ನೈತಿಕತೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ: ರಾಜೀನಾಮೆ ಕುರಿತು ಮೌನ ಮುರಿದ ನವಜೋತ್ ಸಿಂಗ್ ಸಿಧು

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ನವಜೋತ್ ಸಿಂಗ್ ಸಿಧು ಅವರು ಮೌನ ಮುರಿದ್ದು, ನೈತಿಕತೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. 
ನವಜೋತ್ ಸಿಂಗ್ ಸಿಧು
ನವಜೋತ್ ಸಿಂಗ್ ಸಿಧು

ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಸ್ಥಾನಕ್ಕೆ ಹಠಾತ್ ರಾಜೀನಾಮೆ ನೀಡಿದ ಒಂದು ದಿನದ ಬಳಿಕ ನವಜೋತ್ ಸಿಂಗ್ ಸಿಧು ಅವರು ಮೌನ ಮುರಿದ್ದು, ನೈತಿಕತೆಯೊಂದಿಗೆ ರಾಜಿಯಾಗಲು ಸಾಧ್ಯವಿಲ್ಲ ಎಂದು ಬುಧವಾರ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ವಿಡಿಯೋ ಬಿಡುಗಡೆ ಮಾಡಿರುವ ಸಿಧು ಅವರು, “ನಾನು ನನ್ನ ನೈತಿಕತೆ, ನೈತಿಕ ಅಧಿಕಾರದೊಂದಿಗೆ ರಾಜಿ ಮಾಡಿಕೊಳ್ಳಲಾರೆ. ನೈತಿಕತೆ ವಿಚಾರದಲ್ಲಿ ರಾಜಿ ಆಗಬೇಡ ಅಂತ ತಂದೆ ಹೇಳುತ್ತಿದ್ದರು. ನನ್ನ ತಂದೆ ಹೇಳಿದಂತೆ ನಾನು ಬದುಕುತ್ತಿದ್ದೇನೆ. ನಾನು ಗುರುವಿನ ಕಾಲಿನ ಧೂಳನ್ನು ಹಣೆಗೆ ಧರಿಸುತ್ತೇನೆ. ಹಣೆಗೆ ಧರಿಸಿ ನಾನು ಹೋರಾಟ ಮಾಡುತ್ತೇನೆ. ಪಂಜಾಬ್‌ನಲ್ಲಿನ ವಿಷಯಗಳು ಅಜೆಂಡಾಗಳೊಂದಿಗಿನ ರಾಜಿಗೆ ನಾನು ಸಾಕ್ಷಿಯಾಗಿದ್ದೇನೆ. ನಾನು ಹೈಕಮಾಂಡ್ ಅನ್ನು ಮರೆಮಾಚಲು ಸಾಧ್ಯವಿಲ್ಲ ಅಥವಾ ಅವುಗಳನ್ನು ಮರೆಮಾಚಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಇದೇ ವೇಳೆ ಮುಖ್ಯಮಂತ್ರಿ ಚರಣ್​​ಜಿತ್ ಸಿಂಗ್ ಚನ್ನಿ ಸಚಿವ ಸಂಪುಟದಲ್ಲಿ ಕಳಂಕಿತ ಮತ್ತು ಇತರೆ ವಿವಾದಾತ್ಮಕ ಶಾಸಕರನ್ನು ಸೇರಿಸಿರುವುದನ್ನೂ ಟೀಕಿಸಿದ್ದಾರೆ. ಅಲ್ಲದೆ, ಜನರ ಜೀವನವನ್ನು ಉತ್ತಮಗೊಳಿಸುವುದೊಂದೇ ತನ್ನ ಧರ್ಮ ಎಂದು ಹೇಳಿದ್ದಾರೆ.

ನಾನು ಯಾರೊಂದಿಗೂ ವೈಯಕ್ತಿಕ ವೈಷಮ್ಯವನ್ನು ಹೊಂದಿಲ್ಲ. ನನ್ನ 17 ವರ್ಷಗಳ ರಾಜಕೀಯ ಜೀವನವು ಒಂದು ಉದ್ದೇಶಕ್ಕಾಗಿ, ಬದಲಾವಣೆ ಮಾಡಲು ಒಂದು ನಿಲುವನ್ನು ತೆಗೆದುಕೊಳ್ಳಲು ಮತ್ತು ಜನರ ಜೀವನವನ್ನು ಉತ್ತಮಗೊಳಿಸಲು ಇರುವುದಾಗಿದೆ. ಇದು ನನ್ನ ಏಕೈಕ ಧರ್ಮ.

ನಾನು ವೈಯಕ್ತಿಕ ಲಾಭಕ್ಕಾಗಿ ಯಾವುದೇ ಹೋರಾಟ ಮಾಡುತ್ತಿಲ್ಲ. ನಾನು ಅಜೆಂಡ ಇಟ್ಟುಕೊಂಡು ರಾಜಕೀಯಕ್ಕೆ ಬಂದಿದ್ದೇನೆ. ಅಕಾಲಿಗಳಿಗೆ ಕ್ಲೀನ್ ಚಿಟ್ ಕೊಟ್ಟವರಿಗೆ ಅಧಿಕಾರ. ಇದು ಹಕ್ಕು ಮತ್ತು ಸತ್ಯಕ್ಕಾಗಿ ನಡೆಯುವ ಹೋರಾಟ. ನನ್ನ ಕೊನೆ ಉಸಿರು ಇರೋವರೆಗೂ ಹೋರಾಟ ಇರುತ್ತದೆ. ನಾವು ಜೀವಂತವಾಗಿದ್ದರೆ ಜೀವಂತ ಅಂತ ತೋರಿಸಬೇಕು. ನಾವು ಬದುಕಿದ್ದರೆ ನಮ್ಮ ಬದುಕು ಬದುಕಬೇಕು ಅಂತಾ ಕಾವ್ಯಾತ್ಮಕವಾಗಿ ಕಾಂಗ್ರೆಸ್​​ಗೆ ಚಾಟಿ ಬೀಸಿದ್ದಾರೆ. 

