ದುಷ್ಟ ಶಕ್ತಿಗಳನ್ನು ಓಡಿಸಲೆಂದು 5 ವರ್ಷದ ಮಗುವನ್ನು ಥಳಿಸಿ ಕೊಂದ ಪೋಷಕರು!

ದುಷ್ಟಶಕ್ತಿಗಳನ್ನು ಓಡಿಸಲೆಂದು ಮಾಟಮಂತ್ರ ಮಾಡುತ್ತಿದ್ದ ಪೋಷಕರು ತಮ್ಮ ಐದು ವರ್ಷದ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಭಾನುವಾರ ನಡೆದಿದೆ.
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ

ನಾಗಪುರ: ದೆವ್ವ ಹಿಡಿಯುವುದು, ಮಾಟಮಂತ್ರ ಎನ್ನುವುದು ಇಂದಿಗೂ ಕೆಲ ಜನರಲ್ಲಿ ಜೀವಂತವಾಗಿರುವ ಆಚರಣೆ. ಇದೇ ರೀತಿಯಲ್ಲಿ ದುಷ್ಟಶಕ್ತಿಗಳನ್ನು ಓಡಿಸಲೆಂದು ಮಾಟಮಂತ್ರ ಮಾಡುತ್ತಿದ್ದ ಪೋಷಕರು ತಮ್ಮ ಐದು ವರ್ಷದ ಬಾಲಕಿಯನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ನಾಗಪುರ ನಗರದಲ್ಲಿ ಭಾನುವಾರ ನಡೆದಿದೆ.

ಶುಕ್ರವಾರ ಮತ್ತು ಶನಿವಾರದ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಪೊಲೀಸರು ಮಗುವಿನ ತಂದೆ ಸಿದ್ಧಾರ್ಥ್ ಚಿಮ್ನೆ (45), ತಾಯಿ ರಂಜನಾ (42) ಮತ್ತು ಚಿಕ್ಕಮ್ಮ ಪ್ರಿಯಾ ಬನ್ಸೋದ್ (32) ಅವರನ್ನು ಬಂಧಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಸ್ಥಳೀಯ ಸುದ್ದಿ ವಾಹಿನಿಯನ್ನು ನಡೆಸುತ್ತಿರುವ ಸುಭಾಷ್ ನಗರದ ನಿವಾಸಿ ಚಿಮ್ನೆ, ಕಳೆದ ತಿಂಗಳು ಗುರು ಪೂರ್ಣಿಮೆಯಂದು ತನ್ನ ಪತ್ನಿ ಹಾಗೂ 5 ಮತ್ತು 16 ವರ್ಷದ ಇಬ್ಬರು ಹೆಣ್ಣುಮಕ್ಕಳೊಂದಿಗೆ ತಕಲ್‌ಘಾಟ್ ಪ್ರದೇಶದ ದರ್ಗಾಕ್ಕೆ ಹೋಗಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಂದಿನಿಂದ, ಈತ ತನ್ನ ಕಿರಿಯ ಮಗಳ ವರ್ತನೆಯಲ್ಲಿ ಏನೋ ಬದಲಾವಣೆಯಾಗಿದೆ ಎಂದು ಅನುಮಾನ ಪಟ್ಟಿದ್ದರು. ಆಕೆ ಕೆಲವು ದುಷ್ಟ ಶಕ್ತಿಗಳ ಪ್ರಭಾವಕ್ಕೆ ಒಳಗಾಗಿದ್ದಾಳೆಂದು ಆತ ನಂಬಿದ್ದನು ಮತ್ತು ಅವುಗಳನ್ನು ಆಕೆಯ ದೇಹದಿಂದ ಓಡಿಸಲೆಂದು ಮಾಟಮಂತ್ರದ ಮೊರೆ ಹೋಗಲು ನಿರ್ಧರಿಸಿದ್ದನು ಎಂದು ಅಧಿಕಾರಿ ಹೇಳಿದ್ದಾರೆ.

ಅದಾದ ಬಳಿಕ ಬಾಲಕಿಯ ಪೋಷಕರು ಮತ್ತು ಚಿಕ್ಕಮ್ಮ ಮಧ್ಯ ರಾತ್ರಿಯಲ್ಲಿ ಮಾಟಮಂತ್ರದ ಆಚರಣೆಯನ್ನು ಆರಂಭಿಸಿದ್ದಾರೆ. ಜೊತೆಗೆ ಅದನ್ನು ಚಿತ್ರೀಕರಿಸಿಕೊಂಡಿದ್ದಾರೆ. ಈ ವಿಡಿಯೊವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿಡಿಯೊದಲ್ಲಿ, ಆರೋಪಿಗಳು ಅಳುತ್ತಿದ್ದ ಹುಡುಗಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ, ಮಗುವಿಗೆ ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಉತ್ತರಿಸಲು ಸಾಧ್ಯವಾಗಿಲ್ಲ. ಈ ವೇಳೆ ಮೂವರು ಆರೋಪಿಗಳು ಮಗುವಿನ ಕಪಾಳಕ್ಕೆ ಬಾರಿಸಿದ್ದಾರೆ. ನಂತರ ಚೆನ್ನಾಗಿ ಥಳಿಸಿದ್ದಾರೆ. ಬಳಿಕ ಬಾಲಕಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಕುಸಿದಿದ್ದಾಳೆ' ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಶನಿವಾರ ಬೆಳಗ್ಗೆ ಮಗುವನ್ನು ದರ್ಗಾಕ್ಕೆ ಕರೆದೊಯ್ದಿದ್ದಾರೆ. ಬಳಿಕ ಆಕೆಯನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ, ಬಾಲಕಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಈ ವೇಳೆ ಅನುಮಾನಾಸ್ಪದವಾಗಿ ಕಂಡ ಅವರನ್ನು ನೋಡಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಅವರ ಕಾರಿನ ಚಿತ್ರವನ್ನು ತಮ್ಮ ಮೊಬೈಲ್ ಫೋನ್‌ನಲ್ಲಿ ಸೆರೆಹಿಡಿದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ನಂತರ ಆಸ್ಪತ್ರೆಯ ವೈದ್ಯರು ಬಾಲಕಿ ಮೃತಪಟ್ಟಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಫೋಟೊದಲ್ಲಿ ಸೆರೆಹಿಡಿದ ವಾಹನದ ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಲಾಗಿದೆ. ರಾಣಾ ಪ್ರತಾಪ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಆರೋಪಿಗಳ ಮನೆಯನ್ನು ಹುಡುಕಿ ಅವರನ್ನು ಬಂಧಿಸಿದ್ದಾರೆ.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಮಹಾರಾಷ್ಟ್ರ ತಡೆಗಟ್ಟುವಿಕೆ ಮತ್ತು ಮಾನವ ಬಲಿ ನಿರ್ಮೂಲನೆ ಮತ್ತು ಇತರ ಅಮಾನವೀಯ, ದುಷ್ಟ ಮತ್ತು ಅಘೋರಿ ಆಚರಣೆಗಳು ಮತ್ತು ಮಾಟಮಂತ್ರದ ತಡೆ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com