ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನವಿ

ತ್ರಿವರ್ಣ ಧ್ವಜವು ದೇಶದ ಗೌರವ ಮತ್ತು ಕೀರ್ತಿ. ಹೀಗಾಗಿ ಶನಿವಾರದಿಂದ ಆರಂಭವಾಗುವ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ದೆಹಲಿಯ ಜನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್
Updated on

ನವದೆಹಲಿ: ತ್ರಿವರ್ಣ ಧ್ವಜವು ದೇಶದ ಗೌರವ ಮತ್ತು ಕೀರ್ತಿ. ಹೀಗಾಗಿ ಶನಿವಾರದಿಂದ ಆರಂಭವಾಗುವ 'ಹರ್ ಘರ್ ತಿರಂಗಾ' ಅಭಿಯಾನದ ಅಡಿಯಲ್ಲಿ ದೆಹಲಿಯ ಜನರು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸುವಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಕೇಜ್ರಿವಾಲ್ ಸರ್ಕಾರವು 25 ಲಕ್ಷ ತ್ರಿವರ್ಣ ಧ್ವಜಗಳನ್ನು ಶಾಲಾ ಮಕ್ಕಳಿಗೆ ಮತ್ತು ರಾಜಧಾನಿಯ ಮೂಲೆ ಮೂಲೆಗಳಲ್ಲಿ ವಿತರಿಸಲು ಯೋಜಿಸಿದೆ. ಅಲ್ಲದೆ, ಸ್ವಾತಂತ್ರ್ಯದ 75 ನೇ ವರ್ಷವನ್ನು ಆಚರಿಸಲು ವಿವಿಧ ದೇಶಭಕ್ತಿಯ ಕಾರ್ಯಕ್ರಮಗಳನ್ನು ಕೂಡ ಆಯೋಜಿಸುತ್ತಿದೆ.

'ತ್ರಿವರ್ಣ ಧ್ವಜ ನಮ್ಮ ಹೆಮ್ಮೆ, ಗೌರವ, ಕೀರ್ತಿ ಮತ್ತು ಜೀವನ. ಇಂದಿನಿಂದ ಹರ್ ಘರ್ ತಿರಂಗಾ ಅಭಿಯಾನ ಆರಂಭವಾಗಿದೆ. ನಿಮ್ಮ ಮನೆಗಳಲ್ಲಿ ತ್ರಿವರ್ಣ ಧ್ವಜವನ್ನು ಹೆಮ್ಮೆಯಿಂದ ಹಾರಿಸಿ" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವ 75ನೇ ವರ್ಷದ ವಿಶೇಷ ಸಂದರ್ಭವನ್ನು ಆಚರಿಸಲು ಕೇಂದ್ರವು 'ಹರ್ ಘರ್ ತಿರಂಗ' ಅಭಿಯಾನವನ್ನು ಘೋಷಿಸಿದೆ. ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತ್ರಿವರ್ಣ ಧ್ವಜವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಜನರನ್ನು ಒತ್ತಾಯಿಸಿದ್ದರು.

ಕೇಜ್ರಿವಾಲ್ ಸರ್ಕಾರವು 'ಹರ್ ಹಾತ್ ತಿರಂಗಾ' ದೊಂದಿಗೆ 75 ವರ್ಷಗಳ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ. ಮುಖ್ಯಮಂತ್ರಿ ಮತ್ತು ಅವರ ಸಂಪುಟದ ಸಹೋದ್ಯೋಗಿಗಳು ಆಗಸ್ಟ್ 14 ರಂದು ಸಂಜೆ ತ್ರಿವರ್ಣ ಧ್ವಜವನ್ನು ಹಿಡಿದು ಜನರೊಂದಿಗೆ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.

'ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನವೂ ಇದೇ ಉತ್ಸಾಹದಿಂದ ಆಚರಿಸಲು ನಾನು ದೇಶದ ಜನತೆಗೆ ಮನವಿ ಮಾಡಲು ಬಯಸುತ್ತೇನೆ. ನಾವೆಲ್ಲರೂ ಆಗಸ್ಟ್ 14 ರಂದು ಸಂಜೆ 5 ಗಂಟೆಗೆ ನಮ್ಮ ಕೈಯಲ್ಲಿ ತಿರಂಗಾವನ್ನು ಹಿಡಿದು ಮತ್ತು ದೇಶಭಕ್ತಿಯನ್ನು ಹೃದಯದಲ್ಲಿ ತುಂಬಿಕೊಂಡು ರಾಷ್ಟ್ರಗೀತೆಯನ್ನು ಹಾಡೋಣ' ಎಂದು ಕೇಜ್ರಿವಾಲ್ ಈ ಹಿಂದೆ ಹೇಳಿದ್ದರು.

ಸರ್ಕಾರವು 100 ಸ್ಥಳಗಳಲ್ಲಿ ಮೈದಾನದ ಕಾರ್ಯಕ್ರಮಗಳನ್ನು ಮತ್ತು 'ತಿರಂಗ' ಸಂಗೀತ ಕಚೇರಿಯನ್ನು ಆಯೋಜಿಸುತ್ತಿದೆ. ಈ ಆಚರಣೆಯಲ್ಲಿ ಇಪ್ಪತ್ತು ಲಕ್ಷ ಮಕ್ಕಳು ಭಾಗವಹಿಸಲು ಯೋಜಿಸಲಾಗಿದೆ.

ಅಭಿಯಾನದ ಭಾಗವಾಗಿ ಸಂಗ್ರಹಿಸಲಾದ 25 ಲಕ್ಷ ಧ್ವಜಗಳಲ್ಲಿ 20 ಲಕ್ಷವನ್ನು ಶಾಲಾ ಮಕ್ಕಳಿಗೆ, ಎರಡು ಲಕ್ಷ ಜನರಿಗೆ ಮತ್ತು ಉಳಿದ ಮೂರು ಲಕ್ಷವನ್ನು ದೆಹಲಿ ಸರ್ಕಾರ ಮತ್ತು ಸ್ಥಳೀಯ ಸಂಸ್ಥೆಗಳ ನೌಕರರಿಗೆ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com