ಕೋವಿಡ್ ಎದುರಿಸಲು 23,123 ಕೋಟಿ ರೂ. ಪ್ಯಾಕೇಜ್ ಗೆ ಕೇಂದ್ರದ ಅನುಮೋದನೆ

ಕೋವಿಡ್ ಸಾಂಕ್ರಾಮಿಕ ಎದುರಿಸಲು ದೇಶದಲ್ಲಿ ಆರೋಗ್ಯ ಮೌಲಸೌಕರ್ಯವನ್ನು ಸುಧಾರಿಸಲು 23,123 ಕೋಟಿ ಆರ್ಥಿಕ ಪ್ಯಾಕೇಜ್ ಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ.
ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ
ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಎದುರಿಸಲು ದೇಶದಲ್ಲಿ ಆರೋಗ್ಯ ಮೌಲಸೌಕರ್ಯವನ್ನು ಸುಧಾರಿಸಲು 23,123 ಕೋಟಿ ಆರ್ಥಿಕ ಪ್ಯಾಕೇಜ್ ಗೆ ಕೇಂದ್ರ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ನೂತನ ಕೇಂದ್ರ ಸಚಿವ ಸಂಪುಟದ ಮೊದಲ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಮನ್ ಸುಖ್ ಮಾಂಡವಿಯಾ, ಮುಂದಿನ ಒಂಬತ್ತು ತಿಂಗಳು ಮಾರ್ಚ್ 2022 ರವರೆಗೆ ಪ್ಯಾಕೇಜ್ ಕಾರ್ಯಗತಗೊಳಿಸಲಾಗುವುದು. ಇದು ಎರಡನೇ ಹಂತದ ತುರ್ತು ನಿರ್ವಹಣಾ ಮತ್ತು ಆರೋಗ್ಯ ವ್ಯವಸ್ಥೆಯ ಸಿದ್ಧತಾ ಪ್ಯಾಕೇಜ್ ಆಗಿದೆ. ಈ ಹಿಂದೆ ದೇಶಾದ್ಯಂತ ಆರೋಗ್ಯ ಕೇಂದ್ರಗಳು ಮತ್ತು ಕೋವಿಡ್ ಆಸ್ಪತ್ರೆಗಳ ಸ್ಥಾಪನೆಗಾಗಿ 15 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿತ್ತು ಎಂದು ಮಾಂಡವಿಯಾ ಹೇಳಿದರು.

ಹೊಸ ಪ್ಯಾಕೇಜ್ ಅಡಿಯಲ್ಲಿ  ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ. ಪೂರೈಸಲಿದ್ದು, ರಾಜ್ಯಗಳು 8 ಸಾವಿರ ಕೋಟಿ ನೀಡಲಿವೆ. ದೇಶಾದ್ಯಂತ 736 ಜಿಲ್ಲೆಗಳ್ಳಲಿನ ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜಂಟಿ ಸಹಭಾಗಿತ್ವದಲ್ಲಿ ಯೋಜನೆ ಜಾರಿಗೊಳಿಸಲಾಗುವುದು, ಸುಮಾರು 2.4 ಲಕ್ಷ ಸಾಮಾನ್ಯ ಬೆಡ್ ಗಳು, 20 ಸಾವಿರ ಐಸಿಯು ಬೆಡ್ ಗಳು ಸ್ಥಾಪಿಸಲಾಗುವುದು, ಈ ಪೈಕಿ ಶೇ. 20 ರಷ್ಟು ವಿಶೇಷವಾಗಿ ಮಕ್ಕಳಿಗಾಗಿ ಮೀಸಲಿರಿಸಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಮಟ್ಟದಲ್ಲಿ ಆಕ್ಸಿಜನ್ ಮತ್ತು ಔಷಧಕ್ಕಾಗಿ ಸಂಗ್ರಹ ಸೌಕರ್ಯವನ್ನು ಅಭಿವೃದ್ಧಿಗೊಳಿಸಲಾಗುವುದು. ಮಕ್ಕಳ ಆರೈಕೆ ಮತ್ತು ಸೂಕ್ತ  ಮೂಲಸೌಕರ್ಯ ಅಭಿವೃದ್ಧಿಯತ್ತ ಗಮನಹರಿಸಿ, ಕೋವಿಡ್‌ನ ಆರಂಭಿಕ ತಡೆಗಟ್ಟುವಿಕೆ, ಪತ್ತೆ ಮತ್ತು ನಿರ್ವಹಣೆಗೆ ವೇಗವಾಗಿ ಆರೋಗ್ಯ ವ್ಯವಸ್ಥೆಯನ್ನು ಸನ್ನದ್ದಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ ಎಂದು ಮಾಂಡವಿಯಾ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com