ಸಿಬಿಐ, ಇಡಿ ನಿರ್ದೇಶಕರ ಸೇವಾವಧಿ ವಿಸ್ತರಿಸಿ ಸುಗ್ರೀವಾಜ್ಞೆ: ಸಂಸತ್ತಿನ ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಳ್ಳಲು ಕಾಂಗ್ರೆಸ್, ಟಿಎಂಸಿ ಸಜ್ಜು
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರುಗಳ ಸೇವಾ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಎರಡು ವಿಧೇಯಕಗಳ ವಿರುದ್ಧ ವಿರೋಧ ಪಕ್ಷಗಳು ಅಪಸ್ವರ ಎತ್ತಿವೆ.
Published: 16th November 2021 09:51 AM | Last Updated: 16th November 2021 12:44 PM | A+A A-

ಸಂಸತ್ತು
ನವದೆಹಲಿ: ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ನಿರ್ದೇಶಕರುಗಳ ಸೇವಾ ಅವಧಿಯನ್ನು 5 ವರ್ಷಗಳವರೆಗೆ ವಿಸ್ತರಿಸಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರದ ಎರಡು ವಿಧೇಯಕಗಳ ವಿರುದ್ಧ ವಿರೋಧ ಪಕ್ಷಗಳು ಅಪಸ್ವರ ಎತ್ತಿವೆ.
ಕೇಂದ್ರ ಸರ್ಕಾರದ ಈ ಎರಡು ವಿಧೇಯಕಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಾಗಿ ಕಾಂಗ್ರೆಸ್ ಹೇಳಿದರೆ, ಆಕ್ಷೇಪಣೆಗಳನ್ನು ಎತ್ತಲು ರಾಜ್ಯಸಭೆಯಲ್ಲಿ ಶಾಸನಬದ್ಧ ನಿರ್ಣಯಗಳಿಗೆ ಟಿಎಂಸಿ ನೋಟಿಸ್ ನೀಡಿದೆ.
ಕೇಂದ್ರ ಸರ್ಕಾರದ ಈ ಸುಗ್ರೀವಾಜ್ಞೆಯು ಅಧಿಕಾರಿಗಳಿಗೆ ಯಾವ ರೀತಿಯ ಸಂದೇಶ ಸಾರುತ್ತದೆಯೆಂದರೆ, ನಾವು (ಕೇಂದ್ರ) ನಿಮ್ಮನ್ನು ನೇಮಿಸಿದರೆ ಮತ್ತು ನೀವು ನಮ್ಮ ಆದೇಶದಂತೆ ಕೆಲಸ ಮಾಡುತ್ತಿದ್ದರೆ ಮತ್ತು ಪ್ರತಿಪಕ್ಷಗಳಿಗೆ ಕಿರುಕುಳ ನೀಡುತ್ತಿದ್ದರೆ, ನಿಮ್ಮ ಅಧಿಕಾರಾವಧಿಯನ್ನು ವರ್ಷದಿಂದ ವರ್ಷಕ್ಕೆ ಹೆಚ್ಚಿಸಲಾಗುತ್ತದೆ ಎಂದು ಹೇಳಿದಂತೆ ಆಗಿದೆ. ಈ ಬಗ್ಗೆ ಎಲ್ಲಾ ಪಕ್ಷಗಳು ಒಟ್ಟಾಗಿ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಬೇಕು ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಹೇಳಿದ್ದಾರೆ.
ಸಿಬಿಐ ಮತ್ತು ಇಡಿ ಮುಖ್ಯಸ್ಥರ ಅಧಿಕಾರಾವಧಿಯನ್ನು ವಿಸ್ತರಿಸಲು ಸರ್ಕಾರವು ಸುಗ್ರೀವಾಜ್ಞೆ ಹೊರಡಿಸಿರುವುದನ್ನು ಆಕ್ಷೇಪಿಸಿ ಟಿಎಂಸಿ ರಾಜ್ಯಸಭೆಯಲ್ಲಿ ಶಾಸನಬದ್ಧ ನಿರ್ಣಯಗಳಿಗೆ ನೋಟಿಸ್ ನೀಡಿದೆ. ಸರ್ಕಾರದ ಎರಡು ಆಕ್ಷೇಪಾರ್ಹ ಸುಗ್ರೀವಾಜ್ಞೆಗಳು ಇಡಿ ಮತ್ತು ಸಿಬಿಐ ನಿರ್ದೇಶಕರ ಅವಧಿಯನ್ನು ಎರಡರಿಂದ ಐದು ವರ್ಷಗಳವರೆಗೆ ವಿಸ್ತರಿಸುತ್ತವೆ. ಸಂಸತ್ತಿನ ಚಳಿಗಾಲದ ಅಧಿವೇಶನ ಇನ್ನೆರಡು ವಾರಗಳಿಂದ ಆರಂಭವಾಗಿದೆ. ಕೇಂದ್ರ ಸರ್ಕಾರದ ನಿರಂಕುಶಾಧಿಕಾರವನ್ನು ತಡೆಯಲು ವಿರೋಧ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸುತ್ತವೆ ಎಂದು ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ'ಬ್ರೇನ್ ಟ್ವೀಟ್ ಮಾಡಿದ್ದಾರೆ.
ಇಬ್ಬರು ನಿರ್ದೇಶಕರ ಅಧಿಕಾರಾವಧಿಯು ಪ್ರಸ್ತುತ ನಿಗದಿತ ಎರಡು ವರ್ಷಗಳ ಅವಧಿಯನ್ನು ಮೀರಿ ವಿಸ್ತರಿಸಿ ದೆಹಲಿ ಪೊಲೀಸ್ ವಿಶೇಷ ಸ್ಥಾಪನೆ ಕಾಯಿದೆ ಮತ್ತು ಸಿವಿಸಿ ಕಾಯಿದೆಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ.
ಈ ತಿಂಗಳ 29ರಂದು ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಮುಂಚಿತವಾಗಿ ಇತರ ವಿರೋಧ ಪಕ್ಷಗಳು ಸಹ ಇದೇ ರೀತಿಯ ಸೂಚನೆಗಳನ್ನು ನೀಡುವ ನಿರೀಕ್ಷೆಯಿದೆ. ಸಿಪಿಐ ಸಂಸದ ಬಿನೋಯ್ ವಿಶ್ವಂ ತಮ್ಮ ಪಕ್ಷವು ಸುಗ್ರೀವಾಜ್ಞೆಗಳ ವಿರುದ್ಧ ಅಸಮ್ಮತಿ ನಿರ್ಣಯವನ್ನು ಮಂಡಿಸಲಿದೆ ಎಂದು ಹೇಳಿದ್ದಾರೆ.