ಕೋವಿಡ್-19 ಸೋಂಕು ಪ್ರಸರಣದ ಮಾಹಿತಿ ತಿಳಿಯಲು ಐಸಿಎಂಆರ್ ನಿಂದ ಶೀಘ್ರದಲ್ಲೇ ದೇಶಾದ್ಯಂತ ಸೆರೋ ಸರ್ವೆ: ಆರೋಗ್ಯ ಸಚಿವಾಲಯ
ದೇಶದಲ್ಲಿ ಮಾರಕ ಕೊರೋನಾ ಸೋಂಕಿನ 2ನೇ ಅಲೆಯ ಆರ್ಭಟ ತಗ್ಗಿದೆಯಾದರೂ ಸಾಂಕ್ರಾಮಿಕದ ಪ್ರಸರಣ ಕುರಿತ ಅಧ್ಯಯನಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲೇ ಐಸಿಎಂಆರ್ ಸೆರೋ ಸರ್ವೆ ನಡೆಸಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
Published: 11th June 2021 07:45 PM | Last Updated: 11th June 2021 07:45 PM | A+A A-

ಸೆರೋ ಸರ್ವೆ (ಸಂಗ್ರಹ ಚಿತ್ರ)
ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ಸೋಂಕಿನ 2ನೇ ಅಲೆಯ ಆರ್ಭಟ ತಗ್ಗಿದೆಯಾದರೂ ಸಾಂಕ್ರಾಮಿಕದ ಪ್ರಸರಣ ಕುರಿತ ಅಧ್ಯಯನಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸಲು ಶೀಘ್ರದಲ್ಲೇ ಐಸಿಎಂಆರ್ ಸೆರೋ ಸರ್ವೆ ನಡೆಸಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ಇತ್ತೀಚೆಗಷ್ಟೇ ಭಾರತದಲ್ಲಿ ಮಾರಕ ಕೊರೋನಾ ವೈರಸ್ ಸಾಂಕ್ರಾಮಿಕದ 2ನೇ ಅಲೆ ಆರ್ಭಟ ಮೆರೆದಿತ್ತು. ಕಳೆದೊಂದು ವಾರದಿಂದ ಈ ಅಬ್ಬರ ತಗ್ಗಿದ್ದು, ಸತತ 55ಕ್ಕೂ ಹೆಚ್ಚು ದಿನಗಳ ಬಳಿಕ ಇದೇ ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ 1 ಲಕ್ಷಕ್ಕಿಂತ ಕಡಿಮೆಯಾಗಿದೆ. ಹೀಗಾಗಿ ಕೇಂದ್ರ ಆರೋಗ್ಯ ಇಲಾಖೆ ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಹಾಗೂ ಜನರಲ್ಲಿ ಪ್ರತಿಕಾಯಗಳು ಎಷ್ಟರ ಮಟ್ಟಿಗೆ ಉತ್ಪತ್ತಿಯಾಗಿವೆ ಎಂಬುದನ್ನು ತಿಳಿದುಕೊಳ್ಳಲು ಐಸಿಎಂಆರ್ ದೇಶಾದ್ಯಂತ ಸೆರೋ ಸರ್ವೆ ನಡೆಸಲಿದೆ ಎಂದು ಮಾಹಿತಿ ನೀಡಿದೆ.
