ಅಕ್ಟೋಬರ್ ನಿಂದ ಭತ್ತದ ಖರೀದಿಗೂ ಮುನ್ನ ರೈತರ ಭೂಮಿ ದಾಖಲೆಗಳನ್ನು ಪರಿಶೀಲಿಸಲಿರುವ ಕೇಂದ್ರ

ಕನಿಷ್ಟ ಬೆಂಬಲ ಬೆಲೆ ರೈತರಿಗೇ ಸಿಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ವಿನೂತನ ಕ್ರಮ ಕೈಗೊಂಡಿದ್ದು, ಭತ್ತ ಖರೀದಿಗೂ ಮುನ್ನ ರೈತರ ಭೂಮಿ ದಾಖಲೆಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದೆ.
ಭತ್ತದ (ಸಂಗ್ರಹ ಚಿತ್ರ)
ಭತ್ತದ (ಸಂಗ್ರಹ ಚಿತ್ರ)

ನವದೆಹಲಿ: ಕನಿಷ್ಟ ಬೆಂಬಲ ಬೆಲೆ ರೈತರಿಗೇ ಸಿಗುತ್ತಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಕೇಂದ್ರ ಸರ್ಕಾರ ವಿನೂತನ ಕ್ರಮ ಕೈಗೊಂಡಿದ್ದು, ಭತ್ತ ಖರೀದಿಗೂ ಮುನ್ನ ರೈತರ ಭೂಮಿ ದಾಖಲೆಗಳನ್ನು ಪರಿಶೀಲನೆ ನಡೆಸಲು ನಿರ್ಧರಿಸಿದೆ. ಅಕ್ಟೋಬರ್ ನಿಂದ ಈ ವ್ಯವಸ್ಥೆ ಜಾರಿಯಾಗಲಿದೆ.

ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಈ ಬಗ್ಗೆ ಮಾಹಿತಿ ನೀಡಿದ್ದು, ಜಮ್ಮು-ಕಾಶ್ಮೀರ, ಉತ್ತರಾಖಂಡ್, ಅಸ್ಸಾಂನ್ನು ಹೊರತುಪಡಿಸಿ ಉಳಿದೆಲ್ಲಾ ರಾಜ್ಯಗಳೂ ಈ ಮಾದರಿಯನ್ನು ಅನುಸರಿಸಲು ಸಿದ್ಧವಾಗಿದ್ದು, ಇಂಟಿಗ್ರೇಟೆಡ್ ಡಿಜಿಟಲ್ ಭೂ ದಾಖಲೆಗಳನ್ನು ಕೇಂದ್ರ ದ ನೋಡಲ್ ಖರೀದಿ ಸಂಸ್ಥೆ ಭಾರತೀಯ ಆಹಾರ ನಿಗಮ (ಎಫ್ ಸಿಐ) ಜೊತೆ ಹಂಚಿಕೊಳ್ಳುವುದಕ್ಕೆ ಸಿದ್ಧವಿದೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ.

ರೈತರ ಹಿತಾಸಕ್ತಿಗಾಗಿ ಈ ಹೊಸ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ರೈತರು ತಮ್ಮ ಸ್ವಂತ ಜಾಗ ಅಥವಾ ಬಾಡಿಗೆಗೆ ಪಡೆದ ಜಾಗದಲ್ಲಿ ಬೆಳೆದ ಭತ್ತವನ್ನು ಸರ್ಕಾರ ಖರೀದಿಸಲಿದೆ ಎಂದು ಹೇಳಿದ್ದಾರೆ.

"ರೈತರು ತಮ್ಮದೇ ಭೂಮಿಯಲ್ಲಿ ಭತ್ತ ಬೆಳೆದಿರಬೇಕೆಂದೇನೂ ಇಲ್ಲ. ಅವರ ಬೆಳೆಯನ್ನು ಗುತ್ತಿಗೆ ಆಧಾರದಲ್ಲಿ ಪಡೆದ ಭೂಮಿಯಲ್ಲಿ ಬೆಳೆದಿದ್ದರೂ ಅದನ್ನು ಖರೀದಿಸಲಾಗುತ್ತದೆ" ಎಂದು ಅವರು ಮಾಹಿತಿ ನೀಡಿದ್ದಾರೆ.

ಎಷ್ಟು ಪ್ರದೇಶದಲ್ಲಿ ಎಷ್ಟು ಪ್ರಮಾಣದ ಬೆಳೆ ಬೆಳೆಯಲಾಗಿದೆ ಎಂಬುದನ್ನು ತಿಳಿದು ಅದನ್ನು ಖರೀದಿಸುವುದು ಈ ವ್ಯವಸ್ಥೆಯ ಮೂಲ ಉದ್ದೇಶವಾಗಿದೆ, ಎಫ್ ಸಿಐ ಬಳಿ ಇರುವ ಇಂಟಿಗ್ರೇಟೆಡ್ ಲ್ಯಾಂಡ್ ರೆಕಾರ್ಡ್ಸ್ ಗಳು ಈ ಹಂತದಲ್ಲಿ ಸಹಾಯಕ್ಕೆ ಬರಲಿವೆ ಎಂದು ಸುಧಾಂಶು ಪಾಂಡೆ ಹೇಳಿದ್ದಾರೆ. 

ಕಾರ್ಯದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದಕ್ಕೆ ಸಜ್ಜುಗೊಂಡಿವೆ, ಪ್ರತಿ ರಾಜ್ಯವೂ ತಾನು ಖರೀದಿಸುವುದರಿಂದ ರೈತರಿಗೆ ಲಾಭವಾಗುವುದನ್ನು ಬಯಸುತ್ತವೆಯೇ ಹೊರತು ಟ್ರೇಡರ್ ಗಳನ್ನಲ್ಲ.

ಈ ವ್ಯವಸ್ಥೆಯಿಂದ ಕನಿಷ್ಟ ಬೆಂಬಲ ಬೆಲೆ ರೈತರಿಗೆ ಮಾತ್ರ ತಲುಪುವಂತಾಗುತ್ತದೆ. ಟ್ರೇಡರ್ ಗಳಿಗಲ್ಲ ಎಂದು ಸುಧಾಂಶು ಪಾಂಡೆ ತಿಳಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com