ಮಾಹಿತಿ ತಂತ್ರಜ್ಞಾನದ ಹೊಸ ನಿಯಮ ಪ್ರಶ್ನಿಸಿ ದೆಹಲಿ ಹೈಕೋರ್ಟ್ ಮೊರೆ ಹೋದ ವಾಟ್ಸ್ ಆಪ್

ಭಾರತದಲ್ಲಿ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳು ಜಾರಿಗೊಳಿಸಲಾಗುತ್ತಿರುವುದನ್ನು ಪ್ರಶ್ನಿಸಿ ವಾಟ್ಸ್ ಆಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. 
ವಾಟ್ಸ್ ಆಪ್ (ಸಾಂಕೇತಿಕ ಚಿತ್ರ)
ವಾಟ್ಸ್ ಆಪ್ (ಸಾಂಕೇತಿಕ ಚಿತ್ರ)

ನವದೆಹಲಿ: ಭಾರತದಲ್ಲಿ ಹೊಸ ಮಾಹಿತಿ ತಂತ್ರಜ್ಞಾನದ ನಿಯಮಗಳು ಜಾರಿಗೊಳಿಸಲಾಗುತ್ತಿರುವುದನ್ನು ಪ್ರಶ್ನಿಸಿ ವಾಟ್ಸ್ ಆಪ್ ದೆಹಲಿ ಹೈಕೋರ್ಟ್ ಮೊರೆ ಹೋಗಿದೆ. 

ಸರ್ಕಾರದ ಹೊಸ ನಿಯಮಗಳಲ್ಲಿ ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕುವುದಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಪ್ರಕಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಕಂಟೆಂಟ್ ಹಾಗೂ ಸುದ್ದಿಗಳ ಮೂಲವನ್ನು ಪತ್ತೆ ಮಾಡುವುದಕ್ಕಾಗಿ ಸಾಮಾಜಿಕ ಜಾಲತಾಣ ಸಂಸ್ಥೆಗಳು ಮೊದಲಿಗೆ ಮಾಹಿತಿಯನ್ನು ಸೃಷ್ಟಿಸಿದವರನ್ನು ಗುರುತಿಸಿ ಅವರ ಮಾಹಿತಿಯನ್ನು ತನಿಖಾ ಸಂಸ್ಥೆಗಳೊಂದಿಗೆ ಹಂಚಿಕೊಳ್ಳಬೇಕಾಗುತ್ತದೆ. 

ಈ ವಿಚಾರವಾಗಿ ಹೊಸ ನಿಯಮಗಳನ್ನು ವಾಟ್ಸ್ ಆಪ್ ಪ್ರಶ್ನಿಸಿದೆ. ಒಂದು ವೇಳೆ ಈ ನಿಯಮಗಳನ್ನು ಪಾಲನೆ ಮಾಡಬೇಕಾದಲ್ಲಿ ಖಾಸಗಿತನಕ್ಕೆ ಧಕ್ಕೆ ಉಂಟಾಗಲಿದೆ ಎಂದು ವಾಟ್ಸ್ ಆಪ್ ವಾದಿಸಿದೆ. 

ವಾಟ್ಸ್ ಆಪ್ ಸಂದೇಶಗಳು ಎಂಡ್-ಟು-ಎಂಡ್ ಎನ್ ಕ್ರಿಪ್ಷನ್ (ಗೂಢ ಲಿಪೀಕರಣ)ನ್ನು ಅಳವಡಿಸಿಕೊಂಡಿದ್ದು, ಬೇರೆಯವರ ಸಂದೇಶವನ್ನು ಕದ್ದು ಓದುವುದಕ್ಕೆ ಸಾಧ್ಯವಿಲ್ಲ.  ಹೊಸ ನಿಯಮಗಳನ್ನು ಪಾಲಿಸಬೇಕಾದಲ್ಲಿ ಸಂದೇಶ ಸೃಷ್ಟಿಸಿದವರು ಹಾಗೂ ಪಡೆದವರ ಎನ್ ಕ್ರಿಪ್ಷನ್ ನ್ನು ತೆಗೆದುಹಾಕಬೇಕಾಗುತ್ತದೆ. ಈ ರೀತಿ ಮಾಡಿದರೆ ಗ್ರಾಹಕರ ಖಾಸಗಿತನ, ಗೌಪ್ಯತೆಗೆ ಧಕ್ಕೆ ಉಂಟಾಗಲಿದೆ ಎಂದು ದೆಹಲಿ ಹೈಕೋರ್ಟ್ ನಲ್ಲಿ ವಾಟ್ಸ್ ಆಪ್ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ಕುರಿತು ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದನ್ನು ಸಂಸ್ಥೆಯ ವಕ್ತಾರರೊಬ್ಬರು ದೃಢಪಡಿಸಿದ್ದಾರೆ.

