ಕೇರಳದಲ್ಲಿ 'ನಿಫಾ' ವೈರಸ್: ಬಾಲಕನ ಸಂಪರ್ಕಕ್ಕೆ ಬಂದಿದ್ದವರು ಸೇಫ್, 20 ಮಂದಿ ರಿಪೋರ್ಟ್ ನೆಗೆಟಿವ್!
ಕೋಳಿಕೋಡ್: ಕೇರಳದಲ್ಲಿ ಭಾನುವಾರ ನಿಫಾ ವೈರಸ್'ಗೆ ಬಲಿಯಾದ 12 ವರ್ಷದ ಬಾಲಕನ ಸಂಪರ್ಕಕ್ಕೆ ಬಂದಿದ್ದವರ ಪೈಕಿ ಯಾರಲ್ಲೂ ನಿಫಾ ವೈರಸ್ ಪತ್ತೆಯಾಗಿಲ್ಲ ಎಂಬುದು ಇದೀಗ ದೃಢಪಟ್ಟಿದೆ.
ಬಾಲಕನ ಸಂಪರ್ಕಕ್ಕೆ ಬಂದಿದ್ದ 30 ಮಂದಿಯ ಮಾದರಿ ಪರೀಕ್ಷೆಗೊಳಪಡಿಸಲಾಗಿದ್ದು, ಈ ಪೈಕಿ 20 ಮಂದಿ ವರದಿಗಳು ನೆಗೆಟಿವ್ ಆಗಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಾಹಿತಿ ನೀಡಿದ್ದಾರೆ.
20 ಮಾದರಿಗಳಲ್ಲಿ 15 ಪುಣೆಯಲ್ಲಿ ಮತ್ತು ಕೋಯಿಕ್ಕೋಡ್ 5 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ ಸುಮಾರು 30 ಮಂದಿಯನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಪ್ರಸ್ತುತ ಕೋಳಿಕೋಡ್ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಸುಮಾರು 68 ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅವರ ಆರೋಗ್ಯವನ್ನು 42 ದಿನಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ನಿಫಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಲ್ಲರ ಆರೋಗ್ಯವೂ ಸ್ಥಿರವಾಗಿದೆ. ನಿಫಾ ಹರಡಿರುವ ಪ್ರದೇಶದ ಪ್ರಾಣಿಗಳಿಂದ ಮಾದರಿ ಸಂಗ್ರಹಿಸಲು ತಜ್ಞರ ತಂಡದೊಂದಿಗೆ, ರಾಜ್ಯದ ಆರೋಗ್ಯ ಇಲಾಖೆಯು ಸಮನ್ವಯ ಸಾಧಿಸಲಿದೆ ಎಂದು ಹೇಳಿದ್ದಾರೆ.
ಭಾನುವಾರ ಮುಂಜಾನೆ 12 ವರ್ಷದ ಬಾಲಕ ನಿಫಾ ಸೋಂಕಿನಿಂದ ಸಾವನ್ನಪ್ಪಿದ್ದ. ಆತ ನಿಫಾ ವೈರಸ್ನಿಂದ ಆತ ಸಾವನ್ನಪ್ಪಿದ್ದಾನೆ ಎಂದು ವೈದ್ಯಕೀಯ ಮೂಲಗಳು ದೃಢೀಕರಿಸಿದ ನಂತರ ಕೋಯಿಕ್ಕೋಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಎಚ್ಚರಿಕೆ ವಹಿಸಲಾಯಿತು. ಸೋಂಕು ಬೇರೆಡೆ ಹರಡದಂತೆ ತಡೆಯಲು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದರು.
ಮೃತ ಬಾಲಕನ ಮನೆಯ ಸುತ್ತಲೂ ಸುಮಾರು ಮೂರು ಕಿಲೋಮೀಟರ್ ದೂರದವರೆಗೆ ನಿರ್ಬಂಧ ವಿಧಿಸಲಾಯಿತು. ಚತಮಂಗಲಂ ಪಂಚಾಯಿತಿಯ ಪಜೂರು (ವಾರ್ಡ್ -9)ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ನ ತಂಡ ಹುಡುಗನ ಮನೆಗೆ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