ಸಿಬಿಐ ಮಾರಾಟವಾಗಿದೆ, ಅದಕ್ಕೆ ಇಡಿಯನ್ನು ಮುಂದೆ ಬಿಟ್ಟಿದ್ದೇವೆ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್
ಕೋಲ್ಕತ್ತಾ: ಸಿಬಿಐ ಅಧಿಕಾರಿಗಳು ಮಾರಾಟವಾಗಿದ್ದಾರೆಂದು ಅರಿತು ಕೇಂದ್ರ ಸರ್ಕಾರ ಬಂಗಾಳದಲ್ಲಿ ಭ್ರಷ್ಟಾಚಾರದ ಬಗ್ಗೆ ಕ್ರಮ ಮತ್ತು ತನಿಖೆ ಮಾಡುವಂತೆ ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ಸೂಚಿಸಲಾಗಿದೆ ಎಂದು ಹೇಳುವ ಮೂಲಕ ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ತಮ್ಮದೇ ಪಕ್ಷ ಮುಜುಗರಕ್ಕೀಡಾಗುವಂತೆ ಮಾಡಿದ್ದಾರೆ.
'ಸಿಬಿಐ ಅಧಿಕಾರಿಗಳ ಒಂದು ವಿಭಾಗ ಲಕ್ಷ ಅಥವಾ ಕೋಟಿಗಳಿಗೆ ಮಾರಾಟವಾಗಿದೆ. ಇದನ್ನು ಮನಗಂಡ ಕೇಂದ್ರವು ರಾಜ್ಯದಲ್ಲಿನ ವಿವಿಧ ಭ್ರಷ್ಟಾಚಾರದ ಪ್ರಕರಣಗಳ ಬಗ್ಗೆ ತನಿಖೆ ನಡೆಸುವಂತೆ ಇಡಿಯನ್ನು ಕೇಳಿದೆ. ಆಡಳಿತಾರೂಢ ಟಿಎಂಸಿಯು ಸಿಬಿಐನೊಂದಿಗೆ ಒಪ್ಪಂದ ಮಾಡಿಕೊಂಡಂತೆ ಇಡಿ ಜೊತೆ ಮಾಡಿಕೊಳ್ಳಲು ಸಾಧ್ಯವಾಗದ ಕಾರಣ ಹೆದರುತ್ತಿದೆ ಎಂದು ಸಂಸ್ಕೃತಿ ಸಚಿವಾಲಯ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಘೋಷ್ ಹೇಳಿದ್ದಾರೆ.
ಟಿಎಂಸಿ ಮೇಲೆ ಸಿಬಿಐ ಮತ್ತು ಇಡಿ ನಡೆಸುತ್ತಿರುವ ತನಿಖೆಯ ವಿಷಯದ ಬಗ್ಗೆ ಬಂಗಾಳದ ಕೇಸರಿ ಪಾಳಯವು ಅಂತರ ಕಾಯ್ದುಕೊಂಡಿದ್ದು ಇದು ನ್ಯಾಯಾಂಗದ ಅಡಿಯಲ್ಲಿನ ವಿಷಯ ಎಂದು ಹೇಳುತ್ತಿದ್ದರೆ ಇತ್ತ ಘೋಷ್ ಈ ರೀತಿಯ ಹೇಳಿಕೆ ನೀಡಿದ್ದು ಬಂಗಾಳದಲ್ಲಿನ ಆಡಳಿತರೂಢ ಪಕ್ಷಕ್ಕೆ ಹೊಸ ಅಸ್ತ್ರಕೊಟ್ಟಂತೆ ಆಗಿದೆ.
ಕೇಂದ್ರೀಯ ಸಂಸ್ಥೆಗಳು ಕೇಂದ್ರ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುತ್ತವೆ ಎಂದು ಟಿಎಂಸಿ ಸೇರಿದಂತೆ ವಿರೋಧ ಪಕ್ಷಗಳು ಟೀಕಿಸುತ್ತಾ ಬಂದಿದ್ದು ಈ ಅವಕಾಶವನ್ನು ಟಿಎಂಸಿ ಎಂದಿಗೂ ಕಳೆದುಕೊಳ್ಳುವುದಿಲ್ಲ. ಇನ್ನು ಘೋಷ್ ಅವರ ಹೇಳಿಕೆಯು ನಮ್ಮನ್ನು ಮುಜುಗರಕ್ಕೀಡು ಮಾಡುತ್ತದೆ. ಅಲ್ಲದೆ ವಿರೋಧ ಪಕ್ಷಗಳ ಆರೋಪವನ್ನು ಬಲಪಡಿಸುತ್ತದೆ ಎಂದು ಬಿಜೆಪಿ ನಾಯಕರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಮೇಲೆ ಘೋಷ್ ಬೆರಳು ಎತ್ತಿದ್ದಾರಾ ಎಂಬ ಪ್ರಶ್ನೆ ಮೂಡುತ್ತದೆ ಎಂದು ಟಿಎಂಸಿ ವಕ್ತಾರ ಕುನಾಲ್ ಘೋಷ್ ಹೇಳಿದ್ದು, ಸಿಬಿಐ ಒಪ್ಪಂದದ ಬಗ್ಗೆ ಪ್ರಸ್ತಾಪಿಸಿ, ಘೋಷ್ ಅವರು ಬಿಜೆಪಿಯೊಳಗಿನ ಯಾರಿಗಾದರೂ ಬೆರಳು ತೋರಿಸಿದ್ದಾರೆಯೇ? ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರನ್ನು ಸಿಬಿಐ ಏಕೆ ಮುಟ್ಟುತ್ತಿಲ್ಲ ಎಂದು ಅವರು ಸೂಚಿಸಿದ್ದಾರೆಯೇ? ಎಂದು ಕುನಾಲ್ ಘೋಷ್ ಪ್ರಶ್ನಿಸಿದ್ದಾರೆ.
ಮಮತಾ ಬ್ಯಾನರ್ಜಿಯ ಮಾಜಿ ಆಪ್ತ ಸುವೇಂದು ಅಧಿಕಾರಿ ನಾರದ ಸ್ಟಿಂಗ್ ಆಪರೇಷನ್ ಪ್ರಕರಣದ ಆರೋಪಿಗಳಲ್ಲಿ ಒಬ್ಬರಾಗಿದ್ದಾರೆ. ಇದರಲ್ಲಿ ಟಿಎಂಸಿ ನಾಯಕರು ಮತ್ತು ಮಂತ್ರಿಗಳೊಂದಿಗೆ ಸಾಮ್ಯತೆ ಹೊಂದಿರುವ ಹಲವಾರು ವ್ಯಕ್ತಿಗಳು ನಕಲಿ ಕಂಪನಿಯ ಪ್ರತಿನಿಧಿಗಳಿಂದ ಹಣವನ್ನು ಸ್ವೀಕರಿಸುತ್ತಿರುವುದು ಕಂಡುಬಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