ಲಖಿಂಪುರ್ ಖೇರಿ ಹಿಂಸಾಚಾರ 'ಪೂರ್ವ ಯೋಜಿತ ಪಿತೂರಿ', ದಸರಾದಲ್ಲಿ ಪ್ರಧಾನಿ ಮೋದಿ ಪ್ರತಿಕೃತಿ ದಹನ: ರೈತರು
ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರನನ್ನು ಬಂಧಿಸುವಂತೆ ಒತ್ತಾಯಿಸಿರುವ ರೈತ ಮುಖಂಡರು, ಈ ಘಟನೆಯು "ಪೂರ್ವ ಯೋಜಿತ ಪಿತೂರಿ"...
Published: 09th October 2021 05:19 PM | Last Updated: 09th October 2021 05:19 PM | A+A A-

ಯೋಗೇಂದ್ರ ಯಾದವ್
ನವದೆಹಲಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಮತ್ತು ಅವರ ಪುತ್ರನನ್ನು ಬಂಧಿಸುವಂತೆ ಒತ್ತಾಯಿಸಿರುವ ರೈತ ಮುಖಂಡರು, ಈ ಘಟನೆಯು "ಪೂರ್ವ ಯೋಜಿತ ಪಿತೂರಿ" ಎಂದು ಶನಿವಾರ ಆರೋಪಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನಾಯಕ ಯೋಗೇಂದ್ರ ಯಾದವ್,
ರೈತರ ವಿರುದ್ಧ ಈ ಪಿತೂರಿ ನಡೆಸಿದ ಮತ್ತು ಆರೋಪಿಗಳನ್ನು ರಕ್ಷಿಸುತ್ತಿರುವ ಅಜಯ್ ಮಿಶ್ರಾ ಅವರನ್ನು ಕೇಂದ್ರ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಅಕ್ಟೋಬರ್ 15 ರಂದು ದಸರಾ ಹಬ್ಬದಂದು ಸಂಯುಕ್ತ ಕಿಸಾನ್ ಮೋರ್ಚಾ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರತಿಕೃತಿಗಳನ್ನು ದಹಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಭಾನುವಾರ ನಡೆದ ಹಿಂಸಾಚಾರದಲ್ಲಿ ನಾಲ್ವರು ರೈತರು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯು ಪೂರ್ವ ಯೋಜಿತ ಪಿತೂರಿಯ ಭಾಗವಾಗಿದೆ ಮತ್ತು ದಾಳಿಕೋರರು ರೈತರನ್ನು ಭಯಭೀತರನ್ನಾಗಿಸಲು ಪ್ರಯತ್ನಿಸಿದ್ದಾರೆ ಎಂದು ರೈತ ನಾಯಕ ದರ್ಶನ್ ಪಾಲ್ ಅವರು ಹೇಳಿದ್ದಾರೆ.
ಪ್ರತಿಭಟಿಸುವ ರೈತರ ವಿರುದ್ಧ ಸರ್ಕಾರ ಹಿಂಸಾತ್ಮಕ ಮಾರ್ಗ ಅನುಸರಿಸುತ್ತಿದೆ. ಆದರೆ ನಾವು ಹಿಂಸೆಯ ಹಾದಿಯನ್ನು ಹಿಡಿಯುವುದಿಲ್ಲ ಎಂದು ದರ್ಶನ್ ಪಾಲ್ ಅವರು ಹೇಳಿದ್ದಾರೆ.