 36,000 ಕೋಟಿ ರೂ.ಗೂ ಹೆಚ್ಚು ವೆಚ್ಚವಾಗಲಿದೆ. ಗಂಗಾ ಎಕ್ಸ್‌ಪ್ರೆಸ್‌ವೇ ಈ ಪ್ರದೇಶದಲ್ಲಿ ಹೊಸ ಕೈಗಾರಿಕೆಗಳನ್ನು ತರುತ್ತದೆ ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು, ಮೂಲಸೌಕರ್ಯಗಳನ್ನು ಹೊಂದಿರುವ ಅತ್ಯಂತ ಆಧುನಿಕ ರಾಜ್ಯವಾಗಿ ಉತ್ತರ ಪ್ರದೇಶ ಗುರುತಿಸಲ್ಪಡುವ ಕಾಲವೇನು ದೂರವಿಲ್ಲ. ಇಲ್ಲಿ ಹೆದ್ದಾರಿಗಳ ಸಮೂಹ, ಹೊಸ ವಿಮಾನ ನಿಲ್ದಾಣಗಳು, ಹೊಸ ರೈಲು ಮಾರ್ಗಗಳು ಜನರಿಗೆ ಹಲವಾರು ಉಪಯೋಗಗಳನ್ನು ನೀಡಲಿವೆ ಎಂದು ಮಾಹಿತಿ ನೀಡಿದರು.

ಯುಪಿಯಲ್ಲಿ ಈ ಹಿಂದೆ ಸಾರ್ವಜನಿಕರ ಹಣವನ್ನು ಹೇಗೆ ಬಳಸಲಾಗಿದೆ ಎಂಬುದನ್ನು ನೀವು ನೋಡಿದ್ದೀರಿ. ಇಂದು ಉತ್ತರ ಪ್ರದೇಶದ ಹಣವನ್ನು ರಾಜ್ಯದ ಅಭಿವೃದ್ಧಿಗೆ ಬಳಸಲಾಗುತ್ತಿದೆ. ಈ ಹಿಂದೆ ತಮ್ಮ ಖಜಾನೆಯನ್ನು ತಾವೇ ತುಂಬಿಸಿಕೊಳ್ಳಲು ದೊಡ್ಡ ದೊಡ್ಡ ಯೋಜನೆಗಳನ್ನು ಕಾಗದದಲ್ಲಿ ಮಾತ್ರ ಆರಂಭಿಸಲಾಗುತ್ತಿತ್ತು ಎಂದು ಇತರೆ ಪಕ್ಷಗಳ ವಿರುದ್ಧ ಹರಿಹಾಯ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com