ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ: ನೀತಿ ಆಯೋಗ
ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.
Published: 26th November 2021 04:48 PM | Last Updated: 26th November 2021 04:48 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ನೀತಿ ಆಯೋಗದ ಬಹು ಆಯಾಮ ಬಡತನ ಸೂಚ್ಯಂಕ(ಎಂಪಿಐ)ದ ಪ್ರಕಾರ ಬಿಹಾರ, ಜಾರ್ಖಂಡ್ ಮತ್ತು ಉತ್ತರ ಪ್ರದೇಶ ರಾಜ್ಯಗಳು ಭಾರತದ ಅತ್ಯಂತ ಬಡ ರಾಜ್ಯಗಳಾಗಿ ಹೊರಹೊಮ್ಮಿವೆ.
ಈ ಸೂಚ್ಯಂಕದ ಪ್ರಕಾರ, ಬಿಹಾರದಲ್ಲಿ ಶೇ. 51.91 ರಷ್ಟು ಜನ ಬಡವರಾಗಿದ್ದರೆ, ಜಾರ್ಖಂಡ್‌ನಲ್ಲಿ ಶೇ. 42.16 ರಷ್ಟು ಜನ ಹಾಗೂ ಉತ್ತರ ಪ್ರದೇಶದಲ್ಲಿ ಶೇ. 37.79 ರಷ್ಟು ಜನ ಬಡವರಾಗಿದ್ದಾರೆ.
ಅತ್ಯಂತ ಬಡ ರಾಜ್ಯಗಳ ಸೂಚ್ಯಂಕದಲ್ಲಿ ಮಧ್ಯಪ್ರದೇಶ(ಶೇ 36.65)ನಾಲ್ಕನೇ ಸ್ಥಾನದಲ್ಲಿದ್ದರೆ, ಮೇಘಾಲಯ (ಶೇ 32.67) ಐದನೇ ಸ್ಥಾನದಲ್ಲಿದೆ.
ಕೇರಳ(ಶೇ. 0.71), ಗೋವಾ(ಶೇ. 3.76), ಸಿಕ್ಕಿಂ (ಶೇ. 3.82), ತಮಿಳುನಾಡು(ಶೇ. 4.89) ಮತ್ತು ಪಂಜಾಬ್(ಶೇ. 5.59) ರಾಜ್ಯಗಳು ದೇಶದಲ್ಲಿಯೇ ಅತ್ಯಂತ ಕಡಿಮೆ ಪ್ರಮಾಣದ ಬಡತನವನ್ನು ದಾಖಲಿಸಿವೆ ಮತ್ತು ಸೂಚ್ಯಂಕದ ಕೆಳಭಾಗದಲ್ಲಿವೆ.
ವರದಿಯ ಪ್ರಕಾರ, ಭಾರತದ ರಾಷ್ಟ್ರೀಯ ಎಂಪಿಐ ಮಾಪನವೂ ಆಕ್ಸ್‌ಫರ್ಡ್ ಪಾವರ್ಟಿ ಮತ್ತು ಮಾನವ ಅಭಿವೃದ್ಧಿ ಉಪಕ್ರಮ(OPHI) ಮತ್ತು ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ(UNDP) ಅಭಿವೃದ್ಧಿಪಡಿಸಿದ ಜಾಗತಿಕವಾಗಿ ಅಂಗೀಕರಿಸಲ್ಪಟ್ಟ ಮತ್ತು ದೃಢವಾದ ವಿಧಾನವನ್ನು ಬಳಸುತ್ತದೆ.