ಗರ್ಭಿಣಿಯರಿಗೆ ಕೊರೋನಾ ಲಸಿಕೆ: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ

ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಆರೋಗ್ಯ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಗು ಮತ್ತು ತಾಯಿ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯ ಎಂದು ಹೇಳಲಾಗಿದೆ.
ಕೋವಿಡ್ ಲಸಿಕೆ ಮತ್ತು ಗರ್ಭಿಣಿ ಮಹಿಳೆ
ಕೋವಿಡ್ ಲಸಿಕೆ ಮತ್ತು ಗರ್ಭಿಣಿ ಮಹಿಳೆ

ನವದೆಹಲಿ: ಗರ್ಭಿಣಿಯರಿಗೆ ಕೊರೊನಾ ಲಸಿಕೆ ನೀಡುವ ಸಂಬಂಧ ಆರೋಗ್ಯ ಸಚಿವಾಲಯ ಸೋಮವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಗು ಮತ್ತು ತಾಯಿ ಆರೋಗ್ಯ ದೃಷ್ಟಿಯಿಂದ ಲಸಿಕೆ ಕಡ್ಡಾಯ ಎಂದು ಹೇಳಲಾಗಿದೆ.

ಮಾರ್ಗಸೂಚಿ ಬಿಡುಗಡೆ ಮಾಡಿರುವ ಕೇಂದ್ರ ಆರೋಗ್ಯ ಸಚಿವಾಲಯ, ಗರ್ಭಿಣಿಯರು ಕೋವಿನ್ ಪೋರ್ಟಲ್ ಮೂಲಕ ಹೆಸರು ನೋಂದಾಯಿಸಬಹುದು ಅಥವಾ ನೇರ ಕೊರೊನಾ ಲಸಿಕೆ ಕೇಂದ್ರಗಳಿಗೆ ಹೋಗಿ ಅಲ್ಲಿ ಹೆಸರು ನೋಂದಾಯಿಸಿ ಲಸಿಕೆ ಪಡೆಯಬಹುದು ಎಂದು ಹೇಳಿದೆ.  ಗರ್ಭಿಣಿಯರಿಗೆ ಕೊರೊನಾ  ಲಸಿಕೆಗಳನ್ನು ನೀಡಬಹುದು. ಅವರ ಆರೋಗ್ಯ ದೃಷ್ಟಿಯಿಂದ ಲಸಿಕೆ ನೀಡುವುದು ಅವಶ್ಯಕ ಕೂಡ ಎಂದು ಎರಡು ದಿನಗಳ ಹಿಂದೆ ಸಚಿವಾಲಯ ಸ್ಪಷ್ಟನೆ ನೀಡಿತ್ತು.

ಮುನ್ನೆಚ್ಚರಿಕೆ ಮತ್ತು ಸೋಂಕು ಅಪಾಯ ತಪ್ಪಿಸಲು ಕಡ್ಡಾಯ ಲಸಿಕೆ ಅನಿವಾರ್ಯ
ಬಹುತೇಕ ಗರ್ಭಿಣಿಯರಲ್ಲಿ ಲಕ್ಷಣರಹಿತ ಸೋಂಕು ಕಾಣಿಸಿಕೊಳ್ಳಬಹುದು ಅಥವಾ ಸಣ್ಣ ಪ್ರಮಾಣದಲ್ಲಿ ಸೋಂಕಿನ ಲಕ್ಷಣಗಳು ಗೋಚರಿಸಬಹುದು. ಇದನ್ನು ನಿರ್ಲಕ್ಷಿಸಿದರೆ ಮಗುವಿನ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ವಹಿಸಿ ಲಸಿಕೆ ಪಡೆದುಕೊಳ್ಳುವುದು ಅವಶ್ಯಕ ಎಂದು ಮಾರ್ಗಸೂಚಿಯಲ್ಲಿ  ಹೇಳಲಾಗಿದೆ. 

ಲಸಿಕೆ ಸಂಪೂರ್ಣ ಸುರಕ್ಷಿತ
ಲಸಿಕೆ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಹುಟ್ಟಲಿರುವ ಮಗುವನ್ನು ಈ ವೈರಸ್‌ನಿಂದ ರಕ್ಷಿಸಬಹುದು. ಈ ಲಸಿಕೆ ಗರ್ಭಿಣಿ ಮಹಿಳೆಯರಿಗೆ ಇತರ ಜನರಂತೆ ಕರೋನಾವೈರಸ್ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಸಂಪೂರ್ಣವಾಗಿ ಸುರಕ್ಷಿತವಾಗಿರುವುದರಿಂದ, ಗರ್ಭಿಣಿಯರಿಗೆ ನೀಡಲಾದ  ಮಾರ್ಗಸೂಚಿಗಳಲ್ಲಿ ಲಸಿಕೆ ನೀಡುವಂತೆ ಸೂಚಿಸಲಾಗಿದೆ.

