"ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳಿದ್ದರೆ ಪಾಸ್ಪೋರ್ಟ್ ಸಿಗಲ್ಲ''!

ವ್ಯಕ್ತಿಯೋರ್ವನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಪದೇ ಪದೇ ಕಂಡುಬಂದಲ್ಲಿ ಅಂತಹ ವ್ಯಕ್ತಿಗೆ ಇನ್ನು ಮುಂದೆ ಪಾಸ್ಪೋರ್ಟ್ ಪಡೆಯುವುದು, ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ಕಷ್ಟವಾಗಲಿದೆ. 
ಭಾರತೀಯ ಪಾಸ್ಪೋರ್ಟ್
ಭಾರತೀಯ ಪಾಸ್ಪೋರ್ಟ್

ಡೆಹ್ರಾಡೂನ್: ವ್ಯಕ್ತಿಯೋರ್ವನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ದೇಶವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು ಪದೇ ಪದೇ ಕಂಡುಬಂದಲ್ಲಿ ಅಂತಹ ವ್ಯಕ್ತಿಗೆ ಇನ್ನು ಮುಂದೆ ಪಾಸ್ಪೋರ್ಟ್ ಪಡೆಯುವುದು, ಶಸ್ತ್ರಾಸ್ತ್ರ ಪರವಾನಗಿ ಪಡೆಯುವುದು ಕಷ್ಟವಾಗಲಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ದೇಶ ವಿರೋಧಿ, ಸಮಾಜ ವಿರೋಧಿ ಪೋಸ್ಟ್ ಗಳು  ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ್ ಪೊಲೀಸರು ಇಂತಹದ್ದೊಂದು ಕ್ರಮಕ್ಕೆ ಮುಂದಾಗಿದ್ದಾರೆ. 

ರಾಜ್ಯ ಪೊಲೀಸ್ ಅಧಿಕಾರಿಗಳ ಕಾನ್ಫರೆನ್ಸ್ ನಲ್ಲಿ ಉತ್ತರಾಖಂಡ್ ಡಿಜಿಪಿ ಅಶೋಕ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ದೇಶ  ಸಾಮಾಜಿಕ ಜಾಲತಾಣಗಳಲ್ಲಿ ದೇಶವಿರೋಧಿ ಪೋಸ್ಟ್ ಹಾಕುವವರ ಬಗ್ಗೆ ಪೊಲೀಸ್ ಇಲಾಖೆ ಕಣ್ಣಿಟ್ಟಿರಲಿದೆ. ಪದೇ ಪದೇ ಅಂತಹ ಪೋಸ್ಟ್ ಗಳು ಕಂಡುಬಂದಲ್ಲಿ, ಆ ವ್ಯಕ್ತಿಯ  ಪಾಸ್ಪೋರ್ಟ್ ಗೆ ಅಥವಾ ಶಸ್ತ್ರಾಸ್ತ್ರ ಪರವಾನಗಿಗೆ ಅರ್ಜಿ ಸಲ್ಲಿಸಿದಾಗ ದಾಖಲಾತಿ ದೃಢೀಕರಣದ ವೇಳೆ ಅವುಗಳನ್ನು ಉಲ್ಲೇಖಿಸಲಾಗುತ್ತದೆ. ಇದರಿಂದಾಗಿ ಪರವಾನಗಿ ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ ಹಾಗೂ ಪಾಸ್ಪೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ತಿರಸ್ಕರಿಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. 

ಈ ಹಿಂದೆ ದೇಶವಿರೋಧಿ ಪೋಸ್ಟ್ ಗಳು ಬಂದಲ್ಲಿ ನೇರವಾಗಿ ಪ್ರಕರಣ ದಾಖಲಿಸುವ ಬದಲು ಅಂತಹ ವ್ಯಕ್ತಿಯನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತಿತ್ತು. ದೇಶವಿರೋಧಿ ಪೋಸ್ಟ್ ಗಳು ಪದೇ ಪದೇ ವ್ಯಕ್ತವಾಗುತ್ತಿದೆಯೇ ಎಂಬ ಬಗ್ಗೆ ಪೊಲೀಸ್ ಇಲಾಖೆ ಪರಿಶೀಲನೆ ನಡೆಸಲಿದೆ. 

ಈ ಕ್ರಮ ರಾಜ್ಯದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಡೆದ ಚರ್ಚೆಯ ಭಾಗವಾಗಿದೆ. ಇಷ್ಟೇ ಅಲ್ಲದೇ ಸೈಬರ್ ಕ್ರೈಮ್, ಡ್ರಗ್ ಜಾಲಗಳಲ್ಲಿ ತೊಡಗಿರುವವರ ಆಸ್ತಿ ವಶಕ್ಕೆ ಪಡೆಯುವುದಕ್ಕೂ ಸಹ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ಮುಂದಾಗಿದೆ. 

ಆದರೆ ಉತ್ತರಾಖಂಡ್ ನ ಪೊಲೀಸ್ ಇಲಾಖೆಯ ಈ ಪ್ರಸ್ತಾವನೆಯನ್ನು ಕಾನೂನು ತಜ್ಞರು ಮೂಲಭೂತ ಹಕ್ಕುಗಳಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ಎಂದು ಹೇಳಿದ್ದಾರೆ. ಉತ್ತರಾಖಂಡ್ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನ ಹಿರಿಯ ಅಡ್ವೊಕೇಟ್  ಅವತಾರ್ ಸಿಂಗ್ ರಾವತ್ ಈ ಬಗ್ಗೆ ಮಾತನಾಡಿದ್ದು, ಒಂದು ವೇಳೆ ಈ ಕ್ರಮ ದುರುಪಯೋಗವಾದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಇದು ಧಕ್ಕೆ ಉಂಟಾಗಲಿದೆ, ಕಾನೂನು ಜಾರಿ ಸಂಸ್ಥೆಗಳು ಇದನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಳ್ಳಿಹಾಕುವುದಕ್ಕೆ ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com