ಪೂರ್ವಾಂಚಲ ಎಕ್ಸ್ ಪ್ರೆಸ್
ಪೂರ್ವಾಂಚಲ ಎಕ್ಸ್ ಪ್ರೆಸ್

22,500 ಕೋಟಿ ರೂ. ವೆಚ್ಚದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಉದ್ಘಾಟಿಸಲಿರುವ ಪ್ರಧಾನಿ ಮೋದಿ; ಏನಿದರ ವಿಶೇಷತೆ?

ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸುಮಾರು 341 ಕಿಲೋ ಮೀಟರ್ ಉದ್ದದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಅನ್ನು ಪ್ರಧಾನಿ ಮೋದಿಯನರು ಉದ್ಘಾಟನೆ ಮಾಡಲಿದ್ದಾರೆ.
Published on

ನವದೆಹಲಿ: ಅಂತಾರಾಷ್ಟ್ರೀಯ ಗುಣಮಟ್ಟ ಹೊಂದಿರುವ ಸುಮಾರು 341 ಕಿಲೋ ಮೀಟರ್ ಉದ್ದದ ಪೂರ್ವಾಂಚಲ ಎಕ್ಸ್ ಪ್ರೆಸ್ ವೇ ಅನ್ನು ಪ್ರಧಾನಿ ಮೋದಿಯನರು ಉದ್ಘಾಟನೆ ಮಾಡಲಿದ್ದಾರೆ.

ಬರೋಬ್ಬರಿ 22,500 ಕೋಟಿ ರೂಪಾಯಿ ವೆಚ್ಚದೊಂದಿಗೆ 36 ತಿಂಗಳುಗಳ ಅವಧಿಯಲ್ಲಿ ಈ ಹೆದ್ದಾರಿಯನ್ನು ನಿರ್ಮಾಣ ಮಾಡಲಾಗಿದೆ. ಈ ಹೆದ್ದಾರಿ ಲಖನೌ ಜಿಲ್ಲೆಯ ಲಖನೌ-ಸುಲ್ತಾನ್‌ಪುರ ರಸ್ತೆ ಬಳಿ ಇರುವ ಚಂದ್‌ಸರೈ ಗ್ರಾಮದಿಂದ ಪ್ರಾರಂಭವಾಗುತ್ತದೆ.

ಇದು ಘಾಜಿಪುರ ಜಿಲ್ಲೆಯ ಉತ್ತರ ಪ್ರದೇಶ-ಬಿಹಾರ ಗಡಿಯಿಂದ 18 ಕಿಮೀ ದೂರದಲ್ಲಿರುವ ಗಾಜಿಪುರದ ರಾಷ್ಟ್ರೀಯ ಹೆದ್ದಾರಿ 31 ರಲ್ಲಿ ಹೈದರಿಯಾ ಗ್ರಾಮದಲ್ಲಿ ಕೊನೆಗೊಳ್ಳುತ್ತದೆ.

ಇದರ ಒಟ್ಟು ಉದ್ದ 340.824 ಕೀ.ಮಿ ಮತ್ತು ಆರು-ಪಥದ ಎಕ್ಸ್‌ಪ್ರೆಸ್‌ವೇ ಆಗಿದ್ದು, ಈ ಹೆದ್ದಾರಿ ಮತ್ತೊಂದು ವಿಶೇಷ ಎಂದರೆ ಇದನ್ನು ಎಂಟು ಲೇನ್‌ಗಳಿಗೆ ಅಪ್‌ಗ್ರೇಡ್ ಮಾಡಬಹುದು.

ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ 22 ಫ್ಲೈಓವರ್‌ಗಳು, 7 ರೈಲ್ವೆ-ಓವರ್-ಬ್ರಿಡ್ಜ್‌ಗಳು, 7 ಪ್ರಮುಖ ಸೇತುವೆಗಳು, 114 ಸಣ್ಣ ಸೇತುವೆಗಳು, 6 ಟೋಲ್ ಪ್ಲಾಜಾಗಳು, 45 ವಾಹನ-ಅಂಡರ್‌ಪಾಸ್‌ಗಳು, 139 ಲೈಟ್, 87 ಪಾದಚಾರಿ ಅಂಡರ್‌ಪಾಸ್ ಮತ್ತು 525 ಬಾಕ್ಸ್ ಕಲ್ವರ್ಟ್‌ಗಳನ್ನು ಹೊಂದಿರುತ್ತದೆ.

