ಕೊರೋನಾ ತಡೆ ಸಲಹೆ, ಅಪಾಯದ ಬಗ್ಗೆ ಶೇ.90 ಮಂದಿಗೆ ಅರಿವು, ಆದರೆ ಶೇ.46 ಮಂದಿಯಿಂದ ಮಾತ್ರ ನಿಯಮ ಪಾಲನೆ!

ವಿವಿಧ ರೂಪಾಂತರಗಳನ್ನು ಹೊಂದುತ್ತಿರುವ ಕೊರೋನಾದಿಂದ ದೇಶದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೂ ಬಹುತೇಕ ಜನರು ಅಗತ್ಯವಿರುವಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. 
ಮಾಸ್ಕ್ ಧರಿಸಿರುವವರು (ಸಂಗ್ರಹ ಚಿತ್ರ)
ಮಾಸ್ಕ್ ಧರಿಸಿರುವವರು (ಸಂಗ್ರಹ ಚಿತ್ರ)

ನವದೆಹಲಿ: ವಿವಿಧ ರೂಪಾಂತರಗಳನ್ನು ಹೊಂದುತ್ತಿರುವ ಕೊರೋನಾದಿಂದ ದೇಶದಲ್ಲಿ ಸೋಂಕು ಹಾಗೂ ಸಾವಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಆದರೂ ಬಹುತೇಕ ಜನರು ಅಗತ್ಯವಿರುವಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. 

ಕೊರೋನಾ ಕುರಿತ ಜನಜಾಗೃತಿ ಹಾಗೂ ಜನ ನಿಯಮಗಳನ್ನು ಪಾಲಿಸುತ್ತಿರುವುದರ ಬಗ್ಗೆ ಏಕ್ ದೇಶ್ ನ ಭಾಗವಾಗಿರುವ ಅಪ್ನಾ ಮಾಸ್ಕ್ ಅಧ್ಯಯನ ನಡೆಸಿದ್ದು, ಕೊರೋನಾ ತಡೆಗೆ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿ, ಅಪಾಯದ ಬಗ್ಗೆ ದೇಶದ ಶೇ.90 ರಷ್ಟು ಮಂದಿಗೆ ಸ್ಪಷ್ಟ ಅರಿವಿದೆ. ಆದರೆ ಭಾರತದಲ್ಲಿ ಮಾಸ್ಕ್ ಧರಿಸುತ್ತಿರುವವರು ಶೇ.44 ರಷ್ಟು ಮಂದಿಯಷ್ಟೇ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

ಸಾವಿನ ಸಂಖ್ಯೆ ಹೆಚ್ಚುತ್ತಿದ್ದರೂ, ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದರೂ, ಕೊರೋನಾದ ಅಪಾಯಗಳ ಬಗ್ಗೆ ಅರಿವಿದ್ದರೂ ಹಲವು ಮಂದಿ ನಿಯಮಗಳನ್ನು ಪಾಲಿಸುತ್ತಿಲ್ಲ. 

ಮತ್ತೆ ಕೆಲವರು ಮಾಸ್ಕ್ ನ್ನು ಸರಿಯಾಗಿ ಧರಿಸುವ ಬದಲು "ಗಲ್ಲದ ರಕ್ಷಣೆ"ಗಾಗಿ ಬಳಸುವಂತೆ ಹಾಕಿಕೊಳ್ಳುತ್ತಿದ್ದು ತಮ್ಮ ಸುರಕ್ಷತೆ ಹಾಗೂ ಬೇರೆಯವರ ಸುರಕ್ಷತೆಯನ್ನೂ ನಿರ್ಲಕ್ಷ್ಯಿಸುತ್ತಿದ್ದಾರೆ. 

