ಛತ್ತೀಸ್ ಘಡ: ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲ್ ಹತ, ಶಸ್ತ್ರಾಸ್ತ್ರ ವಶಕ್ಕೆ
ಛತ್ತೀಸ್ ಘಡದಲ್ಲಿ ಇಂದು ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲರೊಬ್ಬರು ಹತರಾಗಿದ್ದು, ಎಕೆ 47 ಬಂದೂಕು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
Published: 18th June 2021 02:28 PM | Last Updated: 18th June 2021 04:28 PM | A+A A-

ನಕ್ಸಲ್ ಎನ್ ಕೌಂಟರ್
ರಾಯ್ ಪುರ: ಛತ್ತೀಸ್ ಘಡದಲ್ಲಿ ಇಂದು ನಡೆದ ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಮಹಿಳಾ ನಕ್ಸಲರೊಬ್ಬರು ಹತರಾಗಿದ್ದು, ಎಕೆ 47 ಬಂದೂಕು ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಛತ್ತೀಸ್ ಘಡದ ಬಸ್ತಾರ್ ಜಿಲ್ಲೆಯ ದಟ್ಟಾರಣ್ಯದಲ್ಲಿ ಇಂದು ಬೆಳಗ್ಗೆ ನಕ್ಸಲರ ಇರುವಿಕೆ ಕುರಿತು ಮಾಹಿತಿ ಪಡೆದ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿದವು. ಈ ವೇಳೆ ಭದ್ರತಾ ಪಡೆಗಳು ಆಗಮಿಸುತ್ತಿದ್ದಂತೆಯೇ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದು, ಭದ್ರತಾಪಡೆಗಳೂ ಕೂಡ ಪ್ರತಿದಾಳಿ ನಡೆಸಿವೆ. ಈ ವೇಳೆ ಮಹಿಳಾ ನಕ್ಸಲರೊಬ್ಬರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಸ್ತಾರ್ ಜಿಲ್ಲೆಯ ಚಂದಮೆಟಾ-ಪ್ಯಾರ್ಭಟ್ ಗ್ರಾಮಗಳ ನಡುವಿನ ದಟ್ಟಾರಣ್ಯದಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8ಗಂಟೆ ಸುಮಾರಿನಲ್ಲಿ ಈ ಎನ್ ಕೌಂಟರ್ ನಡೆದಿದ್ದು, ಈ ವೇಳೆ ಮಹಿಳಾ ನಕ್ಸಲ್ ಮೃತರಾಗಿದ್ದಾರೆ. ಅಂತೆಯೇ ಘಟನಾ ಸ್ಥಳದಲ್ಲಿ ಎಕೆ 47 ಬಂದೂಕು, ಪಿಸ್ತೂಲ್ ಗಳು, ಬುಲೆಟ್ ಮ್ಯಾಗಜಿನ್ ಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ. ಬಸ್ತಾರ್, ದಂತೇವಾಡಾ ಮತ್ತು ಸುಕ್ಮಾ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್‌ಜಿ) ಘಟಕ ಮತ್ತು ಸಿಆರ್ಪಿಎಫ್ 80 ನೇ ಬೆಟಾಲಿಯನ್ ನ ಸಿಬ್ಬಂದಿಗಳು ಈ ಜಂಟಿ ಕಾರ್ಯಾಚರಣೆ ನಡೆಸಿದರು ಎಂದು ಬಸ್ತಾರ್ ರೇಂಜ್ ನ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಸುಂದರರಾಜ್ ಪಿ ಹೇಳಿದ್ದಾರೆ.
ಮೃತ ಮಹಿಳಾ ನಕ್ಸಲ್ ನ ಗುರುತು ಪತ್ತೆ ಇನ್ನಷ್ಟೇ ಆಗಬೇಕಿದೆ ಎಂದು ಅವರು ಮಾಹಿತಿ ನೀಡಿದರು.