ಕುಟುಂಬಕ್ಕೆ ಮಾಹಿತಿ ನೀಡುವ ಮಾರ್ಗಸೂಚಿ
ಮುಂಚೂಣಿ ಕಾರ್ಯಕರ್ತರು ಅಥವಾ ವ್ಯಾಕ್ಸಿನೇಟರ್ ಗಳು ಗರ್ಭಿಣಿಯರಿಗೆ ಲಸಿಕೆ ಸಂಬಂಧ, ಲಸಿಕೆಯ ಲಭ್ಯತೆ, ಮೌಲ್ಯ ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಸಲಹೆ ನೀಡಬೇಕಾಗಿದೆ. ಇದು ನಿಮಗೆ ಅಂದರೆ ಗರ್ಭಿಣಿ ಮಹಿಳೆಯರಿಗೆ ಲಸಿಕೆ ಕುರಿತ ಭಯವನ್ನು ಹೋಗಲಾಡಿಸುತ್ತದೆ. ಲಸಿಕೆ ಕುರಿತ ಶಿಕ್ಷಣ ಮತ್ತು ಬೆಂಬಲ  ನೀಡಬೇಕಾದ ಮಾಹಿತಿಯನ್ನು ಒದಗಿಸುತ್ತದೆ, ಇದರಿಂದಾಗಿ ಅವರು ಕೋವಿಡ್-19 ಲಸಿಕೆ ಪಡೆಯುವ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳಬಹುದು. ಗರ್ಭಿಣಿ ಮಹಿಳೆಯರಲ್ಲಿ ಕೋವಿಡ್-19 ವ್ಯಾಕ್ಸಿನೇಷನ್‌ಗೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಗರ್ಭಿಣಿ ಮಹಿಳೆಯರಿಗೆ ಮತ್ತು ಅವರ  ಕುಟುಂಬಗಳಿಗೆ ತಿಳಿಸಲು ಮುಂಚೂಣಿ ಕೆಲಸಗಾರರಿಗೆ ಸುಲಭವಾಗುವಂತೆ ಟಿಪ್ಪಣಿಯನ್ನು ಪ್ರಶ್ನೆಗಳು-ಉತ್ತರಗಳ ರೂಪದಲ್ಲಿ ರಚಿಸಲಾಗಿದೆ.

ಮಧುಮೇಹಿಗಳು, ರಕ್ತದೊತ್ತಡ ಇರುವವರು ಜಾಗೃತರಾಗಿರಬೇಕು
ಇದುವರೆಗಿನ ಪ್ರಕರಣಗಳನ್ನು ಗಮನಿಸಿದಾಗ, ಸೋಂಕಿಗೆ ತುತ್ತಾದ ಗರ್ಭಿಣಿಯರಲ್ಲಿ ಶೇ.80ರಷ್ಟು ಮಹಿಳೆಯರಿಗೆ ತೀವ್ರತರ ಸಮಸ್ಯೆಗಳು ಕಂಡುಬಂದಿಲ್ಲ. ಆಸ್ಪತ್ರೆಗೆ ದಾಖಲಾಗದೇ ಗುಣಮುಖರಾದವರ ಸಂಖ್ಯೆ ಹೆಚ್ಚಿದೆ. ಕೆಲವು ಪ್ರಕರಣಗಳು ಗಂಭೀರ ಮಟ್ಟ ತಲುಪಿವೆ. ಹೀಗಾಗಿ ಆರೋಗ್ಯದಲ್ಲಿ ಅಲ್ಪ ಏರುಪೇರು  ಕಂಡರೂ ಆಸ್ಪತ್ರೆಗೆ ದಾಖಲಾಗುವುದು ಅವಶ್ಯಕವಾಗುತ್ತದೆ. ಅಧಿಕ ರಕ್ತದೊತ್ತಡ, ಮಧುಮೇಹ, 35 ವರ್ಷ ಮೇಲ್ಪಟ್ಟವರು ಜಾಗೃತವಾಗಿರಬೇಕು. ಅಧಿಕ ರಕ್ತದೊತ್ತಡ, ಸ್ಥೂಲಕಾಯತೆ, 35 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಸಿನ ವೈದ್ಯಕೀಯ ಪರಿಸ್ಥಿತಿಗಳನ್ನು ಹೊಂದಿರುವ ಗರ್ಭಿಣಿ ಮಹಿಳೆಯರು ಕೋವಿಡ್-19 ನಿಂದ  ತೀವ್ರ ಅನಾರೋಗ್ಯದ ಅಪಾಯವನ್ನು ಎದುರಿಸುತ್ತಾರೆ. 

