ಭಾರತದಲ್ಲಿ ಕೋವಿಡ್-19 ಹೆಚ್ಚಳಕ್ಕೆ ಧಾರ್ಮಿಕ, ರಾಜಕೀಯ ಕಾರ್ಯಕ್ರಮಗಳೂ ಕಾರಣ: ಡಬ್ಲ್ಯುಹೆಚ್ಒ

ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಳದ ಪರಿಸ್ಥಿತಿಯ ಬಗ್ಗೆ ಡಬ್ಲ್ಯುಹೆಚ್ ಒ ಅಪಾಯದ ಮೌಲ್ಯಮಾಪನ ಮಾಡಿದೆ.
ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದ ಜನತೆ (ಸಂಗ್ರಹ ಚಿತ್ರ)
ಹರಿದ್ವಾರದಲ್ಲಿ ನಡೆದ ಕುಂಭಮೇಳದಲ್ಲಿ ಭಾಗಿಯಾದ ಜನತೆ (ಸಂಗ್ರಹ ಚಿತ್ರ)

ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚಳದ ಪರಿಸ್ಥಿತಿಯ ಬಗ್ಗೆ ಡಬ್ಲ್ಯುಹೆಚ್ ಒ ಅಪಾಯದ ಮೌಲ್ಯಮಾಪನ ಮಾಡಿದೆ.

"ಭಾರತದಲ್ಲಿ ಕೋವಿಡ್-19 ಹೆಚ್ಚಳಕ್ಕೆ ಹಲವಾರು ಕಾರಣಗಳಿದ್ದು ಈ ಪೈಕಿ ರಾಜಕೀಯ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಕೋವಿಡ್-19 ಹೆಚ್ಚಳವಾಗಿದೆ" ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಪ್ರಕಟಿಸಿದೆ. 

ಮೇ.12 ರಂದು ಡಬ್ಲ್ಯುಹೆಚ್ಒ  ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದಂತೆ ವಾರದಲ್ಲಿ ಒಮ್ಮೆ ಪ್ರಕಟವಾಗುವ ಅಪ್ಡೇಟ್ ನ್ನು ಪ್ರಕಟಿಸಿದ್ದು, "B.1.617 ವಂಶಾವಳಿ ವೈರಾಣುಗಳು ಭಾರತದಲ್ಲಿ ಮೊದಲು ಕಂಡುಬಂದಿದ್ದು 2020 ರ ಅಕ್ಟೋಬರ್ ತಿಂಗಳಲ್ಲಿ" ಎಂದು ಹೇಳಿದೆ. 

ಭಾರತದಲ್ಲಿ ಕೋವಿಡ್-19 ಪ್ರಕರಣಗಳ ಹೆಚ್ಚಳ ಹಾಗೂ ಸಾವಿನ ಪ್ರಮಾಣದ ಏರಿಕೆ B.1.617 ಹಾಗೂ ಇತರ ರೂಪಾಂತರಿ ವೈರಾಣುಗಳ ಪಾತ್ರದ ಬಗ್ಗೆ ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ.

ರಾಜಕೀಯ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಂದಾಗಿ ಕೋವಿಡ್-19 ಹರಡಿದೆಯಾದರೂ ಕಾರಣವಾದ ಅಂಶಗಳು ಎಷ್ಟರ ಮಟ್ಟಿಗೆ ಕೊಡುಗೆ ನೀಡಿದೆ ಎಂಬುದು ಅಂದಾಜಿಸಲು ಸಾಧ್ಯವಾಗಿಲ್ಲ ಎಂದು ಡಬ್ಲ್ಯುಹೆಚ್ಒ ವರದಿ ಹೇಳಿದೆ. 

SARS-CoV-2  ರೂಪಾಂತರಿಗಳನ್ನು ಗುರುತಿಸುವುದಕ್ಕಾಗಿ ಭಾರತದಲ್ಲಿ ಶೇ.0.1 ರಷ್ಟು ಸೋಂಕು ದೃಢಪಟ್ಟ ಸ್ಯಾಂಪಲ್ ಗಳನ್ನಷ್ಟೇ ಜಿಐಎಸ್ಎಐಡಿ ಗೆ ಅಪ್ ಲೋಡ್ ಮಾಡಲಾಗಿದೆ. ಜಿಐಎಸ್ಎಐಡಿ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕ ವೈರಸ್ ಡೇಟಾಗೆ ತ್ವರಿತ ಮತ್ತು ಮುಕ್ತ ಪ್ರವೇಶವನ್ನು ಕಲ್ಪಿಸುತ್ತದೆ.

ಭಾರತದಲ್ಲಿ ಸೀಕ್ವೆನ್ಸ್ ಸ್ಯಾಂಪಲ್ ಗಳ ಪೈಕಿ ಏಪ್ರಿಲ್ 2021 ತಿಂಗಳಾದ್ಯಂತ B.1.617.1 ಹಾಗೂ B.1.617.2 ರೂಪಾಂತರಿ ವೈರಾಣುಗಳು ಅನುಕ್ರಮವಾಗಿ ಶೇ.21 ಹಾಗೂ ಶೇ.7 ರಷ್ಟು ಇದ್ದು, ಜಿಐಎಸ್ಎಐಡಿಯ ಪ್ರಕಾರ ಭಾರತದಲ್ಲಿ B.1.617.1 ಹಾಗೂ B.1.617.2 ರೂಪಾಂತರಿ ವೈರಾಣುಗಳೇ ಹೆಚ್ಚಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 

ಭಾರತವನ್ನು ಹೊರತುಪಡಿಸಿದರೆ ಕೊರೋನಾದ B.1.617  ಹಾಗೂ ಅದರ ಉಪ ವೈರಾಣುಗಳು ಬ್ರಿಟನ್ ನಲ್ಲಿ ಹೆಚ್ಚು ಕಂಡುಬಂದಿದ್ದು, B.1.617.2ನ್ನು ರಾಷ್ಟ್ರಕ್ಕೆ  ಆತಂಕ ಉಂಟುಮಾಡುತ್ತಿರುವ ವೈರಾಣು ವಂಶಾವಳಿ ಎಂದು ಗುರುತಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com