ಜಮ್ಮು ಮತ್ತು ಕಾಶ್ಮೀರ: 2 ಪ್ರತ್ಯೇಕ ಎನ್ಕೌಂಟರ್, 4 ಉಗ್ರರ ಹೊಡೆದುರುಳಿಸಿದ ಸೇನೆ
ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ ನಲ್ಲಿ ಭದ್ರತಾ ಪಡೆಗಳು 4 ಮಂದಿ ಉಗ್ರರನ್ನು ಹೊಡೆದುರುಳಿಸಿವೆ.
Published: 25th December 2021 07:24 PM | Last Updated: 25th December 2021 07:24 PM | A+A A-

ಭಾರತೀಯ ಸೇನೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಶನಿವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ ನಲ್ಲಿ ಭದ್ರತಾ ಪಡೆಗಳು 4 ಮಂದಿ ಉಗ್ರರನ್ನು ಹೊಡೆದುರುಳಿಸಿವೆ.
ಈ ಬಗ್ಗೆ ಕಾಶ್ಮೀರ ಪೊಲೀಸರು ಮಾಹಿತಿ ನೀಡಿದ್ದು, ಶೋಪಿಯಾನ್ ಮತ್ತು ಪುಲ್ವಾಮಾ ಜಿಲ್ಲೆಗಳಲ್ಲಿ ಈ ಎನ್ಕೌಂಟರ್ ನಡೆದಿದ್ದು, ಈ ವೇಳೆ ನಾಲ್ವರು ಉಗ್ರರು ಹತರಾಗಿದ್ದಾರೆ. ಶೋಪಿಯಾನ್‌ನಲ್ಲಿ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಉಗ್ರರನ್ನು ಸೇನೆ ಹೊಡೆದುರುಳಿಸಿದರೆ, ಪುಲ್ವಾಮಾದಲ್ಲಿ ಇಬ್ಬರು ಅಪರಿಚಿತ ಉಗ್ರರನ್ನು ಕೊಲ್ಲಲಾಗಿದೆ ಎಂದು ಸೇನೆ ಮಾಹಿತಿ ನೀಡಿದೆ.
ದಕ್ಷಿಣ ಕಾಶ್ಮೀರದ ಶೋಪಿಯಾನ್‌ನ ಚೌಗಮ್ ಗ್ರಾಮ ಪ್ರದೇಶದಲ್ಲಿ ಭಯೋತ್ಪಾದಕರು ಇರುವ ಬಗ್ಗೆ ಮಾಹಿತಿ ಬಂದ ನಂತರ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತು ವರೆದು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಶೋಧ ಕಾರ್ಯಾಚರಣೆಯ ಸಮಯದಲ್ಲಿ, ಭಯೋತ್ಪಾದಕರ ಉಪಸ್ಥಿತಿಯನ್ನು ಕಂಡುಹಿಡಿಯಲಾಯಿತು. ಅವರಿಗೆ ಶರಣಾಗಲು ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ ಸೇನಾಧಿಕಾರಿಗಳ ಮಾತಿಗೆ ಬಗ್ಗದ ಉಗ್ರರು ಗುಂಡಿನ ದಾಳಿ ನಡೆಸಿದರು. ಈ ವೇಳೆ ಸೇನೆ ಪ್ರತಿದಾಳಿ ನಡೆಸಿದ್ದು, ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದು, ಅವರ ಶವಗಳನ್ನು ಸ್ಥಳದಿಂದ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಉಗ್ರರನ್ನು ಶೋಪಿಯಾನ್‌ನ ಬ್ರರಿಪೋರಾ ನಿವಾಸಿ ಸಜಾದ್ ಅಹ್ಮದ್ ಚಕ್ ಮತ್ತು ಪುಲ್ವಾಮಾದ ಅಚಾನ್ ಲಿಟ್ಟರ್‌ನ ರಾಜಾ ಬಸಿತ್ ಯಾಕೂಬ್ ಎಂದು ಗುರುತಿಸಲಾಗಿದೆ. ಪೊಲೀಸ್ ದಾಖಲೆಗಳ ಪ್ರಕಾರ, ಇಬ್ಬರೂ ಭಯೋತ್ಪಾದಕರು ನಿಷೇಧಿತ ಭಯೋತ್ಪಾದಕ ಸಂಘಟನೆ ಎಲ್‌ಇಟಿಯೊಂದಿಗೆ ಸಂಬಂಧ ಹೊಂದಿದ್ದರು ಮತ್ತು ಹಲವಾರು ಭಯೋತ್ಪಾದನಾ ಪ್ರಕರಣಗಳಲ್ಲಿ ಭಾಗಿಯಾಗಿರುವ ಗುಂಪುಗಳ ಭಾಗವಾಗಿದ್ದರು. ಯುವಕರನ್ನು ಭಯೋತ್ಪಾದಕ ಗುಂಪಿನಲ್ಲಿ ಸೇರಿಸಿಕೊಳ್ಳುವಲ್ಲಿ ಚಕ್ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಹೇಳಿದ್ದಾರೆ.
ಇನ್ನು ಉಗ್ರರಿಂದ ಎರಡು ಎಕೆ ಸೀರೀಸ್ ರೈಫಲ್‌ಗಳು, ನಾಲ್ಕು ಎಕೆ ಮ್ಯಾಗಜೀನ್‌ಗಳು ಮತ್ತು 32 ಸುತ್ತು ಜೀವಂತ ಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತ ಪುಲ್ವಾಮಾ ಜಿಲ್ಲೆಯ ಹರ್ದುಮಿರ್, ತ್ರಾಲ್ ಪ್ರದೇಶದಲ್ಲಿ ಮತ್ತೊಂದು ಎನ್ಕೌಂಟರ್ ನಡೆದಿದ್ದು, ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಪರಿಚಿತ ಉಗ್ರರು ಹತರಾಗಿದ್ದಾರೆ. ಅವರ ಗುರುತಿಸುವಿಕೆ ಮತ್ತು ಗುಂಪು ಸಂಬಂಧವನ್ನು ಪತ್ತೆ ಮಾಡಲಾಗುತ್ತಿದೆ ಎಂದು ಅಧಿಕಾರಿ ಹೇಳಿದರು.