ಅದಕ್ಕಾಗಿಯೇ ಅವರು ಕೋವಿಡ್ -19 ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಲಸಿಕೆ ಪಡೆಯುವುದು ಮುಖ್ಯವಾಗಿದೆ.

ಹುಟ್ಟುವ ಮಗುವಿನ ಮೇಲೂ ಪರಿಣಾಮ
ಶೇ.95 ಕ್ಕಿಂತಲೂ ಹೆಚ್ಚಿನ ಪ್ರಕರಣಗಳಲ್ಲಿ, ಕೋವಿಡ್-ಪಾಸಿಟಿವ್ ತಾಯಂದಿರ ಮಕ್ಕಳ ಆರೋಗ್ಯವು ಜನನದ ಸಮಯದಲ್ಲಿ ಉತ್ತಮವಾಗಿರುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ, ಗರ್ಭಾವಸ್ಥೆಯಲ್ಲಿ ಕೋವಿಡ್ ಸೋಂಕಿನಿಂದಾಗಿ ಪ್ರಬುದ್ಧ ಪೂರ್ವ ಹೆರಿಗೆಯ ಸ್ಥಿತಿ ಕಂಡು ಬಂದಿದೆ. ಅಂತಹ ಮಕ್ಕಳ ತೂಕವು 2.5  ಕೆಜಿಗಿಂತ ಕಡಿಮೆಯಿರಬಹುದು ಎಂದು ಹೇಳಲಾಗಿದೆ.

ಹೆರಿಗೆಯಾದ ಕೂಡಲೇ ಲಸಿಕೆ 
ಒಂದು ವೇಳೆ ಪ್ರಸ್ತುತ ಗರ್ಭಾವಸ್ಥೆಯಲ್ಲಿ ಮಹಿಳೆಗೆ ಕೋವಿಡ್-19 ಸೋಂಕು ತಗುಲಿದರೆ, ಹೆರಿಗೆಯಾದ ಕೂಡಲೇ ಆಕೆಗೆ ಲಸಿಕೆ ನೀಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. 

ಕೋವಿಡ್-19 ಸೋಂಕನ್ನು ಹರಡದಂತೆ ತಮ್ಮನ್ನು ಮತ್ತು ಸುತ್ತಮುತ್ತಲಿನವರನ್ನು ರಕ್ಷಿಸಲು, ಗರ್ಭಿಣಿ ಮಹಿಳೆ ಮತ್ತು ಆಕೆಯ ಕುಟುಂಬ ಸದಸ್ಯರು ಡಬಲ್ ಮಾಸ್ಕ್ ಧರಿಸುವುದು, ಆಗಾಗ್ಗೆ ಕೈಗಳನ್ನು ತೊಳೆದುಕೊಳ್ಳುವುದು.  ದೈಹಿಕ ಅಂತರವನ್ನು ಕಾಪಾಡಿಕೊಳ್ಳುವುದು ಮತ್ತು ಕಿಕ್ಕಿರಿದ ಸ್ಥಳಗಳನ್ನು ತಪ್ಪಿಸುವುದು  ಮುಂತಾದ ಸೂಕ್ತ ನಡವಳಿಕೆಯನ್ನು ಅಭ್ಯಾಸ ಮಾಡಬೇಕು ಎಂದು ಹೇಳಲಾಗಿದೆ. ಎಲ್ಲಾ ಗರ್ಭಿಣಿಯರು ಕೋ-ವಿನ್ ಪೋರ್ಟಲ್‌ನಲ್ಲಿ ತಮ್ಮನ್ನು ನೋಂದಾಯಿಸಿಕೊಳ್ಳಬೇಕು ಅಥವಾ ಕೋವಿಡ್-19 ವ್ಯಾಕ್ಸಿನೇಷನ್ ಕೇಂದ್ರದಲ್ಲಿ ತಮ್ಮನ್ನು ತಾವು ನೋಂದಾಯಿಸಿಕೊಂಡು ಲಸಿಕೆ ಪಡೆಯಬೇಕು ಎಂದು ಹೇಳಲಾಗಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com