ಅಸ್ಸಾಂನಲ್ಲಿ ಮುಂದುವರೆದ ಪೊಲೀಸ್ ಎನ್ಕೌಂಟರ್; ಮತ್ತೊಂದು ಸಾವು, ಇಬ್ಬರಿಗೆ ಗಾಯ, ಈವರೆಗೂ 13 ಅಪರಾಧಿಗಳ ಸಾವು

ಸಿಎಂ ಹಿಮಾಂತ ಬಿಸ್ವಾ ಶರ್ಮಾ ಸರ್ಕಾರದ ಅಡಿಯಲ್ಲಿ ಅಸ್ಸಾಂನಲ್ಲಿ ಮತ್ತೊಂದು ಎನ್ ಕೌಂಟರ್ ನಡೆದಿದ್ದು, ಇಂದಿನ ಎನ್ ಕೌಂಟರ್ ನಲ್ಲಿ ಓರ್ವ ಶಂಕಿತ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಗುವಾಹತಿ: ಸಿಎಂ ಹಿಮಾಂತ ಬಿಸ್ವಾ ಶರ್ಮಾ ಸರ್ಕಾರದ ಅಡಿಯಲ್ಲಿ ಅಸ್ಸಾಂನಲ್ಲಿ ಮತ್ತೊಂದು ಎನ್ ಕೌಂಟರ್ ನಡೆದಿದ್ದು, ಇಂದಿನ ಎನ್ ಕೌಂಟರ್ ನಲ್ಲಿ ಓರ್ವ ಶಂಕಿತ ಸಾವನ್ನಪ್ಪಿ, ಇಬ್ಬರು ಗಾಯಗೊಂಡಿದ್ದಾರೆ.

ಕೊಲೆ ಆರೋಪಿ ಮತ್ತು ಗಾಂಜಾ ಆರೋಪಿಗಳನ್ನು ಬಂಧಿಸುವಾಗ ಆರೋಪಿಗಳ ಮೇಲೆ ಪೊಲೀಸರು ಗುಂಡು ಹಾರಿಸಿದ್ದು, ಈ ಪೈಕಿ ಕೊಲೆ ಆರೋಪಿ ಸಾವನ್ನಪ್ಪಿದ್ದಾರೆ. ಅಂತೆಯೇ ಗುಂಡೇಟು ತಿಂದ ಗಾಂಜಾ ಆರೋಪಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನು ಈ  ವರೆಗೂ ನಡೆದ ಎನ್ಕೌಂಟರ್ ನಲ್ಲಿ ಸಾವನ್ನಪ್ಪಿದ್ದ ಆರೋಪಿಗಳ ಸಂಖ್ಯೆ 13ಕ್ಕೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ಪೊಲೀಸರು ನಡೆಸಿರುವ ಸರಣಿ ಎನ್ ಕೌಂಟರ್ ಗಳಲ್ಲಿ ಸಾವಿಗೀಡಾದ ಆರೋಪಿಗಳು ಕೊಲೆ, ಅತ್ಯಾಚಾರ, ಜಾನುವಾರುಗಳ ಕಳ್ಳಸಾಗಣೆಯಂತಹ ಗಂಭೀರ ಪ್ರಕರಣಗಳನ್ನು ಹೊತ್ತಿದ್ದರು. ಬಂಧನ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರಿಂದ ಅವರ ಮೇಲೆ ಗುಂಡು ಹಾರಿಸಲಾಗಿತ್ತು. ಈ ಪೈಕಿ 13 ಮಂದಿ  ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಬೋಡೋಲ್ಯಾಂಡ್ ಪ್ರಾದೇಶಿಕ ಪ್ರದೇಶದ (ಬಿಟಿಆರ್) ಎರಡೂ ಭಾಗವಾದ ಚಿರಾಂಗ್ ಮತ್ತು ಕೊಕ್ರಜಾರ್ ಜಿಲ್ಲೆಗಳಲ್ಲಿ ಹೆಚ್ಚಿನ ಪೊಲೀಸ್ ಎನ್ ಕೌಂಟರ್ ಗಳು ವರದಿಯಾಗಿದ್ದು, ಚಿರಾಂಗ್ ಜಿಲ್ಲೆಯಲ್ಲಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಗೃಹರಕ್ಷಕನ ಕೊಲೆ ಆರೋಪಿಯೊಬ್ಬನನ್ನು ಪೊಲೀಸರು  ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು. ಈ ವೇಳೆ 3 ಜನರನ್ನು ಬಂಧಿಸಿ ಮತ್ತು ಕೊಲೆಗೆ ಬಳಸಲಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 

ಮತ್ತೊಂದು ಘಟನೆಯಲ್ಲಿ, ಕೊಕ್ರಾಜಾರ್ ಜಿಲ್ಲಾ ಪೊಲೀಸರು ಅಸ್ಸಾಂ-ಪಶ್ಚಿಮ ಬಂಗಾಳ ಅಂತರ ರಾಜ್ಯ ಗಡಿಯ ಸಮೀಪದಲ್ಲಿರುವ ಶ್ರೀರಾಂಪುರದಲ್ಲಿ 2 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 840 ಕೆಜಿ ಗಾಂಜಾವನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆಂದು ಹೇಳಲಾದ ಟ್ರಕ್ ಅನ್ನು ತಡೆದಿದ್ದರು. ಅಂತೆಯೇ ಆರೋಪಿಗಳು  ಹೆದ್ದಾರಿಯಲ್ಲಿ ಅಡಗಿಸಿಟ್ಟಿದ್ದ ಇನ್ನೂ 10 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಾಗ, ಇಬ್ಬರು ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಬಂಧನದಿಂದ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅವರ ಮೇಲೆ ಗುಂಡು ಹಾರಿಸಿದ್ದರು. ಈ ಪೈಕಿ ಇಬ್ಬರು ಆರೋಪಿಗಳು ತೀವ್ರವಾಗಿ ಗಾಯಗೊಂಡಿದ್ದರು ಎಂದು ಕೊಕ್ರಜಾರ್ ಜಿಲ್ಲಾ  ಪೊಲೀಸರು ಟ್ವಿಟರ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com