ಲಖಿಂಪುರ್ ಖೇರಿ ಪ್ರಕರಣ: ಕ್ರೈ ಬ್ರಾಂಚ್ ಅಧಿಕಾರಿಗಳ ಮುಂದೆ ಪ್ರಮುಖ ಆರೋಪಿ ಅಶೀಶ್ ಮಿಶ್ರಾ ಹಾಜರು, ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಸಿಧು!

ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಅಶೀಶ್ ಮಿಶ್ರಾ ಇಂದು ಕ್ರೈ ಬ್ರಾಂಚ್ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.
ಕ್ರೈ ಬ್ರಾಂಚ್ ಕಚೇರಿಗೆ ಆಗಮಿಸಿದ ಅಶೀಶ್ ಮಿಶ್ರಾ
ಕ್ರೈ ಬ್ರಾಂಚ್ ಕಚೇರಿಗೆ ಆಗಮಿಸಿದ ಅಶೀಶ್ ಮಿಶ್ರಾ

ನವದೆಹಲಿ: ಲಖಿಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಅಶೀಶ್ ಮಿಶ್ರಾ ಇಂದು ಕ್ರೈ ಬ್ರಾಂಚ್ ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಅಶೀಶ್ ಮಿಶ್ರಾ ಮೇಲೆ ಸಾಕಷ್ಟು ಒತ್ತಡವಿತ್ತು ಎನ್ನಲಾಗಿದೆ. ಒಂದೆಡೆ ಸುಪ್ರೀಂ ಕೋರ್ಟ್ ಚಾಟಿ, ಮತ್ತೊಂದೆಡೆ ಬಿಜೆಪಿ ಪಕ್ಷಕ್ಕಾಗುತ್ತಿದ್ದ ಮುಜುಗರ ಅಶೀಶ್ ಮಿಶ್ರಾ ವಿಚಾರಣೆ ಹಾಜರಾಗಲು ಒತ್ತಡ ಹೇರಿತ್ತು ಎನ್ನಲಾಗಿದೆ. ಇಂದು ಬೆಳಗ್ಗೆಯೂ ಕೂಡ ಉತ್ತರ ಪ್ರದೇಶ ಪೊಲೀಸರು ಅಶೀಶ್ ಮಿಶ್ರಾಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. 

ಈ ಸಮನ್ಸ್ ವಿಚಾರದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಆರೋಪಿ ಪರ ಕಾನೂನು ಸಲಹೆಗಾರ ಅವಧೇಶ್ ಕುಮಾರ್ ಅವರು, 'ನಾವು ಸೂಚನೆಯನ್ನು ಗೌರವಿಸುತ್ತೇವೆ ಮತ್ತು ತನಿಖೆಗೆ ಸಹಕರಿಸುತ್ತೇವೆ. ಆಶಿಶ್ ಮಿಶ್ರಾ ಇಂದು ಪೊಲೀಸರ ಮುಂದೆ ಹಾಜರಾಗಲಿದ್ದಾರೆ ಎಂದು ಹೇಳಿದ್ದರು.  

ಅದರಂತೆ ಆಶಿಶ್ ಮಿಶ್ರಾ, ಶನಿವಾರ ಉತ್ತರ ಪ್ರದೇಶ ಪೊಲೀಸರ ಅಪರಾಧ ವಿಭಾಗದ ಅಧಿಕಾರಿಗಳ ಮುಂದೆ ಮುಂದೆ ಹಾಜರಾದರು. ಆಶಿಶ್ ಮಿಶ್ರಾ ಶನಿವಾರ ಹಾಜರಾಗುವ ಮುನ್ನ ಪೊಲೀಸರು ತೆನಿ ನಿವಾಸ ಮತ್ತು ಲಖಿಂಪುರ್ ಖೇರಿಯಲ್ಲಿ ಸಾಕಷ್ಟು ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿದ್ದರು. 