ಇದನ್ನೂ ಓದಿ: ಶೇ.60ಕ್ಕಿಂತಲೂ ಕಡಿಮೆ ಆರೋಗ್ಯ ಕಾರ್ಯಕರ್ತರಿಗೆ ಮಾತ್ರ ಪೂರ್ಣ ಪ್ರಮಾಣದ ಕೋವಿಡ್ ಲಸಿಕೆ: ಕೇಂದ್ರ ಸರ್ಕಾರ ತೀವ್ರ ಕಳವಳ
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಇಲಾಖೆಯ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಆರೋಗ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, 'ದೇಶದಲ್ಲಿ ಕೊರೊನಾ ಪ್ರಕರಣಗಳ ಒಟ್ಟು ಸಂಖ್ಯೆ ಶೇ 70ರಷ್ಟು ಕಡಿಮೆಯಾಗಿದೆ. ದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಒಟ್ಟು ಸೋಂಕಿತರ ಸಂಖ್ಯೆ ಕಳೆದ ನಾಲ್ಕು ದಿನಗಳಿಂದ ಒಂದು ಲಕ್ಷಕ್ಕೂ ಕಡಿಮೆಯಾಗಿದೆ. ಭಾರತದ 196 ಜಿಲ್ಲೆಗಳಲ್ಲಿ 100ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ. ದೇಶಾದ್ಯಂತ ಹೊಸ ಪ್ರಕರಣಗಳ ಪತ್ತೆ ಕಡಿಮೆಯಾಗಿದ್ದು, ಸೋಂಕಿತರು ಗುಣಮುಖರಾಗುವ ಪ್ರಮಾಣವೂ ಹೆಚ್ಚಾಗುತ್ತಿದೆ. ದೇಶದಲ್ಲಿ ಸೋಂಕಿತರ ರಿಕವರಿ ರೇಟ್ ಶೇ 94.9ರಷ್ಟು ಇದೆ. 4 ದಿನಗಳಿಂದ ಪಾಸಿಟಿವಿಟಿ ರೇಟ್ ಶೇ.5ಕ್ಕಿಂತ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಕೋವಿಡ್-19: 'ಕೋವ್ಯಾಕ್ಸಿನ್' ತುರ್ತು ಬಳಕೆಗೆ ಅಮೆರಿಕಾ ಎಫ್ ಡಿಎ ಅನುಮತಿ ನಿರಾಕರಣೆ!
ಐಸಿಎಂಆರ್ ನಿಂದ ಸೆರೋ ಸರ್ವೆ
ಇದೇ ವೇಳೆ ಜನರಲ್ಲಿ ಪ್ರತಿಕಾಯಗಳು ಎಷ್ಟರಮಟ್ಟಿಗೆ ಉತ್ಪತ್ತಿಯಾಗಿವೆ ಎಂಬುದನ್ನು ತಿಳಿದುಕೊಳ್ಳಲು ರಾಷ್ಟ್ರೀಯ ಸೆರೊ ಸಮೀಕ್ಷೆ ಇದೇ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆಯಿದೆ. ರಾಜ್ಯಗಳು ಸಹ ರಾಜ್ಯವಾರು ಸೆರೊ ಸರ್ವೆ ನಡೆಸಬೇಕು ಎಂದು ನೀತಿ ಆಯೋಗದ ಸದಸ್ಯ ವಿ.ಕೆ.ಪೌಲ್ ತಿಳಿಸಿದರು. ಇದೇ ವೇಳೆ ಕಳೆದ ಮೇ 7ರಂದು ಕೊರೊನಾ ಸೋಂಕು ಅತ್ಯಂತ ಹೆಚ್ಚಿತ್ತು. ಅಲ್ಲಿಂದಾಚೆಗೆ ಸೋಂಕು ಸತತವಾಗಿ ಕಡಿಮೆಯಾಗುತ್ತಿದೆ. ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ 2ನೇ ಡೋಸ್ ನೀಡಲು ರಾಜ್ಯಗಳು ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕೋವ್ಯಾಕ್ಸಿನ್ ಗೆ ತುರ್ತುಬಳಕೆಗೆ ಅನುಮತಿ ನಿರಾಕರಣೆ: ಎಫ್ ಡಿಎ ನಿರ್ಧಾವನ್ನು ಗೌರವಿಸುತ್ತೇವೆ
ಅಂತೆಯೇ ಭಾರತ್ ಬಯೋಟೆಕ್‌ನ ಕೋವಿಡ್-19 ಲಸಿಕೆ ಕೊವಾಕ್ಸಿನ್‌ಗೆ ತುರ್ತು ಬಳಕೆಯ ಅನುಮತಿ (ಇಯುಎ) ನಿರಾಕರಿಸಿರುವ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ಕುರಿತು ಆರೋಗ್ಯ ಸಚಿವಾಲಯ, ನಾವು ಪ್ರತಿ ದೇಶದ ನಿಯಂತ್ರಣ ವ್ಯವಸ್ಥೆಯನ್ನು ಗೌರವಿಸುತ್ತೇವೆ, ಆದರೆ ಇದು ಭಾರತದ ಲಸಿಕೆ ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪೌಲ್ ಅಭಿಪ್ರಾಯಪಟ್ಟರು.