"ಚಾಟ್ ಗಳ ಜಾಡು ಹಿಡಿದು ಹೋಗುವುದು, ವಾಟ್ಸ್ ಆಪ್ ನಲ್ಲಿ ಕಳಿಸಲಾಗುವ ಪ್ರತಿ ಮೆಸೇಜ್ ಗಳ ಫಿಂಗರ್ ಪ್ರಿಂಟ್ ನ್ನು ನಮ್ಮಲ್ಲಿ ಕೇಳುವಂತಾಗಲಿದೆ, ಇದರಂದ ಎಂಡ್-ಟು-ಎಂಡ್ ಎನ್ಕ್ರಿಪ್ಷನ್ ನ್ನು ತೆಗೆದುಹಾಕಬೇಕಾಗುತ್ತದೆ, ತತ್ಪರಿಣಾಮ ಜನರ ಗೌಪ್ಯತೆಗೆ ಧಕ್ಕೆ ಉಂಟಾಗಲಿದೆ" ಎಂದು ವಾಟ್ಸ್ ಆಪ್ ನ ವಕ್ತಾರರು ಹೇಳಿದ್ದಾರೆ.

" ಗ್ರಾಹಕರ ಗೌಪ್ಯತೆ, ಖಾಸಗಿ ವಿಷಯಗಳನ್ನು ಉಲ್ಲಂಘನೆ ಮಾಡುವ ಅಂಶಗಳನ್ನು ಕೇಳುವುದರ ವಿರುದ್ಧ ನಾವು ಸಿವಿಲ್ ಸೊಸೈಟಿ ಹಾಗೂ ತಜ್ಞರ ಜೊತೆಗೆ ನಿರಂತರವಾಗಿ ನಿಂತಿದ್ದೇವೆ" ಎಂದು ಸಂಸ್ಥೆ ತಿಳಿಸಿದೆ.

ಹೊಸ ನಿಯಮಗಳಿಗೆ ಬದ್ಧರಾಗದೇ ಇದ್ದಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್ ಬುಕ್, ಟ್ವಿಟರ್, ಯೂಟ್ಯೂಬ್, ಇನ್ಸ್ಟಾಗ್ರಾಮ್, ವಾಟ್ಸ್ ಆಪ್ ಗಳಲ್ಲಿನ ಕಂಟೆಂಟ್ ಗಳಿಗೆ ಕಾನೂನಾತ್ಮಕ ರಕ್ಷಣೆಯನ್ನು ತೆಗೆದುಹಾಕಲಾಗುತ್ತದೆ.

ಇದಕ್ಕೂ ಮುನ್ನ ಯಾವುದೇ ಮೂರನೇ ವ್ಯಕ್ತಿ ಈ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಹಾಕುತ್ತಿದ್ದ ಬರಹಳಿಂದ ಉಂಟಾಗುವ ಕಾನೂನು ಕ್ರಮಗಳಿಂದ ಸಂಸ್ಥೆಗಳಿಗೆ ರಕ್ಷಣೆ ನೀಡಲಾಗುತ್ತಿತ್ತು.

ಹೊಸ ನಿಯಮಗಳ ಪ್ರಕಾರ ಕಾನೂನು ಕ್ರಮಗಳಂತಹ ಪರಿಸ್ಥಿತಿಯನ್ನು ತಂದೊಡ್ಡುವ ಪೋಸ್ಟ್ ಗಳನ್ನು 36 ಗಂಟೆಗಳಲ್ಲಿ ತೆಗೆದುಹಾಕುವ ಜವಾಬ್ದಾರಿ ಸಾಮಾಜಿಕ ಜಾಲತಾಣದ ಸಂಸ್ಥೆಗಳ ಮೇಲೆ ಇರಲಿದ್ದು, ದೂರುಗಳಿಗೆ ಪ್ರತಿಕ್ರಿಯೆ ನೀಡುವ ವ್ಯವಸ್ಥೆಯನ್ನು ರೂಪಿಸಬೇಕಾಗುತ್ತದೆ.

ಇನ್ನು ಪೋರ್ನೋಗ್ರಫಿಯಂತಹ ಅಂಶಗಳನ್ನು ಸ್ವಯಂಚಾಲಿತವಾಗಿ ತೆಗೆದುಹಾಕುವ ವ್ಯವಸ್ಥೆಯನ್ನೂ ಸಾಮಾಜಿಕ ಜಾಲತಾಣಗಳು ರೂಪಿಸಬೇಕಾಗುತ್ತದೆ. ಫೇಸ್ ಬುಕ್ ಹಾಗೂ ಗೂಗಲ್ ಹೊಸ ನಿಯಮಗಳ ಪಾಲನೆಯ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವುದಾಗಿ ತಿಳಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com