ಕಳೆದ ಭಾನುವಾರ ನಡೆದ ಹಿಂಸಾಚಾರವು ದೇಶವನ್ನು ತಲ್ಲಣಗೊಳಿಸಿತ್ತು. ಕೇಂದ್ರ ಸಚಿವರು ಆಯೋಜಿಸಿದ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾಗ ನಡೆದ ಅವಘಡದಲ್ಲಿ ನಾಲ್ಕು ರೈತರು ಸೇರಿದಂತೆ ಎಂಟು ಜೀವ ಬಲಿಯಾಗಿತ್ತು. 

ಬಳಿಕ ರೈತರ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿತ್ತು, ಈ ಪೈಕಿ ಕೇಂದ್ರ ಸಚಿವರ ಪುತ್ರ ಆಶಿಶ್ ಮಿಶ್ರಾ ಮತ್ತು 15-20 ಅಪರಿಚಿತ ವ್ಯಕ್ತಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಗಲಭೆ ಇತ್ಯಾದಿಗಳನ್ನು ದಾಖಲಿಸಲಾಗಿದೆ. 

ಚಾಟಿ ಬೀಸಿದ್ದ ಸುಪ್ರೀಂ ಕೋರ್ಟ್
ಇನ್ನು ಇದೇ ಪ್ರಕರಣದ ವಿಚಾರವಾಗಿ ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಪೊಲೀಸರು ಮತ್ತು ಸರ್ಕಾರಕ್ಕೆ ಚಾಟಿ ಬೀಸಿತ್ತು. ಪ್ರಕರಣ ನಡೆದು ಐದು ದಿನಗಳ ನಂತರವೂ ಆಶಿಶ್‌ನನ್ನು ಬಂಧಿಸದಿದ್ದಕ್ಕಾಗಿ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನ ವ್ಯಕ್ತಪಡಿಸಿತ್ತು.

ಈ ಹಿಂದೆ ಯುಪಿ ಪೊಲೀಸರು ಗುರುವಾರ ನೀಡಿದ ಮೊದಲ ಸಮನ್ಸ್‌ಗೆ ಪ್ರತಿಕ್ರಿಯೆಯಾಗಿ ಆಶಿಶ್ ಮಿಶ್ರಾ ಶುಕ್ರವಾರ ಹಾಜರಾಗಲಿಲ್ಲ. ನಂತರ ಪೊಲೀಸ್ ಅಧಿಕಾರಿಗಳು ಶುಕ್ರವಾರ ಎರಡನೇ ಸಮನ್ಸ್ ನೀಡಿದ್ದರು, ಆಶಿಶ್ ಅವರನ್ನು ಲಖಿಂಪುರದಲ್ಲಿ ಶನಿವಾರ ಬೆಳಿಗ್ಗೆ 11 ಗಂಟೆಯೊಳಗೆ ವಿಚಾರಣೆಗಾಗಿ ಅಪರಾಧ ವಿಭಾಗದ ಮುಂದೆ ಹಾಜರುಪಡಿಸುವಂತೆ ಕೇಳಿಕೊಂಡರು. ಆಶಿಶ್ ಶುಕ್ರವಾರ ಪೊಲೀಸ್ ಸಮನ್ಸ್ ಗೆ ಉತ್ತರಿಸಿ ಅವರ ತಂದೆ ಮತ್ತು ನನ್ನ ಆರೋಗ್ಯದ ಕಾರಣಗಳಿಂದ" ಪೊಲೀಸರ ವಿಚಾರಣೆಗೆ ತೆರಳಲು ಸಾಧ್ಯವಿಲ್ಲ ಎಂದು ಹೇಳಿದ್ದರು. 

ಉಪವಾಸ ಸತ್ಯಾಗ್ರಹ ಕೈ ಬಿಟ್ಟ ಸಿಧು!
ಇನ್ನು ಲಖಿಂಪುರಖೇರಿ ಪ್ರಕರಣದ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕೈ ಬಿಟ್ಟಿದ್ದಾರೆ. ಅತ್ತ ಅಶೀಶ್ ಮಿಶ್ರಾ ಕ್ರೈ ಬ್ರಾಂಚ್ ಕಚೇರಿಗೆ ಆಗಮಿಸುತ್ತಿದ್ದಂತೆಯೇ ಇತ್ತ ಲಖನೌನಲ್ಲಿ ಸಿಧು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com