ವಿಡಿಯೋದಲ್ಲಿ ಕೆಲ ನಾಯಕರಿಗೆ ಜವಾಬ್ದಾರಿಯುತ ಹುದ್ದೆ ನೀಡಿರುವುದು ಹಾಗೂ ಅಡ್ವೋಕೇಟ್ ಜನರಲ್ ಆಗಿ ಎ.ಪಿ.ಎಸ್ ಡಿಯೋಲ್ ಅವರನ್ನು ನೇಮಕ ಮಾಡಿರುವುದಕ್ಕೆ ಸಿಧು ನೇರವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. 

ಹಿರಿಯ ಐಪಿಎಸ್ ಅಧಿಕಾರಿ ಇಕ್ಬಾಲ್ ಪ್ರೀತ್ ಸಿಂಗ್ ಸಹೋತಾ ಕುರಿತು ಮಾತನಾಡಿರುವ ಸಿಧು, ಇಕ್ಬಾಲ್ ಅವರಿಗೆ ಪಂಜಾಬ್ ಪೊಲೀಸ್ ಮಹಾನಿರ್ದೇಶಕರ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ. ಜಾಮೀನು ಎಂಬ ಹೊದಿಕೆಯೊಂದಿಗೆ ರಕ್ಷಣೆಗೊಳಪಟ್ಟಿರುವವರು ಅಡ್ವೋಕೇಟ್ ಜನರಲ್ ಆಗಿದ್ದಾರೆ. 

ಕಳಂಕಿತ ನಾಯಕಿಗೆ ನ್ಯಾಯ ನೀಡುವ ಜವಾಬ್ದಾರಿಯುತ ಹುದ್ದೆಗಳನ್ನು ನೀಡಲಾಗಿದೆ. ಇದನ್ನು ನಾನು ಸಹಿಸುವುದಿಲ್ಲ. ನಾನು ತತ್ವಗಳ ಮೇಲೆ ನಿಲ್ಲಲು ಯಾವುದೇ ತ್ಯಾಗವನ್ನು ಮಾಡುತ್ತೇನೆ. ಅದಕ್ಕಾಗಿ ನಾನು ಹೆಚ್ಚು ಯೋಚಿಸುವ ಅಗತ್ಯವಿಲ್ಲ. ಕಳಂಕಿತ ಮಂತ್ರಿಗಳು ಹಾಗೂ  ಅಧಿಕಾರಿಗಳಿಗೆ ಅವಕಾಶ ಕಲ್ಪಿಸಿದ ವ್ಯವಸ್ಥೆಯನ್ನು ನಾನು ಮುರಿದಿದ್ದೇನೆ. ಈಗ ಕಳಂಕಿತ ಮಂತ್ರಿಗಳು ಹಾಗೂ  ಅಧಿಕಾರಿಗಳನ್ನು ಮತ್ತೆ ನೇಮಿಸಲು ಸಾಧ್ಯವಿಲ್ಲ. ನಾನು ಅಂತಹ ನೇಮಕಾತಿಗಳನ್ನು ವಿರೋಧಿಸುತ್ತೇನೆ.  ಕಳಂಕಿತ ಮಂತ್ರಿಗಳನ್ನು ಮರಳಿ ಕರೆತರುವುದನ್ನು ತಾನು ಒಪ್ಪುವುದಿಲ್ಲ ಎಂದಿದ್ದಾರೆ. 

ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ನೇಮಕಗೊಂಡ 72 ದಿನಗಳ ನಂತರ ಮತ್ತು ಪಂಜಾಬ್ ಹೊಸ ಮುಖ್ಯಮಂತ್ರಿಯಾದ ಎಂಟು ದಿನಗಳ ನಂತರ ಸಿಧು ರಾಜೀನಾಮೆ ನೀಡಿದ್ದಾರೆ.

ಸಿಧು ರಾಜೀನಾಮೆ ನೀಡಿದ ಕೆಲವು ಗಂಟೆಗಳಲ್ಲೇ ಅವರ ನಿಕಟವರ್ತಿ ಮೂವರು ನಾಯಕರು ಕೂಡ ತಮ್ಮ ಸ್ಥಾನಗಳನ್ನು ತೊರೆದಿದ್ದಾರೆ. ಕ್ಯಾಬಿನೆಟ್ ಮಂತ್ರಿ ರಜಿಯಾ ಸುಲ್ತಾನಾ, ಪ್ರಧಾನ ಕಾರ್ಯದರ್ಶಿ ಯೋಗಿಂದರ್ ಧಿಂಗ್ರಾ ಮತ್ತು ಖಜಾಂಚಿ ಗುಲ್ಜಾರ್ ಇಂದರ್ ಸಿಂಗ್ ಚಹಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com