10 ಡಿಸಿಪಿಗಳಿಂದ ದೇಶ್ ಮುಖ್, ಪರಬ್ ಗೆ 40 ಕೋಟಿ ರೂ. ಪಾವತಿ: ಇಡಿಗೆ ಸಚಿನ್ ವಾಜೆ ಹೇಳಿಕೆ

ಮಹಾರಾಷ್ಟ್ರದ 10 ಡಿಸಿಪಿಗಳು ಅಂದಿನ ಸಚಿವ ಅನಿಲ್ ದೇಶಮುಖ್ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೆ 40 ಕೋಟಿ ರೂ ನೀಡಿದ್ದರು ಎಂದು ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿದ್ದಾರೆ.
ಸಚಿನ್ ವಾಜೆ
ಸಚಿನ್ ವಾಜೆ

ಮುಂಬೈ: ಮಹಾರಾಷ್ಟ್ರದ 10 ಡಿಸಿಪಿಗಳು ಅಂದಿನ ಸಚಿವ ಅನಿಲ್ ದೇಶಮುಖ್ ಹಾಗೂ ಸಾರಿಗೆ ಸಚಿವ ಅನಿಲ್ ಪರಬ್ ಅವರಿಗೆ 40 ಕೋಟಿ ರೂ ನೀಡಿದ್ದರು ಎಂದು ವಜಾಗೊಂಡಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಹೇಳಿದ್ದಾರೆ.

ಉದ್ಯಮಿ ಅಂಬಾನಿ ಮನೆ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸ್ಫೋಟಕ ಪತ್ತೆ ಪ್ರಕರಣದಲ್ಲಿ ವಜಾಗೊಂಡು ವಿಚಾರಣೆ ಎದುರಿಸುತ್ತಿರುವ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರು ಜಾರಿನಿರ್ದೇಶನಾಲಯದ ವಿಚಾರಣೆಯಲ್ಲಿ ಪಾಲ್ಗೊಂಡು ತಮ್ಮ ಹೇಳಿಕೆ ದಾಖಲಿಸಿದ್ದಾರೆ. ಈ ವೇಳೆ ವಾಜೆ ಹಲವು ಸ್ಫೋಟಕ ಹೇಳಿಕೆಗಳನ್ನು ನೀಡಿದ್ದು, 'ಮಹಾರಾಷ್ಟ್ರ ಸಾರಿಗೆ ಸಚಿವ ಅನಿಲ್ ಪರಬ್ ಮತ್ತು ಅವರ ಅಂದಿನ ಕ್ಯಾಬಿನೆಟ್ ಸಹೋದ್ಯೋಗಿ ಅನಿಲ್ ದೇಶಮುಖ್ ಅವರು ಮುಂಬೈನ 10 ಡಿಸಿಪಿಗಳಿಂದ 40 ಕೋಟಿ ರೂ.ಗಳನ್ನು ತಮ್ಮ ನಗರ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ರವರ ವರ್ಗಾವಣೆಯ ಆದೇಶವನ್ನು ಹಿಂಪಡೆಯಲು ಪಡೆದಿದ್ದರು ಎಂದು ಹೇಳಿದ್ದಾರೆ.

ಈ ಹೇಳಿಕೆ ದೇಶ್ ಮುಖ್ ಅವರ ಮಾಜಿ ವೈಯಕ್ತಿಕ ಕಾರ್ಯದರ್ಶಿ ಸಂಜೀವ್ ಪಲಾಂಡೆ ಮತ್ತು ವೈಯಕ್ತಿಕ ಸಹಾಯಕ ಕುಂದನ್ ಶಿಂಧೆ ವಿರುದ್ಧ ಇಡಿ ಇತ್ತೀಚೆಗೆ ಸಲ್ಲಿಸಿದ ಚಾರ್ಜ್ ಶೀಟ್‌ನ ಭಾಗವಾಗಿದೆ ಎಂದು ಹೇಳಲಾಗಿದೆ.

