ಲಖೀಂಪುರ ಘಟನೆ ಕುರಿತ ಟ್ವೀಟ್ ತಂದ ಆಪತ್ತು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಮನೇಕಾ, ವರುಣ್ ಗಾಂಧಿ ಕೊಕ್!

ಭಾರತೀಯ ಜನತಾಪಕ್ಷ ತನ್ನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಪಟ್ಟಿಯಿಂದ ಬಿಜೆಪಿ ಹಿರಿಯ ನಾಯಕಿ ಮನೇಕಾ ಗಾಂಧಿ, ವರುಣ್ ಗಾಂಧಿ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.
ಮನೇಕಾ-ವರುಣ್ ಗಾಂಧಿ
ಮನೇಕಾ-ವರುಣ್ ಗಾಂಧಿ

ನವದೆಹಲಿ: ಭಾರತೀಯ ಜನತಾಪಕ್ಷ ತನ್ನ ಕಾರ್ಯಕಾರಿ ಸಮಿತಿ ಸದಸ್ಯರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಪಟ್ಟಿಯಿಂದ ಬಿಜೆಪಿ ಹಿರಿಯ ನಾಯಕಿ ಮನೇಕಾ ಗಾಂಧಿ, ವರುಣ್ ಗಾಂಧಿ ಅವರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ.

ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಘೋಷಿಸಿದ್ದು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ತಂಡವನ್ನು ಘೋಷಿಸಿದ್ದಾರೆ. 80 ಸಾಮಾನ್ಯ ಸದಸ್ಯರಲ್ಲದೆ, ಕಾರ್ಯಕಾರಣಿಯಲ್ಲಿ 50 ವಿಶೇಷ ಆಹ್ವಾನಿತರು ಮತ್ತು 179 ಖಾಯಂ ಆಹ್ವಾನಿತರು ಇರುತ್ತಾರೆ. 80 ಸದಸ್ಯರಲ್ಲಿ 37 ಮಂದಿ ಕೇಂದ್ರ ಸಚಿವರು ಮತ್ತು ರಾಜ್ಯದ ಹಲವಾರು ಸಚಿವರು ಸಮಿತಿಯ ಭಾಗವಾಗಿದ್ದಾರೆ.

ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ, ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಡಾ. ಮುರಳಿ ಮನೋಹರ ಜೋಷಿ, ಕೇಂದ್ರ ಸಚಿವ ರಾಜ್ ನಾಥ್ ಸಿಂಗ್, ಅಮಿತ್ ಷಾ, ನಿತಿನ್ ಗಡ್ಕರಿ, ಪಿಯೂಷ್ ಗೋಯಲ್ ಮುಂತಾದ ಎಲ್ಲಾ ರಾಷ್ಟ್ರೀಯ ಪದಾಧಿಕಾರಿಗಳನ್ನು ಸೇರಿಸಲಾಗಿದೆ.  

ಮಿಥುನ್ ಚಕ್ರವರ್ತಿ, ಹೇಮಾಮಾಲಿನಿಗೆ ಸ್ಥಾನ
ಇನ್ನು ಈ 309 ಸದಸ್ಯರ ಈ ಹೊಸ ಕಾರ್ಯಕಾರಿಣಿಯಲ್ಲಿ,  ಮಿಥುನ್ ಚಕ್ರವರ್ತಿ ಮತ್ತು ಹೇಮಾ ಮಾಲಿನಿಗೂ ಸ್ಥಾನ ನೀಡಲಾಗಿದ್ದು, ಅಮಿತ್ ಶಾ, ರಾಜನಾಥ್ ಸಿಂಗ್, ಇತ್ತೀಚೆಗೆ ಸಂಪುಟಕ್ಕೆ ಸೇರ್ಪಡೆಗೊಂಡ ಸಚಿವ ಅಶ್ವಿನಿ ವೈಷ್ಣವ್ ಅವರೂ ಸೇರ್ಪಡೆಯಾಗಿದ್ದಾರೆ. ಅಲ್ಲದೆ ಇತ್ತೀಚೆಗೆ ಸಂಪುಟದಿಂದ ಕೈಬಿಟ್ಟ ಮಾಜಿ ಸಚಿವರಾದ ಹರ್ಷವರ್ಧನ್, ರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಕೂಡ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಾಗಿ ಉಳಿದಿದ್ದಾರೆ.

ಆದರೆ ಮೇನಕಾ ಗಾಂಧಿ ಮತ್ತು ವರುಣ್ ಗಾಂಧಿ ಅವರನ್ನು ಈ ಪಟ್ಟಿಯಿಂದ ಕೈ ಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ. 

ಮನೇಕಾ ಗಾಂಧಿ ಕುಟುಂಬಕ್ಕೆ ಮುಳುವಾಯಿತೇ ಲಖೀಂಪುರ ಖೇರಿ ಘಟನೆ
ಇನ್ನು ಉತ್ತರ ಪ್ರದೇಶದ ಬಿಜೆಪಿ ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿರುವ ಸೀತಾಪುರದ ಲಖೀಂಪುರಖೇರಿಯಲ್ಲಿ ನಡೆದ ರೈತರ ಹತ್ಯೆ ಮತ್ತು ಹಿಂಸಾಚಾರ ಪ್ರಕರಣದ ಕುರಿತು ವರಣ್ ಗಾಂಧಿ ಸತತ ಟ್ವೀಟ್ ಮಾಡುತ್ತಿದ್ದರು. ಇಂದೂ ಕೂಡ ಹಿಂಸಾಚಾರಕ್ಕೆ ಜವಾಬ್ದಾರರನ್ನಾಗಿ ಮಾಡಬೇಕು ಎಂದು ಟ್ವೀಟ್ ಮಾಡುವ ಯಾರ ಹೆಸರನ್ನೂ ಹೇಳದೇ ಸರ್ಕಾರದ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬೆಳವಣಿಗೆ ಕಾರ್ಯಕಾರಿ ಸಮಿತಿ ರಚನೆ ಮೇಲೆ ಪರಿಣಾಮ ಬೀರಿದೆ ಎನ್ನಲಾಗುತ್ತಿದೆ. 

ರಾಷ್ಟ್ರೀಯ ಕಾರ್ಯಕಾರಿಣಿಯು ಪಕ್ಷದ ಪ್ರಮುಖ ವಿಚಾರಗಳ ಜೊತೆಗೆ, ಸರ್ಕಾರ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳನ್ನು ಚರ್ಚಿಸುತ್ತದೆ. ಹಾಗೆಯೇ ಪಕ್ಷದ ಸಂಘಟನೆಗೆ ಅಗತ್ಯವಾದ ಕಾರ್ಯಸೂಚಿಯನ್ನು ರೂಪಿಸುತ್ತದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com