ಹೊಸ ಎಕ್ಸ್‌ಪ್ರೆಸ್‌ವೇ ಸಿಎನ್‌ಜಿ ಸ್ಟೇಷನ್‌ಗಳು, ವಾಹನಗಳಿಗೆ ಎಲೆಕ್ಟ್ರಿಕ್ ರೀಚಾರ್ಜ್ ಕೇಂದ್ರಗಳನ್ನು ಹೊಂದಿರುತ್ತದೆ. ಆಗ್ರಾ ಮತ್ತು ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇಗಳ ಮೂಲಕ ರಕ್ಷಣಾ ಕಾರಿಡಾರ್‌ನೊಂದಿಗೆ ಸಂಪರ್ಕಗೊಳ್ಳುತ್ತದೆ. ಗಂಟೆಗೆ 120 ಕಿಮೀ ವೇಗದಲ್ಲಿ ವಾಹನಗಳ ಸಂಚಾರಕ್ಕಾಗಿ ಎಕ್ಸ್‌ಪ್ರೆಸ್‌ವೇಯನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ವೇಗವನ್ನು ಗಂಟೆಗೆ 100 ಕಿಮೀ ಎಂದು ನಿಗದಿಪಡಿಸಲಾಗಿದೆ.

ಈ ಹೆದ್ದಾರಿಯಲ್ಲಿ ಸುರಕ್ಷತೆ ಮತ್ತು ವೈದ್ಯಕೀಯ ತುರ್ತು ಪರಿಸ್ಥಿತಿಗಳಿಗಾಗಿ ಪೊಲೀಸ್ ವಾಹನಗಳು, ಜಾನುವಾರು ಹಿಡಿಯುವವರ ವಾಹನಗಳು ಮತ್ತು 16 ಆಂಬ್ಯುಲೆನ್ಸ್‌ಗಳನ್ನು ನಿಯೋಜಿಸಲಾಗುವುದು. ಎಕ್ಸ್‌ಪ್ರೆಸ್‌ವೇ ಪ್ರಯಾಣಿಕರಿಗೆ ಇಂಧನ ಮತ್ತು ಸಮಯವನ್ನು ಉಳಿಸುವುದರ ಜೊತೆಗೆ ಅಪಘಾತ ತಡೆ ಹಾಗೂ ವಾಯು ಮಾಲಿನ್ಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಇದು ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.

ಅಷ್ಟೇ ಅಲ್ಲದೇ ಈ ಎಕ್ಸ್​ಪ್ರೆಸ್​ ವೇ ದೆಹಲಿ-ಮೀರತ್ ಲಿಂಕ್ ಎಕ್ಸ್‌ಪ್ರೆಸ್‌ವೇ (96 ಕಿಮೀ), ಬುಂದೇಲ್‌ಖಂಡ್ ಎಕ್ಸ್‌ಪ್ರೆಸ್‌ವೇ (296 ಕಿಮೀ), ಗೋರಖ್‌ಪುರ ಲಿಂಕ್ ಎಕ್ಸ್‌ಪ್ರೆಸ್‌ವೇ (92 ಕಿಮೀ), ಗಂಗಾ ಎಕ್ಸ್‌ಪ್ರೆಸ್‌ವೇ (600 ಕಿಮೀ), ಲಕ್ನೋ ಕಾನ್ಪುರ ಎಲಿವೇಟೆಡ್ ನ್ಯಾಷನಲ್ ಎಕ್ಸ್‌ಪ್ರೆಸ್‌ವೇ (63 ಕಿಮೀ)ಗಳನ್ನು ಕೂಡ ಸಂಪರ್ಕಿಸುತ್ತದೆ.

ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಅತಿದೊಡ್ಡ ಯೋಜನೆಯಾಗಿದೆ. ಎರಡು ಕಡೆ ಕೈಗಾರಿಕಾ ಕಾರಿಡಾರ್‌ಗಳನ್ನು ನಿರ್ಮಿಸಲಾಗುವುದು, ಯಂತ್ರೋಪಕರಣಗಳು, ಆಹಾರ ಸಂಸ್ಕರಣೆ, ಡೈರಿ-ಹಾಲು ಅಭಿವೃದ್ಧಿ ಹೊಂದಲಿದೆ ಎಂದು ತಿಳಿದುಬಂದಿದೆ.

ಪೂರ್ವಾಂಚಲ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ರಾಜಧಾನಿ ಲಖನೌವನ್ನು ಅಜಂಗಢದ ಮೂಲಕ ಪೂರ್ವ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಈ ಎಕ್ಸ್‌ಪ್ರೆಸ್‌ವೇ ಅಭಿವೃದ್ಧಿಯೊಂದಿಗೆ, ರಾಜ್ಯದ ಪೂರ್ವ ಪ್ರದೇಶವು ಲಕ್ನೋಗೆ ಮಾತ್ರವಲ್ಲದೆ ಆಗ್ರಾ-ಲಕ್ನೋ ಮತ್ತು ಯಮುನಾ ಎಕ್ಸ್‌ಪ್ರೆಸ್‌ವೇಗಳ ಮೂಲಕ ರಾಷ್ಟ್ರೀಯ ರಾಜಧಾನಿ ದೆಹಲಿಗೆ ಸಂಪರ್ಕ ಕಲ್ಪಿಸುತ್ತದೆ.

ಇಂದು ನಡೆಯಲಿರುವ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಜೊತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾಗವಹಿಸಲಿದ್ದಾರೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com