
ನವದೆಹಲಿ: 2017 ರಲ್ಲಿ ಡೊಕ್ಲಾಮ್ ಟ್ರೈ-ಜಂಕ್ಷನ್ ನಲ್ಲಿ ಚೀನಾದ ವಿಸ್ತರಣಾವಾದವನ್ನು ಭಾರತ ಹಿಮ್ಮೆಟ್ಟಿಸಿದ್ದು ಈಗ ಇತಿಹಾಸ. ಈ ಘಟನೆಯಲ್ಲಿ ಭಾರತ ಭೂತಾನ್ ಜೊತೆ ನಿಂತು ಅದರ ಭೌಗೋಳಿಕ ಹಕ್ಕು ಪ್ರತಿಪಾದನೆಗೆ ಧ್ವನಿಯಾಗಿತ್ತು. ಈ ಬಳಿಕ ಇಲ್ಲಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ.
ಚೀನಾ-ಭೂತಾನ್ ದೀರ್ಘಾವಧಿಯಿಂದ ಬಾಕಿ ಇರುವ ಗಡಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆಯನ್ನು ತ್ವರಿತಗೊಳಿಸುವುದಕ್ಕೆ ಮೂರು ಹಂತಗಳ ಮಾರ್ಗಸೂಚಿ( ಮಾರ್ಗ ನಕ್ಷೆ)ಯನ್ನು ಅಂತಿಮಗೊಳಿಸಿದ್ದು ಈ ಸಂಬಂಧ ಎಂಒಯುಗೆ ಉಭಯ ರಾಷ್ಟ್ರಗಳೂ ಸಹಿ ಹಾಕಿವೆ.
ಈ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ ಎಂದು ಭಾರತ ಪ್ರತಿಕ್ರಿಯೆ ನೀಡಿದೆ.
ಗಡಿ ಹಂಚಿಕೊಂಡಿರುವ ಡೊಕ್ಲಾಮ್ ಭಾಗದಲ್ಲಿ 2017 ರಲ್ಲಿ ಚೀನಾ ರಸ್ತೆ ನಿರ್ಮಾಣವನ್ನು ವಿಸ್ತರಿಸಲು ಮುಂದಾಗಿತ್ತು. ಭಾರತ ಇದನ್ನು ವಿರೋಧಿಸಿದ್ದ ಪರಿಣಾಮ ಈ ಪ್ರದೇಶದಲ್ಲಿ 73 ದಿನಗಳ ಕಾಲ ಸಂಘರ್ಷದ ಪರಿಸ್ಥಿತಿ ಉಂಟಾಗಿತ್ತು.
ಭೂತಾನ್-ಚೀನಾದ ಇತ್ತೀಚಿನ ಬೆಳವಣಿಗೆ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಗಚಿ "ಭೂತಾನ್-ಚೀನಾ ಗಡಿಗೆ ಸಂಬಂಧಿಸಿದಂತೆ 1984 ರಿಂದಲೂ ಮಾತುಕತೆಯಲ್ಲಿ ತೊಡಗಿವೆ ಅಂತೆಯೇ ಚೀನಾ-ಭಾರತದ ನಡುವೆಯೂ ಗಡಿಗೆ ಸಂಬಂಧಿಸಿದ ಮಾತುಕತೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.
ಚೀನಾದೊಂದಿಗೆ ಮಾತುಕತೆ ನಡೆಸುವ ಬಗ್ಗೆ ಭೂತಾನ್ ಹೇಳಿಕೆ ಬಿಡುಗಡೆ ಮಾಡಿದ್ದು ತನ್ನ ವಿದೇಶಾಂಗ ಸಚಿವ ಲಿಯಾನ್ಪೋ ತಂದಿ ದೋರ್ಜಿ ಹಾಗೂ ಚೀನಾದ ಸಹಾಯಕ ವಿದೇಶಾಂಗ ಸಚಿವ ವೂ ಜಿಯಾಂಗ್‌ಹಾವೊ ಮೂರು ಹಂತಗಳ ಮಾರ್ಗಸೂಚಿಯಿರುವ ಭೂತಾನ್-ಚೀನಾ ಗಡಿ ಮಾತುಕತೆಯನ್ನು ತ್ವರಿತಗೊಳಿಸುವ ಸಂಬಂಧ ಎಂಒಯುಗೆ ಸಹಿ ಹಾಕಿದ್ದಾರೆ ಎಂದು ಹೇಳಿದೆ.
ಈ ವರೆಗೂ ಬಗೆಹರಿಯದೇ ಉಳಿದಿರುವ ಗಡಿ ವಿವಾದಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಿಕೊಳ್ಳುವುದುಈ ಒಪ್ಪಂದದ ಉದ್ದೇಶವಾಗಿದೆ.
Advertisement