ಮಾಜಿ ಆರೋಗ್ಯ ಸಚಿವ ಹರ್ಷವರ್ಧನ್ ಅವರನ್ನು ಬಲಿಪಶು ಮಾಡಲಾಯಿತೇ?: ಜನತೆ ಅಭಿಪ್ರಾಯ ಹೀಗಿದೆ...

ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಹಲವು ಮಂದಿಗೆ ಸರಿ ಕಂಡುಬಂದಿಲ್ಲ. 
ಹರ್ಷವರ್ಧನ್
ಹರ್ಷವರ್ಧನ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ ಸಚಿವ ಸಂಪುಟದಲ್ಲಿ ಜು.7 ರಂದು ಮಹತ್ವದ ಬದಲಾವಣೆಗಳಾಗಿದ್ದು, ಕೇಂದ್ರ ಆರೋಗ್ಯ ಸಚಿವರಾಗಿದ್ದ ಡಾ.ಹರ್ಷವರ್ಧನ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದು ಹಲವು ಮಂದಿಗೆ ಸರಿ ಕಂಡುಬಂದಿಲ್ಲ. 

ಐಎಎನ್ಎಸ್-ಸಿವೋಟರ್ ಸ್ನಾಪ್ ಪೋಲ್ ನಡೆಸಿದ ಸಮೀಕ್ಷೆಯಲ್ಲಿ ಶೇ.54 ರಷ್ಟು ಮಂದಿ ಹರ್ಷವರ್ಧನ್ ಅವರ ರಾಜೀನಾಮೆ ಪಡೆದ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದು, ಹರ್ಷವರ್ಧನ್ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಕೋವಿಡ್-19 ಎರಡನೇ ಅಲೆಯಲ್ಲಿ ಜನಸಮಾನ್ಯರು ಎದುರಿಸಿದ ಸಂಕಷ್ಟ, ಜೀವ ಹಾನಿಗಳಿಗೆ ಹರ್ಷವರ್ಧನ್ ಮಾತ್ರವೇ ಕಾರಣವಲ್ಲ, ಆದರೂ ಅವರನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. 1,200 ಮಂದಿ ಸಮೀಕ್ಷೆಯಲ್ಲಿ ಭಾಗವಹಿಸಿದ್ದು, ಈ ಪೈಕಿ ಶೇ.29 ರಷ್ಟು ಮಂದಿ ಹರ್ಷವರ್ಧನ್ ಅವರನ್ನು ಬಲಿಪಶುವನ್ನಾಗಿ ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಪೆಟ್ರೋಲಿಯಂ ಸಚಿವರ ಬದಲಾವಣೆಯಿಂದಾಗಿ ತೈಲ ಬೆಲೆಗಳಲ್ಲಿ ಬದಲಾವಣೆ ಸಾಧ್ಯವೇ ಎಂಬ ಪ್ರಶ್ನೆಗೆ ಶೇ.55 ರಷ್ಟು ಮಂದಿ ಇಲ್ಲ ಎಂದೂ ಶೇ.34 ರಷ್ಟು ಮಂದಿ ಬದಲಾವಣೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಪೆಟ್ರೋಲಿಯಂ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರಿಗೆ ಶಿಕ್ಷಣ ಖಾತೆಯನ್ನು ವಹಿಸಿ ಅವರ ಬಳಿಯಿದ್ದ ಖಾತೆಯನ್ನು ಹರ್ದೀಪ್ ಸಿಂಗ್ ಪುರಿಗೆ ನೀಡಲಾಗಿದೆ.

ಇನ್ನು ಶೇ.52 ರಷ್ಟು ಮಂದಿಗೆ ಪ್ರಕಾರ ಹೊಸ ಶಿಕ್ಷಣ ಸಚಿವರು ಬಂದ ನಂತರ ದೇಶದಲ್ಲಿ ಶಿಕ್ಷಣದ ಸ್ಥಿತಿ ಸುಧಾರಣೆಯಾಗಲಿದೆ ಎಂದೆನಿಸಿದರೆ ಶೇ.35 ರಷ್ಟು ಮಂದಿ ಇದನ್ನು ಒಪ್ಪಿಲ್ಲ. ಪ್ರಧಾನಿ ಮೋದಿ ಅವರ ಅಧಿಕಾರದ ಎರಡನೇ ಅವಧಿಯಲ್ಲಿ ಮೊದಲ ಬಾರಿಗೆ ದೊಡ್ಡ ಮಟ್ಟದಲ್ಲಿ ಸಚಿವ ಸಂಪುಟ ಪುನಾರಚನೆಗೊಂಡಿದ್ದು,  ಪ್ರಮುಖ ಖಾತೆಗಳನ್ನು ಹೊಂದಿದ್ದ ಹಿರಿಯ ಸಚಿವರಿಂದ ರಾಜೀನಾಮೆ ಪಡೆಯಲಾಗಿತ್ತು.

ಈ ಪೈಕಿ ಹರ್ಷವರ್ಧನ್ ಅವರೂ ಇದ್ದು, ಕೋವಿಡ್-19 ಎರಡನೇ ಅವಧಿಯಲ್ಲಿ ನಿರ್ವಹಣೆ ಸರಿ ಇಲ್ಲದ ಕಾರಣದಿಂದಾಗಿ ಅವರ ರಾಜೀನಾಮೆಯನ್ನು ಪಡೆಯಲಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಶಿಕ್ಷಣ ಸಚಿವರಾಗಿದ್ದ ರಮೇಶ್ ಪೋಖ್ರಿಯಾಲ್ ನಿಶಾಂಕ್, ಸದಾನಂದ ಗೌಡ, ಸಂತೋಷ್ ಗಂಗ್ವರ್, ರವಿಶಂಕರ್ ಪ್ರಸಾದ್, ಪ್ರಕಾಶ್ ಜಾವ್ಡೇಕರ್ ಸೇರಿದಂತೆ ಹಲವು ಮಂದಿ ಹಿರಿಯ ಸಚಿವರಿಂದ ರಾಜೀನಾಮೆ ಪಡೆಯಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com