ರೈತರ ಮೇಲೆ ‘ವ್ಯವಸ್ಥಿತ ದಾಳಿ’ ನಡೆದಿದ್ದು, ಭಾರತದಲ್ಲಿ ಸರ್ವಾಧಿಕಾರವಿದೆ: ಯೋಗಿ ಸರ್ಕಾರದ ವಿರುದ್ಧ ರಾಹುಲ್ ವಾಗ್ದಾಳಿ
ನಾಲ್ವರು ರೈತರು ಸೇರಿ 8 ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ‘ವ್ಯವಸ್ಥಿತ ದಾಳಿ’ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರು, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
Published: 06th October 2021 12:01 PM | Last Updated: 06th October 2021 01:50 PM | A+A A-

ರಾಹುಲ್ ಗಾಂಧಿ
ನವದೆಹಲಿ: ನಾಲ್ವರು ರೈತರು ಸೇರಿ 8 ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ್–ಖೇರಿ ಹಿಂಸಾಚಾರದಲ್ಲಿ ರೈತರ ಮೇಲೆ ‘ವ್ಯವಸ್ಥಿತ ದಾಳಿ’ನಡೆದಿದೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಬುಧವಾರ ವಾಗ್ದಾಳಿ ನಡೆಸಿದ್ದಾರೆ.
ಹಿಂಸಾಚಾರ ನಡೆದ ಲಖಿಂಪುರಕ್ಕೆ ಕಾಂಗ್ರೆಸ್ ನಿಯೋಗದ ಭೇಟಿಗೆ ಯೋಗಿ ಆದಿತ್ಯನಾಥ್ ಸರ್ಕಾರ ನಿರಾಕರಿಸಿದ ಬೆನ್ನಲ್ಲೇ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಬ್ರಿಟಿಷರ ಬೂಟಿನ ರುಚಿ ಕಂಡಿರುವ ಬಿಜೆಪಿಗರು ಅವರಿಗಿಂತ ಕ್ರೂರಿಗಳು: ಹೊರಗಿನವರಿಗಿಂತ ಒಳಗಿನವರ ದೌರ್ಜನ್ಯವೇ ಹೆಚ್ಚು ಆಘಾತಕಾರಿ!
ರೈತರನ್ನ ವ್ಯವಸ್ಥಿತವಾಗಿ ಕೊಲೆ ಮಾಡಲಾಗುತ್ತಿದೆ. ಇವತ್ತು ನಾವು ಇಬ್ಬರು ಮುಖ್ಯಮಂತ್ರಿಗಳೊಂದಿಗೆ ಹಿಂಸಾಚಾರ ನಡೆದ ಸ್ಥಳಕ್ಕೆ ಭೇಟಿ ನೀಡಲು ಪ್ರಯತ್ನಿಸುತ್ತಿದ್ದೇವೆ. ಆದರೆ 144 ಸೆಕ್ಷನ್ ಹೇರಿ ಕೇವಲ ಮೂರು ಜನರಿಗೆ ಮಾತ್ರ ಅವಕಾಶ ನೀಡಿದ್ದಾರೆ. ನಾವೀಗ ಅಲ್ಲಿಗೆ ಹೋಗುತ್ತಿದ್ದೇವೆ. ನಾವು ಅಲ್ಲಿಗೆ ಹೋಗಿ ರೈತರಿಗೆ ಬೆಂಬಲ ಸೂಚಿಸುತ್ತೇವೆ. ಯಾಕೆ ಉತ್ತರ ಪ್ರದೇಶ ಸರ್ಕಾರ, ಕಾಂಗ್ರೆಸ್ ನಿಯೋಗ ಅಲ್ಲಿಗೆ ಹೋಗಲು ಬಿಡುತ್ತಿಲ್ಲ.
ನಿನ್ನೆಯಷ್ಟೇ ಪ್ರಧಾನಿ ಮೋದಿಯವರು ಲಖನೌಗೆ ಭೇಟಿ ನೀಡಿದ್ದರು. ಆದರೆ, ಲಖಿಂಪುರ್ ಖೇರಿಗೆ ಭೇಟಿ ನೀಡಲಿಲ್ಲ. ರೈತರ ಮೇಲೆ ನಡೆದಿರುವ ವ್ಯವಸ್ಥಿತ ದಾಳಿ ಇದಾಗಿದೆ. ದೇಶದಲ್ಲಿ ಸರ್ವಾಧಿಕಾರವಿದೆ. ಉತ್ತರಪ್ರದೇಶಕ್ಕೆ ರಾಜಕೀಯ ನಾಯಕರು ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಪ್ರಿಯಾಂಕ ಗಾಂಧಿ ಬಂಧಿಸಿರುವ ಕುರಿತು ಮಾತನಾಡಿ..ರೈತರ ಬಗ್ಗೆ ಧ್ವನಿ ಎತ್ತಿದ ಪ್ರಿಯಾಂಕರನ್ನೂ ಬಂಧಿಸಿದ್ದಾರೆ. ಅವರು ರೈತರ ಸಮಸ್ಯೆಯ ಪ್ರಶ್ನೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಾರೆ. ನಾವು ಮ್ಯಾನ್ ಹ್ಯಾಂಡ್ಲಿಂಗ್ನಿಂದ ಪ್ರಭಾವಿತರಾಗಿಲ್ಲ. ಇಲ್ಲಿ ರೈತರನ್ನು ಕೊಲ್ಲಲಾಗುತ್ತಿದೆ. ದೇಶದಲ್ಲಿ ಸರ್ವಾಧಿಕಾರಿ ಆಡಳಿತ ಇದೆ ಎಂದು ಮೋದಿ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಬುಧವಾರದೊಳಗೆ ಪ್ರಿಯಾಂಕಾ ಗಾಂಧಿ ಬಿಡುಗಡೆ ಮಾಡದಿದ್ದರೆ ಲಖೀಂಪುರ್ ಖೇರಿಗೆ ಪಂಜಾಬ್ ಕಾಂಗ್ರೆಸ್ ಬರಲಿದೆ- ಸಿಧು
ಈ ನಡುವೆ ಲಖನೌ ಪೊಲೀಸ್ ಆಯುಕ್ತರು ಹೇಳಿಕೆ ನೀಡಿ, ಲಖಿಂಪುರ್ ಖೇರಿಗೆ ಭೇಟಿ ನೀಡಲು ರಾಹುಲ್ ಗಾಂಧಿಯವರಿಗೆ ಸರ್ಕಾರ ಅವಕಾಶ ನೀಡಿಲ್ಲ. ಲಖನೌಗೆ ಅವರು ಬಂದಿದ್ದೇ ಆಧರೆ, ವಿಮಾನ ನಿಲ್ದಾಣದಲ್ಲಿಯೇ ಲಖಿಂಪುರ್ ಖೇರಿ ಹಾಗೂ ಸಿತಾಪುರಕ್ಕೆ ಭೇಟಿ ನೀಡದಂತೆ ಮನವಿ ಮಾಡಿಕೊಳ್ಳಲಾಗುತ್ತದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ರಾಹುಲ್ ಗಾಂಧಿಯವರನ್ನು ತಡೆಯುವಂತೆ ಲಖಿಂಪುರ್ ಖೇರಿ ಹಾಗೂ ಸೀತಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಹಾಗೂ ಎಸ್'ಪಿ ಮನವಿ ಮಾಡಿಕೊಂಡಿದ್ದಾರೆಂದು ಹೇಳಿದ್ದಾರೆ.