ಕೋಲ್ಕತ್ತಾದಲ್ಲಿ ಬಂಧಿಸಲ್ಪಟ್ಟ 3 ಜೆಎಂಬಿ ಭಯೋತ್ಪಾದಕರಿಗೆ ಅಲ್-ಖೈದಾ ಜೊತೆ ಸಂಪರ್ಕ ಇರಬಹುದು: ಪೊಲೀಸರು
ಕೋಲ್ಕತ್ತಾದಲ್ಲಿ ಬಂಧಿಸಲ್ಪಟ್ಟ ಮೂವರು ಜಮಾಅತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕರು ಅಲ್-ಖೈದಾ ಮತ್ತು ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ(ಹುಜಿ)ಯೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
Published: 14th July 2021 03:09 PM | Last Updated: 14th July 2021 03:50 PM | A+A A-

ಉಗ್ರರು
ಕೋಲ್ಕತಾ: ಕೋಲ್ಕತ್ತಾದಲ್ಲಿ ಬಂಧಿಸಲ್ಪಟ್ಟ ಮೂವರು ಜಮಾಅತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ (ಜೆಎಂಬಿ) ಭಯೋತ್ಪಾದಕರು ಪಶ್ಚಿಮ ಬಂಗಾಳದಲ್ಲಿ ಭಯೋತ್ಪಾದಕ ಕೇಂದ್ರವನ್ನು ಸ್ಥಾಪಿಸುತ್ತಿದ್ದು ಇವರು ಅಲ್-ಖೈದಾ ಮತ್ತು ಹರ್ಕತ್-ಉಲ್-ಜಿಹಾದ್ ಅಲ್-ಇಸ್ಲಾಮಿ (ಹುಜಿ)ಯೊಂದಿಗೆ ಸಂಪರ್ಕ ಹೊಂದಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಅವರು ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಸಹವರ್ತಿಗಳನ್ನು ಹೊಂದಿದ್ದಾರೆ ಎಂದು ಶಂಕಿಸಲಾಗಿದೆ ಎಂದು ಕೋಲ್ಕತಾ ಪೊಲೀಸರ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಹಿರಿಯ ಅಧಿಕಾರಿ ತಿಳಿಸಿದ್ದಾರೆ.
"ಜೆಎಂಬಿ ಭಯೋತ್ಪಾಕದರು ಪಶ್ಚಿಮ ಬಂಗಾಳದಲ್ಲಿ ಕೇಂದ್ರಗಳನ್ನು ನಿರ್ಮಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರಂಭಿಕ ವಿಚಾರಣೆಯಲ್ಲಿ ತಿಳಿದುಬಂದಿದೆ. ದಕ್ಷಿಣ ಕೋಲ್ಕತ್ತಾದ ಹರಿದೇವ್ಪುರ ಪ್ರದೇಶದ ಜೆಎಂಬಿ ಕಾರ್ಯಕರ್ತರಾದ ನಜಿಯೂರ್ ರಹಮಾನ್, ರಬಿಯುಲ್ ಇಸ್ಲಾಂ ಮತ್ತು ಸಬೀರ್ ಅವರನ್ನು ಎಸ್‌ಟಿಎಫ್ ಭಾನುವಾರ ಬಂಧಿಸಿತ್ತು.
ಇವರೆಲ್ಲಾ ಬಾಂಗ್ಲಾದೇಶದ ಪ್ರಜೆಗಳಾಗಿದ್ದು ಬಂಗಾಳದಲ್ಲಿ ಬಾಡಿಗೆಗೆ ಮನೆ ಪಡೆಯಲು ನಕಲಿ ದಾಖಲೆಗಳನ್ನು ಬಳಸಿದ್ದರು. ಇವರ ಸಂಪರ್ಕಕೊಂಡಿ ಸಲೀಮ್ ಮುನ್ಶಿ ಎಂದು ಗುರುತಿಸಲ್ಪಟ್ಟಿದ್ದು, ನಜಿಯೂರ್‌ಗೆ ನಕಲಿ ಗುರುತಿನ ಚೀಟಿ ತಯಾರಿಸಲು ವೃದ್ಧೆಯೊಬ್ಬರ ಗುರುತಿನ ಚೀಟಿಯನ್ನು ಬಳಸಿದ್ದಾನೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಜಿಯೂರ್ ನಕಲಿ ಗುರುತಿನ ಚೀಟಿಯಲ್ಲಿ ಜಯರಾಮ್ ಬೈಪಾರಿಯಾಗಿ ಬದಲಾಗಿದ್ದಾನೆ. ಮುನ್ಷಿ ತನ್ನ ಸಹೋದರ ಬಾಂಗ್ಲಾದೇಶದಿಂದ ಬರುತ್ತಿದ್ದಾನೆ ಎಂಬ ನೆಪದಲ್ಲಿ ವೃದ್ಧೆಯೊಬ್ಬರಿಂದ ಗುರುತಿನ ಚೀಟಿ ಪಡೆದಿದ್ದನು. ಆಟೋರಿಕ್ಷಾ ಓಡಿಸಲು ಪರವಾನಗಿ ಪಡೆಯಲು ದಾಖಲೆಬೇಕಾಗಿತ್ತು ಎಂದು ಅಧಿಕಾರಿ ಹೇಳಿದರು.
ಈ ಮೂವರು ಭಯೋತ್ಪಾದಕರು ಕೆಲವು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಕೋಲ್ಕತ್ತಾಗೆ ಬಂದು ಮಧ್ಯಮ ವರ್ಗದ ಕಾಲೋನಿಯಲ್ಲಿ ವಾಸವಾಗಿದ್ದರು. ಜಿಹಾದಿ ವಸ್ತುಗಳು, ಉನ್ನತ ಜೆಎಂಬಿ ನಾಯಕರ ಪಟ್ಟಿಗಳು ಮತ್ತು ಇತರ ಭಯೋತ್ಪಾದಕ ಗುಂಪುಗಳಲ್ಲಿನ ಅವರ ಸಹಚರರು ಸೇರಿದಂತೆ ಹಲವಾರು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕಳೆದ ಕೆಲವು ವರ್ಷಗಳಲ್ಲಿ ಪಶ್ಚಿಮ ಬಂಗಾಳದಲ್ಲಿ ಭಾರತೀಯರು ಸೇರಿದಂತೆ ಹಲವಾರು ಜೆಎಂಬಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.
2016ರಲ್ಲಿ ಢಾಕಾದ ಜನಪ್ರಿಯ ಕೆಫೆಯೊಂದರಲ್ಲಿ ಜೆಎಂಬಿ ಭಯೋತ್ಪಾದಕ ದಾಳಿ ನಡೆಸಿತ್ತು. ಈ ದಾಳಿಯಲ್ಲಿ 17 ವಿದೇಶಿಯರು ಸೇರಿದಂತೆ 22 ಜನರು ಸಾವನ್ನಪ್ಪಿದ್ದರು. ಭಾರತದಲ್ಲಿ ತನ್ನ ಕದಂಬಬಾಹು ಚಾಚಲು ಜೆಎಂಬಿ ಪ್ರಯತ್ನಿಸುತ್ತಿದೆ ಎಂದು ಎನ್ಐಎ 2019ರಲ್ಲಿ ತಿಳಿಸಿತ್ತು.