ಈ ರೀತಿ ಅರಿವಿದ್ದೂ ನಿರ್ಲಕ್ಷ್ಯ ತೋರುವವರಲ್ಲಿ ಸಮಾಜವಿರೋಧಿ, ಸ್ವಾರ್ಥ, ಛಿದ್ರಮನಸ್ಕ (ಸ್ಕಿಜೋಟೈಪಲ್ ಅಸ್ವಸ್ಥತೆ)ಯ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಕೊಲಂಬಿಯಾ ಏಷ್ಯಾ, ಗುರುಗ್ರಾಮದ ಕ್ಲಿನಿಕಲ್ ಸೈಕಾಲಜಿಸ್ಟ್ ಡಾ.ಶ್ವೇತಾ ಶರ್ಮಾ ಹೇಳಿದ್ದಾರೆ. "ಈ ರೀತಿಯ ವ್ಯಕ್ತಿತ್ವದವರು ಸಾಮಾನ್ಯವಾದ ನಿಯಮಗಳನ್ನು ಪಾಲಿಸುವುದಿಲ್ಲ ಹಾಗೂ ಹೇಳಿದ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತಾರೆ" ಎಂದು ಶ್ವೇತಾ ಶರ್ಮಾ ಹೇಳಿದ್ದಾರೆ. 

ಮತ್ತೆ ಕೆಲವರಲ್ಲಿ (ಶೇ.45 ರಷ್ಟು ಮಂದಿಯಲ್ಲಿ) ಸಮಾಜಿಕ ಅಂತರವಷ್ಟೇ ಸಾಕು ಮಾಸ್ಕ್ ಏಕೆ ಬೇಕು ಎಂಬ ಮನಸ್ಥಿತಿ ಇದ್ದು, ಮಾಸ್ಕ್ ಗಳನ್ನು ಧರಿಸದೇ ಇರುವುದಕ್ಕೆ ಇದೂ ಒಂದು ಪ್ರಮುಖ ಕಾರಣವಾಗಿದೆ. ಇದೇ ರೀತಿಯ ಮನಸ್ಥಿತಿ 26-35 ವಯಸ್ಸಿನವರಲ್ಲಿ ಕಾಣುತ್ತಿದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. 

ಗುರುಗ್ರಾಮದ ಮತ್ತೋರ್ವ ವೈದ್ಯರಾದ ಡಾ. ಪ್ರೀತಿ ಸಿಂಗ್ ಈ ಬಗ್ಗೆ ಮಾತನಾಡಿದ್ದು, ಅಪಾಯ ಮೈಮೇಲೆ ಎಳೆದುಕೊಳ್ಳುವ ನಡವಳಿಕೆ, ಇತರರ ಬಗ್ಗೆ ವಿವೇಚನೆ ಇಲ್ಲ, ಪರಾನುಭೂತಿಯ ಕೊರತೆ, ಅವಘಡ ನಡೆದ ಬಳಿಕವೂ ಕಿಂಚಿತ್ತೂ ಪಶ್ಚಾತ್ತಾಪ ಇಲ್ಲದೇ ಇರುವುದು ಅಥವಾ ಸಮಾಜ ವಿರೋಧಿ ಕೃತ್ಯಗಳಲ್ಲಿ ಮನಸುಳ್ಳವರು ಮಾಸ್ಕ್ ಗಳನ್ನು ಧರಿಸುತ್ತಿಲ್ಲದೇ ಇರುವುದು ಸಾಮಾನ್ಯವಾಗಿದೆ. 

ಇವೆಲ್ಲವನ್ನೂ ಹೊರತುಪಡಿಸಿ, ಸಾಮಾಜಿಕ-ಆರ್ಥಿಕವಾಗಿ ಹಿಂದುಳಿದ, ಗ್ರಾಮೀಣ ಭಾಗದಲ್ಲಿ ಕೆಲವು ಮಂದಿ ನಿಜವಾಗಿಯೂ ಮಾಹಿತಿಯ ಕೊರತೆಯಿಂದಾಗಿ ಮಾಸ್ಕ್ ಧರಿಸದೇ ಇರುವ ಉದಾಹರಣೆಗಳೂ ಇವೆ ಎಂದು ವೈದ್ಯರು ತಿಳಿಸಿದ್ದಾರೆ. 

