ಕೋವಿಡ್-19: ಸೇನಾ ಆಸ್ಪತ್ರೆಗಳಲ್ಲಿ 5 ಸಾವಿರಕ್ಕೂ ಅಧಿಕ ಸೈನಿಕರಿಗೆ ಚಿಕಿತ್ಸೆ!

ಮಾರಕ ಕೊರೋನಾ ವೈರಸ್ ಎರಡನೇ ಅಲೆ ಜನ ಸಾಮಾನ್ಯರ ಮೇಲಷ್ಟೇ ಅಲ್ಲ... ದೇಶ ಕಾಯುವ ನಮ್ಮ ಬಲಿಷ್ಠ ಸೈನಿಕರನ್ನೂ ಹೈರಾಣಾಗಿಸಿದ್ದು ದೇಶದ ಮೂಲೆ ಮೂಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸೈನಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸೈನಿಕರಿಗೆ ಕೋವಿಡ್ ಪರೀಕ್ಷೆ (ಪಿಟಿಐ ಚಿತ್ರ)
ಸೈನಿಕರಿಗೆ ಕೋವಿಡ್ ಪರೀಕ್ಷೆ (ಪಿಟಿಐ ಚಿತ್ರ)

ನವದೆಹಲಿ: ಮಾರಕ ಕೊರೋನಾ ವೈರಸ್ ಎರಡನೇ ಅಲೆ ಜನ ಸಾಮಾನ್ಯರ ಮೇಲಷ್ಟೇ ಅಲ್ಲ... ದೇಶ ಕಾಯುವ ನಮ್ಮ ಬಲಿಷ್ಠ ಸೈನಿಕರನ್ನೂ ಹೈರಾಣಾಗಿಸಿದ್ದು ದೇಶದ ಮೂಲೆ ಮೂಲೆಯಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಸೈನಿಕರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೌದು... ಭಾರತೀಯ ಸೇನೆಯ ಮೂರು ದಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 5 ಸಾವಿರಕ್ಕೂ ಅಧಿಕ ಸೈನಿಕರು ಮಾರಕ ಕೊರೋನಾ ವೈರಸ್ ಸೋಂಕಿಗೆ ತುತ್ತಾಗಿ ಮಿಲಿಟರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸೋಂಕು ಸಾಂಕ್ರಾಮಿಕದ 2ನೇ ಅಲೆ ದೇಶದಲ್ಲಿ ತನ್ನ ಹಿಡಿತವನ್ನು  ಬಿಗಿಗೊಳಿಸಿದ್ದು, ಕೇವಲ ಮೂರುವಾರಗಳ ಆಂತರದಲ್ಲಿ ಸೇನಾಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕು ಪೀಡಿತ ಸೈನಿಕರ ಸಂಖ್ಯೆ ಐದು ಪಟ್ಟು ಹೆಚ್ಚಾಗಿದೆ. 

ಈ ಕುರಿತಂತೆ 'ಹಿಂದೂಸ್ತಾನ್ ಟೈಮ್ಸ್' ವರದಿ ಮಾಡಿದ್ದು, ಮಿಲಿಟರಿ ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕು ಪೀಡಿತ ಸೈನಿಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಏಪ್ರಿಲ್ 18 ರ ವೇಳೆಗೆ 1,067 ಸೈನಿಕರು ಆಸ್ಪತ್ರೆಗೆ ದಾಖಲಾಗಿದ್ದರೆ ಇದೇ ಸಂಖ್ಯೆ ಮೇ 10 ರ ಹೊತ್ತಿಗೆ  5,134 ಕ್ಕೆ ಏರಿಕೆಯಾಗಿದೆ. ಇದು  ಸೈನಿಕರಲ್ಲಿ ಸೋಂಕು ಉಲ್ಪಣವನ್ನು ಸೂಚಿಸುತ್ತಿದೆ.  

ಮಿಲಿಟರಿ ಆಸ್ಪತ್ರೆಗಳಲ್ಲಿ ದಿನಂಪ್ರತಿ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದು ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಹೆಚ್ಚಿಸಿದೆ. ಪ್ರಮುಖವಾಗಿ ಹಿರಿಯ ಮತ್ತು ನಿವೃತ್ತ ಸೇನಾಧಿಕಾರಿಗಳು ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದು, ಅವರ ಸಾವಿನ ಪ್ರಮಾಣ ಕೂಡ ಗಣನೀಯವಾಗಿ ಹೆಚ್ಚಾಗಿದೆ  ಎಂದು ವರದಿಯಲ್ಲಿ ಹೇಳಲಾಗಿದೆ. ಪ್ರಸ್ತುತ ಸೇನಾಸ್ಪತ್ರೆಗಳಲ್ಲಿ 1,814 ಮಾಜಿ ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದು, ಈ ಸಂಖ್ಯೆ ಮೂರು ವಾರಗಳ 356ರಷ್ಟಿತ್ತು. ಅಂತೆಯೇ ಈ ವರೆಗೂ ಕೋವಿಡ್ ಸೋಂಕಿನಿಂದಾಗಿ 1,027 ನಿವೃತ್ತ ಸೈನಿಕರು ಮೃತಪಟ್ಟಿದ್ದಾರೆ. ಮೇ 9ರಂದು ಒಂದೇ ದಿನ 44 ಮಂದಿ ಸೋಂಕು ಪೀಡಿತ  ಹಿರಿಯ ಅಧಿಕಾರಿಗಳು ಮತ್ತು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com