ಹಾವಿನಿಂದ ಕಚ್ಚಿಸಿ ಪತ್ನಿಯ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ

ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಪತಿ ಸೂರಜ್‌ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಹಾವು ಕಚ್ಚಿಸಿ ಪತ್ನಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ದೋಷಿಯಾಗಿರುವ ಸೂರಜ್‌ಗೆ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 
ಉತ್ರಾ ಹಾಗೂ ಸೂರಜ್
ಉತ್ರಾ ಹಾಗೂ ಸೂರಜ್

ಕೊಲ್ಲಂ: ಅಂಗವಿಕಲೆಯಾಗಿದ್ದ ಪತ್ನಿ ಉತ್ರಾ ಅವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದ ಪತಿ ಸೂರಜ್‌ ಮೇಲಿನ ಎಲ್ಲಾ ಆರೋಪಗಳು ಸಾಬೀತಾಗಿದ್ದು, ಹಾವು ಕಚ್ಚಿಸಿ ಪತ್ನಿ ಕೊಲೆ ಮಾಡಿರುವುದು ದೃಢಪಟ್ಟಿದೆ. ಈ ಪ್ರಕರಣದಲ್ಲಿ ದೋಷಿಯಾಗಿರುವ ಸೂರಜ್‌ಗೆ ನ್ಯಾಯಾಲಯವು ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ. 

ಕೊಲ್ಲಂ ಜಿಲ್ಲೆಯ ಹೆಚ್ಚುವರಿ ಸೆಷನ್ಸ್​ ಕೋರ್ಟ್​ನಿಂದ ಅಪರಾಧಿ ಸೂರಜ್​ಗೆ ಈ ಶಿಕ್ಷೆಯನ್ನು ವಿಧಿಸಿದ್ದು, ರೂ.5 ಲಕ್ಷ  ದಂಡವನ್ನು ಕೂಡಾ ವಿಧಿಸಲಾಗಿದೆ. ಒಂದು ವೇಳೆ ದಂಡವನ್ನು ಪಾವತಿಸಲು ವಿಫಲವಾದರೆ ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ನ್ಯಾಯಾಲಯ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಮಂಗಳವಾರವಷ್ಟೇ ವ್ಯಕ್ತಿಯನ್ನು ಅಪರಾಧಿ ಎಂದು ಘೋಷಿಸಿದ್ದ ನ್ಯಾಯಾಲಯ ಇದೊಂದು ಅಪರೂಪದಲ್ಲೇ ಅಪರೂಪದ ಪ್ರಕರಣ ಎಂದು ಉಲ್ಲೇಖಿಸಿತ್ತು. 

ಉತ್ರಾ ಎಂಬಾಕೆಯನ್ನು ವಿವಾಹವಾಗಿದ್ದ ಸೂರಜ್​ ಆಕೆಯ ಆಸ್ತಿಯನ್ನು ಕಬಳಿಸುವ ಸಲುವಾಗಿ ಸಂಚು ರೂಪಿಸಿದ್ದನು. ಯಾರಿಗೂ ಅನುಮಾನ ಬಾರದಂತೆ ಆಕೆಯನ್ನು ಹತ್ಯೆ ಮಾಡಲು ಹಾವುಗಳನ್ನು ಬಳಸಿಕೊಂಡಿದ್ದನು.

ಕಳೆದ ವರ್ಷ ಮೇ ತಿಂಗಳಲ್ಲಿ ಸೂರಜ್​ ಎಂಬಾತ ರೂ.10 ಸಾವಿರ ನೀಡಿ ಎರಡು ಹಾವು ಖರೀದಿ ಮಾಡಿ, ಅವುಗಳ ಸಹಾಯದಿಂದ ಹೆಂಡತಿಯನ್ನ ಕಚ್ಚಿಸಿ, ಕೊಲೆ ಮಾಡಿದ್ದನು. ಇದಾದ ಬಳಿಕ ಹಾವು ಕಚ್ಚಿದ್ದರಿಂದ ತನ್ನ ಹೆಂಡತಿ ಸಾವನ್ನಪ್ಪಿದ್ದಾಳೆಂದು ಬಿಂಬಿಸಲು ಯತ್ನಿಸಿದ್ದನು.

ಅನುಮಾನಪಟ್ಟ ಉತ್ರಾ ಪೋಷಕರು ದೂರು ದಾಖಲಿಸಿದ್ದು, ತನಿಖೆ ನಂತರ ಸೂರಜ್ ಆಕೆಯನ್ನು ಕೊಂದಿದ್ದಾಗಿ ತಿಳಿದುಬಂದಿತ್ತು. ಬಳಿಕ ತಾನೇ ಈ ಕೃತ್ಯವೆಸಗಿದ್ದಾಗಿ ಪೊಲೀಸರ ಮುಂದೆ ಸೂರಜ್ ತಪ್ಪೊಪ್ಪಿಕೊಂಡಿದ್ದನು. ಹೀಗಾಗಿ ಸೂರಜ್​ ವಿರುದ್ಧ ಸೆಕ್ಷನ್​​ 302(ಕೊಲೆ), 326, 307 ಹಾಗೂ 201ರ ಅಡಿ ದೂರು ದಾಖಲಾಗಿತ್ತು.

ಇದೀಗ ನ್ಯಾಯಾಲಯ ಸೂರಜ್​ಗೆ ಶಿಕ್ಷೆ ವಿಧಿಸಿದೆ. ಉತ್ರಾ ಕುಟುಂಬದ ಪರ ವಕೀಲರು ಮರಣದಂಡನೆಗೆ ಆಗ್ರಹಿಸಿದ್ದರು. ಸೂರಜ್ ವಿರುದ್ಧವಾಗಿ 87 ಸಾಕ್ಷ್ಯಗಳು, 288 ದಾಖಲೆಗಳು ಜೊತೆಗೆ ಪೊಲೀಸರು ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದರು.

ಹೆಚ್ಚುವರಿ ಸೆಷನ್ಸ್​ ಕೋರ್ಟ್​ನ ನ್ಯಾಯಾಧೀಶ ಮನೋಜ್ ಎಂ ಅವರು ಶಿಕ್ಷೆಯನ್ನು ಪ್ರಕಟಿಸಿದ್ದಾರೆ. ಪ್ರಕರಣ ಅಪರೂಪದ್ದಾಗಿದ್ದು, ವ್ಯಕ್ತಿಯ ವಯಸ್ಸು 28 ಆಗಿದೆ. ಹೀಗಾಗಿ ಆತನ ವಯಸ್ಸನ್ನು ಪರಿಗಣಿಸಿ ಆತನಿಗೆ ಮರಣದಂಡನೆ ಬದಲಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆಂದು ವಕೀಲರು ಮಾಹಿತಿ ನೀಡಿದ್ದಾರೆ. 

ವಿಷ ಹಾಕಿ ಕೊಲೆ ಯತ್ನ ನಡೆಸಿದ್ದಕ್ಕೆ 10 ವರ್ಷ ಹಾಗೂ ಸಾಕ್ಷ್ಯಗಳ ನಾಶ ಮಾಡಿದ್ದಕ್ಕೆ 7 ವರ್ಷ ಶಿಕ್ಷೆಯನ್ನು ವಿಧಿಸಿದೆ. ಇದಷ್ಟೇ ಅಲ್ಲದೆ, ರೂ.8.58 ಲಕ್ಷ ದಂಡವನ್ನೂ ವಿಧಿಸಿದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com