36-55 ವರ್ಷದವರಿನವರು ಹೆಚ್ಚಿನ ಸಂಖ್ಯೆಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದು ಅಗತ್ಯಕ್ಕೆ ತಕ್ಕಂತೆ ಮಾಸ್ಕ್ ಧರಿಸಿ ಸುರಕ್ಷಿತವಾಗಿರಲು ಯತ್ನಿಸುತ್ತಿದ್ದಾರೆ ಎಂದು ಈ ಅಧ್ಯಯನದಿಂದ ತಿಳಿದುಬಂದಿದೆ. ಭಾರತದಲ್ಲಿ ಅಷ್ಟೇ ಅಲ್ಲದೇ ಬ್ರೆಜಿಲ್ ನ ಸ್ಟೇಟ್ ಯೂನಿವರ್ಸಿಟಿ ಆಫ್ ಲೋಂಡ್ರಿನಾದಲ್ಲಿ ನಡೆದ ಸಂಶೋಧನೆಯ ಫಲಿತಾಂಶವೂ ಇದೇ ಮಾದರಿಯಲ್ಲಿದೆ. 

ತಜ್ಞರ ಪ್ರಕಾರ ಹಲವು ಮಂದಿ ಮಾಸ್ಕ್ ಧರಿಸುವುದನ್ನು ಕಿರಿಕಿರಿ ಎಂದು ಭಾವಿಸುತ್ತಿದ್ದು, ತಮ್ಮ ಸ್ವಾತಂತ್ರ್ಯಕ್ಕೆ ಅಡ್ದಿ ಎಂಬ ರೀತಿಯಲ್ಲಿ ಅದನ್ನು ಪರಿಗಣಿಸುತ್ತಿದ್ದಾರೆ. ಮತ್ತೆ ಕೆಲವರಿಗೆ, ಕೊರೋನಾಗೆ ಸಂಬಂಧಿಸಿದಂತೆ ಇರುವ ಭಯದಿಂದ ರೋಗದ ಬಗ್ಗೆ ಹೆಚ್ಚು ಮಾಹಿತಿ ಪಡೆಯುವುದನ್ನೇ ನಿಲ್ಲಿಸಿ,  ಅದು ಇಲ್ಲ ಎಂದು ಭಾವಿಸಿದರೆ ನಮಗೇನೂ ಸಮಸ್ಯೆಯಾಗುವುದಿಲ್ಲ ಎಂಬ ನಿರಾಕರಣೆಯ ಮನಸ್ಥಿತಿಯನ್ನು ಬೆಳೆಸಿಕೊಂಡಿದ್ದಾರೆ. 

ತಜ್ಞರು ಇಂತಹ ಪರಿಸ್ಥಿತಿಯ ಬಗ್ಗೆ ಎಚ್ಚರಿಸಿದ್ದು,  ಮಾರ್ಗಸೂಚಿ, ನಿಯಮಗಳನ್ನು ಪಾಲಿಸದೇ ಮಾಸ್ಕ್ ಧರಿಸದೇ ಇರುವ ಮನಸ್ಥಿತಿಯನ್ನು ಸಮಾಜ ವಿರೋಧಿ ಮನಸ್ಥಿತಿ ಸ್ವಾರ್ಥ ಹಾಗೂ ಮಾನಸಿಕ ಅಸ್ವಸ್ಥತೆ ಎಂದು ಹೇಳಿದ್ದಾರೆ ಅಷ್ಟೇ ಅಲ್ಲದೇ ನಿಯಮಗಳನ್ನು ಪಾಲಿಸದೇ ಇರುವವರಿಗೆ ಹೆಚ್ಚು ಮೊತ್ತದ ದಂಡ ಹಾಕಬೇಕೆಂದು ಸಲಹೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com