ನ್ಯಾಯಾಂಗದ ಮೇಲಿನ ಹೊರೆ ತಗ್ಗಿಸಲು 1 ಲಕ್ಷ ಸಣ್ಣ ಪ್ರಕರಣಗಳು ವಾಪಸ್:  ಅಸ್ಸಾಂ ಸಿಎಂ ಘೋಷಣೆ

ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಲು ಅಸ್ಸಾಂ ಸರ್ಕಾರ ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ಘೋಷಿಸಿದ್ದಾರೆ.
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ

ಗುವಾಹಟಿ: ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡಲು ಅಸ್ಸಾಂ ಸರ್ಕಾರ ಒಂದು ಲಕ್ಷ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸೋಮವಾರ ಘೋಷಿಸಿದ್ದಾರೆ.

ಇಂದು 75ನೇ ಸ್ವಾತಂತ್ರ್ಯೋತ್ಸವ ಭಾಷಣ ಮಾಡಿದ ಅಸ್ಸಾಂ ಸಿಎಂ, "ರಾಜ್ಯ ಸರ್ಕಾರ ಔಪಚಾರಿಕವಾಗಿ ಒಂದು ಲಕ್ಷ ಪ್ರಕರಣಗಳನ್ನು ಹಿಂಪಡೆಯಲು ನಿರ್ಧರಿಸಿದೆ. ಹೆಚ್ಚಾಗಿ ಫೇಸ್‌ಬುಕ್ ಮತ್ತು ಟ್ವಿಟರ್ ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಆಗಸ್ಟ್ 14, 2022 ರ ಮಧ್ಯರಾತ್ರಿಯವರೆಗೆ ದಾಖಲಾಗಿರುವ ಮತ್ತು ಬಾಕಿ ಉಳಿದಿರುವ ಸಣ್ಣ ಪ್ರಕರಣಗಳನ್ನು ಹಿಂಪಡೆಯಲಾಗುವುದು. ಇದರಿಂದಾಗಿ ನ್ಯಾಯಾಂಗವು ಇತರ ಗಂಭೀರ ಪ್ರಕರಣಗಳ ಮೇಲೆ ಹೆಚ್ಚು ಗಮನಹರಿಸುತ್ತದೆ" ಎಂದು ಹೇಳಿದ್ದಾರೆ.

ಪ್ರಕರಣಗಳನ್ನು ಹಿಂಪಡೆಯುವಂತೆ ಸರ್ಕಾರವು ನ್ಯಾಯಾಂಗಕ್ಕೆ ಮನವಿ ಸಲ್ಲಿಸಲಿದೆ. ದಂಗೆಕೋರ ಗುಂಪು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಪರೇಶ್ ಬರುವಾ ಬಣಕ್ಕೆ ಹಿಂಸಾಚಾರದ ಮಾರ್ಗ ಬಿಟ್ಟು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಶರ್ಮಾ ಮನವಿ ಮಾಡಿದರು. ಅಲ್ಲದೆ ಅಸ್ಸಾಂ ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಎಂದರು.

ಇದೇ ವೇಳೆ ಮುಂದಿನ ತಿಂಗಳೊಳಗೆ 10,000 ಸರ್ಕಾರಿ ಉದ್ಯೋಗ ನೀಡುವುದಾಗಿ ಶರ್ಮಾ ಘೋಷಿಸಿದರು. “1 ಲಕ್ಷ ಉದ್ಯೋಗಗಳನ್ನು ಪಾರದರ್ಶಕ ರೀತಿಯಲ್ಲಿ ನೀಡುವ ದೃಢ ಸಂಕಲ್ಪದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ. ನಾವು ಈಗಾಗಲೇ 30,000 ಉದ್ಯೋಗಗಳನ್ನು ನೀಡಿದ್ದೇವೆ. ಇನ್ನೂ 30,000 ಉದ್ಯೋಗಗಳಿಗೆ ಲಿಖಿತ ಮತ್ತು ಮೌಖಿಕ ಪರೀಕ್ಷೆಗಳು ಈ ತಿಂಗಳಲ್ಲಿ ಪ್ರಾರಂಭವಾಗುತ್ತವೆ ”ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com