ಪೋಷಕರನ್ನು ಕೊಚ್ಚಿ ಕೊಲೆ ಮಾಡಿದ ಮಗ: ಕೇರಳದ ಕಾಸರಗೋಡಿನ ವ್ಯಕ್ತಿಗೆ 28 ವರ್ಷದ ನಂತರ ಜೀವಾವಧಿ ಶಿಕ್ಷೆ
28 ವರ್ಷಗಳ ಹಿಂದೆ ಪೋಷಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿರುವ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
Published: 12th October 2021 09:46 AM | Last Updated: 12th October 2021 01:10 PM | A+A A-

ಸಾಂದರ್ಭಿಕ ಚಿತ್ರ
ಕಾಸರಗೋಡು: 28 ವರ್ಷಗಳ ಹಿಂದೆ ಪೋಷಕರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ 65 ವರ್ಷದ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿರುವ ಘಟನೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಲ್ಲಿ ನಡೆದಿದೆ.
ಕೊಲೆ ಮಾಡಿದ ಅಪರಾಧಿ ಮಗ 25 ವರ್ಷಗಳ ಕಾಲ ಮಾನಸಿಕ ರೋಗಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರಿಂದ ವಿಚಾರಣೆ ನಡೆದು ತೀರ್ಪು ಹೊರಬರಲು ಇಷ್ಟು ಸುದೀರ್ಘ ವರ್ಷ ಹಿಡಿಯಿತು.
ಅಂದು ಕೂಲಿ ಕಾರ್ಮಿಕನಾಗಿದ್ದ ಸದಾಶಿವ 1993 ಮಾರ್ಚ್ 22ರಂದು ಕೇರಳ ರಾಜ್ಯದ ಕುಂಬ್ಳೆಯ ತಲಕಲೈ ಗ್ರಾಮದಲ್ಲಿ ತನ್ನ ಪೋಷಕರಾದ 63 ವರ್ಷದ ಮಂಕುಮೂಲ್ಯ ಮತ್ತು 53 ವರ್ಷದ ಲಕ್ಷ್ಮಿ ಎಂಬ ಪೋಷಕರನ್ನು ಕೊಚ್ಚಿ ಕೊಲೆ ಮಾಡಿದ್ದ. ಇಷ್ಟು ವರ್ಷ ವಿಚಾರಣೆ ನಡೆಸಿ ಸದಾಶಿವ ಅಪರಾಧಿ ಎಂದು ತೀರ್ಪು ನೀಡಿದ ಕಾಸರಗೋಡು ಹೆಚ್ಚುವರಿ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಉನ್ನಿಕೃಷ್ಣನ್ ಎ ವಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
1993ರ ಮಾರ್ಚ್ 22ರಂದು ಮಧ್ಯಾಹ್ನ, ಸದಾಶಿವನ ತಾಯಿ ರೇಡಿಯೊದ ಶಬ್ಧವನ್ನು ಕಡಿಮೆ ಮಾಡುವಂತೆ ಕೇಳಿದಾಗ ತೀವ್ರವಾಗಿ ಜಗಳವಾಡಿದ್ದನು. ನಂತರ ಅದೇ ದಿನ ರಾತ್ರಿ 11 ಗಂಟೆ ಸುಮಾರಿಗೆ ಆತನಿಗೆ ಪೋಷಕರ ಜೊತೆ ವಾಗ್ವಾದ ನಡೆದಿತ್ತು. ಸಿಟ್ಟಿನಲ್ಲಿ ಕೊಡಲಿಯಿಂದ ಪೋಷಕರನ್ನು ಕೊಚ್ಚಿ ಕೊಲೆ ಮಾಡಿಬಿಟ್ಟಿದ್ದನು.
ಈ ಕೃತ್ಯವನ್ನು ಸದಾಶಿವನ ಪತ್ನಿ ಮತ್ತು ಸುಮಾರು ನಾಲ್ಕು ಮತ್ತು ಐದು ವರ್ಷ ವಯಸ್ಸಿನ ಮಕ್ಕಳು ನೋಡಿದ್ದಾರೆ. ಅವರು ಕಿರುಚಿದಾಗ, ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಸದಾಶಿವನ ಸಹೋದರ ಮತ್ತು ಆತನ ಪತ್ನಿ ಓಡಿ ಬಂದು ಕೊಡಲಿ ಹಿಡಿದು ನಿಂತಿದ್ದನ್ನು ನೋಡಿದ್ದಾರೆ.
ಸದಾಶಿವನ ಪತ್ನಿ ಸೇರಿದಂತೆ ಎಲ್ಲರೂ ಸದಾಶಿವನ ವಿರುದ್ಧ ಸಾಕ್ಷಿ ಹೇಳಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಪಿ ರಾಘವನ್ ಹೇಳಿದ್ದಾರೆ.
ಮಾನಸ್ಥಿಕ ಸ್ಥಿಮಿತ ಕಳೆದುಕೊಂಡಿದ್ದ ಸದಾಶಿವ: ಸದಾಶಿವನನ್ನು ಬಂಧಿಸಿದ ಕೂಡಲೇ, ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ನ್ಯಾಯಾಲಯದ ನಿರ್ದೇಶನದ ಮೇರೆಗೆ ಆತನನ್ನು ಕೋಯಿಕ್ಕೋಡ್ ಸಮೀಪದ ಕುತಿರವತ್ತಂನಲ್ಲಿರುವ ಸರ್ಕಾರಿ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಸೇರಿಸಲಾಯಿತು. ಅಲ್ಲಿ 2018 ರವರೆಗೆ ಚಿಕಿತ್ಸೆ ಪಡೆಯುತ್ತಿದ್ದ. ಇದರಿಂದಾಗಿ ವಿಚಾರಣೆ ವಿಳಂಬವಾಯಿತು ಎಂದು ಹೇಳುತ್ತಾರೆ.
ಇದೀಗ ಮಾನಸಿಕವಾಗಿ ಸದಾಶಿವ ಸದೃಢನಾಗಿರುವುದರಿಂದ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದು, 30,000 ದಂಡವನ್ನು ವಿಧಿಸಿದೆ. ದಂಡ ಪಾವತಿಸದಿದ್ದರೆ, ಆತ ಇನ್ನೂ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.