ತಮಿಳುನಾಡಿನ ಆರ್ಥಿಕ ಪುನಶ್ಚೇತನ ಸಲಹಾ ಸಮಿತಿಯಲ್ಲಿ ನೋಬೆಲ್ ಪುರಸ್ಕೃತ ಎಸ್ತರ್ ಡುಫ್ಲೊ, ರಘುರಾಮ್ ರಾಜನ್!
ತಮಿಳುನಾಡಿನ ಆರ್ಥಿಕ ಪುನಶ್ಚೇತನಕ್ಕೆ ವಿಶ್ವದ ಅಗ್ರಗಣ್ಯ ಆರ್ಥಿಕ ತಜ್ಞರ ನೆರವು, ಸಲಹೆಗಳನ್ನು ಪಡೆಯುವುದಕ್ಕೆ ಡಿಎಂಕೆ ನೇತೃತ್ವದ ಸರ್ಕಾರ ಮುಂದಾಗಿದೆ.
Published: 21st June 2021 03:14 PM | Last Updated: 21st June 2021 03:38 PM | A+A A-

ರಘುರಾಮ್ ರಾಜನ್ (ಸಂಗ್ರಹ ಚಿತ್ರ)
ಚೆನ್ನೈ: ತಮಿಳುನಾಡಿನ ಆರ್ಥಿಕ ಪುನಶ್ಚೇತನಕ್ಕೆ ವಿಶ್ವದ ಅಗ್ರಗಣ್ಯ ಆರ್ಥಿಕ ತಜ್ಞರ ನೆರವು, ಸಲಹೆಗಳನ್ನು ಪಡೆಯುವುದಕ್ಕೆ ಡಿಎಂಕೆ ನೇತೃತ್ವದ ಸರ್ಕಾರ ಮುಂದಾಗಿದೆ.
ರಾಜ್ಯದ 16 ನೇ ಶಾಸನಸಭೆಯನ್ನುದ್ದೇಶಿಸಿ ಮಾತನಾಡಿರುವ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸರ್ಕಾರದ ಈ ನಿರ್ಧಾರವನ್ನು ಘೋಷಿಸಿದ್ದು, ತಮಿಳುನಾಡು ಸರ್ಕಾರ ಆರ್ಥಿಕ ಪುನಶ್ಚೇತನಕ್ಕಾಗಿ ರಚನೆ ಮಾಡಲಾಗಿರುವ ಆರ್ಥಿಕ ಸಲಹಾ ಸಮಿತಿಯಲ್ಲಿ ನೊಬೆಲ್ ಪ್ರಶಸ್ತಿ ಪುರಸ್ಕೃತರಾದ, ಅಮೆರಿಕದ ಎಂಐಟಿಯ ಪ್ರೊಫೆಸರ್ ಎಸ್ತರ್ ಡುಫ್ಲೊ, ಮಾಜಿ ಆರ್ ಬಿಐ ಗವರ್ನರ್ ರಘುರಾಮ್ ರಾಜನ್, ಭಾರತ ಸರ್ಕಾರದ ಮಾಜಿ ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ಸುಬ್ರಹ್ಮಣಿಯನ್, ಅಭಿವೃದ್ಧಿ ಆರ್ಥಿಕ ತಜ್ಞ ಪ್ರೊಫೆಸರ್ ಜೀನ್ ಡ್ರೀಜ್, ಮಾಜಿ ಕೇಂದ್ರ ಹಣಕಾಸು ಕಾರ್ಯದರ್ಶಿ ಡಾ. ಎಸ್. ನಾರಾಯಣ್ ಇರಲಿದ್ದಾರೆ.
"ಈ ಸರ್ಕಾರ ತಮಿಳುನಾಡನ್ನು ಸ್ವಾಭಿಮಾನ, ಸಬಲ ನಾಗರಿಕರ, ಎಲ್ಲಾ ರೀತಿಯಲ್ಲೂ ಸಮೃದ್ಧವಾಗಿ ನಿರ್ಮಿಸುವ ತಂತೈ ಪೆರಿಯಾರ್ ಕಲ್ಪನೆಯ ಸಮಾಜದ ರಾಜ್ಯವನ್ನಾಗಿ ಮಾಡುವುದಕ್ಕೆ ನಿರ್ಧರಿಸಿದೆ ಎಂದು ರಾಜ್ಯಪಾಲರು ಹೇಳಿದ್ದಾರೆ.
ಬಲಿಷ್ಠ ರಾಜ್ಯಗಳಿಗೆ ಬಲಿಷ್ಠ ಒಕ್ಕೂಟಗಳ ಸೃಷ್ಟಿಯ ಅಗತ್ಯವಿದೆ. ರಾಜ್ಯಗಳ ಹಕ್ಕುಗಳ ರಕ್ಷಣೆಗೆ ಹಾಗೂ ಇಂತಹ ಹಕ್ಕುಗಳಿಗೆ ಹಸ್ತಕ್ಷೇಪ ಮಾಡುವುದನ್ನು ನಮ್ಮ ಸರ್ಕಾರ ವಿರೋಧಿಸುತ್ತದೆ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ. ಇದೇ ವೇಳೆ ರಾಜ್ಯದಲ್ಲಿ ಲೋಕಾಯುಕ್ತ ವ್ಯವಸ್ಥೆಯನ್ನೂ ಬಲಿಷ್ಠಗೊಳಿಸಿ, ಪುನಶ್ಚೇತನ ನೀಡುವ ಭರವಸೆಯನ್ನೂ ಸರ್ಕಾರ ನೀಡಿದೆ.