ಜುಲೈ 2020 ರಲ್ಲಿ, ಪರಮ್ ಬೀರ್ ಸಿಂಗ್ ಅವರು ಮುಂಬೈನಲ್ಲಿ 10 ಡಿಸಿಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದರು.  ಆಗ ಗೃಹ ಸಚಿವರಾಗಿದ್ದ ದೇಶಮುಖ್ ಮತ್ತು ಪರಬ್ ಸಿಂಗ್ ನೀಡಿದ ವರ್ಗಾವಣೆ ಆದೇಶದಿಂದ ಅಧಿಕಾರಿಗಳು ಸಂತೃಪ್ತರಾಗಿರಲಿಲ್ಲ.  ಹೀಗಾಗಿ ವರ್ಗಾವಣೆ ತಡೆಯಲು ಹಣ ನೀಡಲು ಮುಂದಾಗಿದ್ದರು. ವರ್ಗಾವಣೆ ಆದೇಶದಲ್ಲಿ ಪಟ್ಟಿ ಮಾಡಲಾದ ಪೋಲಿಸ್ ಅಧಿಕಾರಿಗಳಿಂದ 40 ಕೋಟಿ ರೂಪಾಯಿ ಸಂಗ್ರಹಿಸಲಾಗಿತ್ತು. ಅದರಲ್ಲಿ ತಲಾ 20 ಕೋಟಿ ರೂಪಾಯಿಗಳನ್ನು ಅನಿಲ್ ದೇಶಮುಖ್ ಅವರಿಗೆ ಮತ್ತು ಅನಿಲ್ ಪರಬ್ ಅವರಿಗೆ ನೀಡಲಾಗಿದೆ ಎಂದು ವಾಜೆ ಹೇಳಿದ್ದಾರೆ ಎನ್ನಲಾಗಿದೆ.

ಇನ್ನು ಇದೇ ಪ್ರಕರಣದಲ್ಲಿ ಬಂಧನಕ್ಕೊಳಗಾದ ಪಲಾಂಡೆ ಮತ್ತು ಶಿಂಧೆ ಹೆಸರು ಮನಿ ಲಾಂಡರಿಂಗ್ ಪ್ರಕರಣದಲ್ಲೂ ಕೇಳಿಬಂದಿದ್ದು, ಸಲ್ಲಿಸಲಾದ ಚಾರ್ಜ್ ಶೀಟ್ ನಲ್ಲಿ ಕೂಡ ವಾಜೆಯನ್ನು ಆರೋಪಿ ಎಂದು ಹೆಸರಿಸಲಾಗಿದೆ. ಆದಾಗ್ಯೂ, ಎನ್ ಸಿಪಿ ನಾಯಕ ದೇಶಮುಖ್ ಅಥವಾ ಆತನ ಕುಟುಂಬ ಸದಸ್ಯರನ್ನು ಚಾರ್ಜ್ ಶೀಟ್ ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿಲ್ಲ. ಈ ಪ್ರಕರಣದಲ್ಲಿ ಪಲಾಂಡೆ ಮತ್ತು ಶಿಂಧೆ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಪಲಾಂಡೆ ಮತ್ತು ಶಿಂಧೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಚಾರ್ಜ್ ಶೀಟ್ ಹೇಳುತ್ತದೆ. ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಂದ ಸಂಗ್ರಹಿಸಿದ ಹಣವನ್ನು ಹಸ್ತಾಂತರಿಸುವ ಕುರಿತು ದೇಶ್‌ಮುಖ್‌ ಅವರು ವಾಜೆಗೆ ಕರೆ ಮಾಡುತ್ತಿದ್ದರು ಎಂಬುದು ತಮ್ಮ ತನಿಖೆಯಿಂದ ತಿಳಿದುಬಂದಿದೆ ಎಂದು ಕೇಂದ್ರ ತನಿಖಾ ಸಂಸ್ಥೆ ಹೇಳಿದೆ.

ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯವರ ದಕ್ಷಿಣ ಮುಂಬಯಿ ನಿವಾಸದ ಬಳಿ ನಿಲ್ಲಿಸಿದ್ದ ಸ್ಫೋಟಕಗಳು-ಎಸ್‌ಯುವಿ ಮತ್ತು ಥಾಣೆ ಉದ್ಯಮಿ ಮನ್ಸುಖ್ ಹಿರಾನ್ ಹತ್ಯೆಗೆ ಸಂಬಂಧಿಸಿದಂತೆ ಮುಂಬೈನ ಸಹಾಯಕ ಪೋಲಿಸ್ ಇನ್ಸ್‌ಪೆಕ್ಟರ್ ವಾಜೆ ಅವರನ್ನು ಈ ವರ್ಷದ ಮಾರ್ಚ್‌ನಲ್ಲಿ ಬಂಧಿಸಲಾಗಿತ್ತು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com