ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತಿಗೆ ಮುನ್ನ ಆರ್ ಜೆಡಿ ನಾಯಕರಿಗೆ ಆಘಾತ: ಉದ್ಯೋಗ ಹಗರಣ ಸಂಬಂಧ ಸಿಬಿಐ ದಾಳಿ!

ಸಿಬಿಐ ಇಂದು ಬುಧವಾರ ಇಬ್ಬರು ಆರ್‌ಜೆಡಿ ಸಂಸದರಾದ ಅಶ್ಫಾಕ್ ಕರೀಮ್ ಮತ್ತು ಫೈಯಾಜ್ ಅಹ್ಮದ್ ಮತ್ತು ಪಕ್ಷದ ಎಂಎಲ್‌ಸಿ ಮತ್ತು ಬಿಸ್ಕೊಮೌನ್ ಅಧ್ಯಕ್ಷ ಸುನಿಲ್ ಸಿಂಗ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಪಾಟ್ನಾ: ರಾಜ್ಯ ವಿಧಾನಸಭೆಯಲ್ಲಿ ಆರ್‌ಜೆಡಿ ನೇತೃತ್ವದ ಮಹಾಮೈತ್ರಿಕೂಟ ಸರ್ಕಾರದ ವಿಶ್ವಾಸಮತ ಪರೀಕ್ಷೆಗೆ ಮುನ್ನ, ಸಿಬಿಐ ಇಂದು ಬುಧವಾರ ಇಬ್ಬರು ಆರ್‌ಜೆಡಿ ಸಂಸದರಾದ ಅಶ್ಫಾಕ್ ಕರೀಮ್ ಮತ್ತು ಫೈಯಾಜ್ ಅಹ್ಮದ್ ಮತ್ತು ಪಕ್ಷದ ಎಂಎಲ್‌ಸಿ ಮತ್ತು ಬಿಸ್ಕೊಮೌನ್ ಅಧ್ಯಕ್ಷ ಸುನಿಲ್ ಸಿಂಗ್ ಅವರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ತಪಾಸಣೆ ನಡೆಸುತ್ತಿದ್ದಾರೆ.

ಇದಲ್ಲದೆ, ವೈಶಾಲಿ ಜಿಲ್ಲೆಯ ಆರ್‌ಜೆಡಿ ಮಾಜಿ ಎಂಎಲ್‌ಸಿ ಸುಬೋಧ್ ರೈ ಅವರ ನಿವಾಸದಲ್ಲೂ ಶೋಧ ನಡೆಸಲಾಗುತ್ತಿದೆ. ಆರ್‌ಜೆಡಿ ನಾಯಕರ ಮನೆಗಳ ಮೇಲೆ ಸಿಬಿಐನ ಹಲವು ತಂಡಗಳು ಏಕಕಾಲದಲ್ಲಿ ದಾಳಿ ನಡೆಸಿವೆ. 

2004 ರಿಂದ 2009 ರವರೆಗೆ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ರೈಲ್ವೆ ಸಚಿವರಾಗಿದ್ದಾಗ ಇಲಾಖೆಯಲ್ಲಿ ನಡೆದ ಭೂಮಿಗಾಗಿ ಉದ್ಯೋಗ ಹಗರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಧುಬನಿಯಲ್ಲಿರುವ ಅಹ್ಮದ್ ಅವರ ಆಸ್ತಿಪಾಸ್ತಿಗಳ ಮೇಲೆ ಕೂಡ ದಾಳಿ ನಡೆಸಲಾಗುತ್ತಿದೆ.

ರಾಜಕೀಯ ಪ್ರೇರಿತ: ಸಿಬಿಐ ದಾಳಿ ರಾಜಕೀಯ ಪ್ರೇರಿತವಾಗಿದೆ ಎಂದು ಆರ್‌ಜೆಡಿ ಎಂಎಲ್‌ಸಿ ಸುನಿಲ್ ಸಿಂಗ್ ಹೇಳಿದ್ದಾರೆ. ಶಾಸ್ತ್ರಿನಗರ ಪೊಲೀಸ್ ಠಾಣೆ ವ್ಯಾಪ್ತಿಯ ನೂತನ್ ಕಾಂತಿ ಅಪಾರ್ಟ್‌ಮೆಂಟ್‌ನಲ್ಲಿರುವ ಸಿಂಗ್ ಅವರ ನಿವಾಸದ ಮೇಲೆ ಸಿಬಿಐ ದಾಳಿ ನಡೆಸುತ್ತಿದೆ.

ರಾಜ್ಯ ರಾಜಧಾನಿಯ ಗಾಂಧಿ ಮೈದಾನ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಂಎಲ್‌ಸಿ ಚುನಾವಣೆ ವೇಳೆ ವಾಹನವೊಂದರಿಂದ ಅಪಾರ ಪ್ರಮಾಣದ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ನಗದು ಆರ್‌ಜೆಡಿ ಎಂಎಲ್‌ಸಿಗೆ ಸೇರಿದ್ದು ಎಂದು ಆರೋಪಿಸಲಾಗಿದೆ.

ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಮತ್ತು ಸಂಸದ ಮನೋಜ್ ಝಾ, ಸಿಬಿಐ ದಾಳಿಯಲ್ಲಿ ಯಾವುದೇ ಅಚ್ಚರಿಯಿಲ್ಲ, ನಿರೀಕ್ಷೆಯಿತ್ತು. ಕೇಂದ್ರೀಯ ಸಂಸ್ಥೆಗಳ ವಿಶ್ವಾಸಾರ್ಹತೆ ಪ್ರಶ್ನಿಸುವಂತಾಗಿದೆ. ಕೇಂದ್ರ ತನಿಖಾ ಸಂಸ್ಥೆಗಳು ಬಿಜೆಪಿ ಕೈಗೊಂಬೆಯಾಗಿವೆ ಎಂದು ಟೀಕಿಸಿದ್ದಾರೆ. 

ಮಹಾರಾಷ್ಟ್ರ, ದೆಹಲಿ ಮತ್ತು ಈಗ ಬಿಹಾರದಲ್ಲಿ ಸಿಬಿಐ ದಾಳಿಗಳಲ್ಲಿ ಒಂದು ಪ್ರವೃತ್ತಿಯನ್ನು ಕಾಣಬಹುದು. ಬಿಹಾರ ದಾಳಿ ಒಂದು ಉತ್ತಮ ಪಾಠ ನೀಡುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ಮಧ್ಯೆ, ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ನಿನ್ನೆ ಮಂಗಳವಾರ ತಡರಾತ್ರಿ ರಾಜ್ಯ ರಾಜಧಾನಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮುಖಂಡರ ಮನೆಗಳ ಮೇಲೆ ಸಿಬಿಐ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ತಮ್ಮ ಪಕ್ಷದ ಸಚಿವರು ಮತ್ತು ಶಾಸಕರಿಗೆ ಎಚ್ಚರಿಕೆ ನೀಡಿದ್ದರು. ಸಿಬಿಐ ಈ ಹಿಂದೆ ಜುಲೈನಲ್ಲಿ ತನ್ನ ಕಾರ್ಯಾಚರಣೆಯಲ್ಲಿ ಭೂ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿತ್ತು.

ಇದೀಗ ಅಧಿಕಾರದಿಂದ ಕಿತ್ತೊಗೆದು ರಾಜಕೀಯವಾಗಿ ಒಂಟಿಯಾಗಿರುವ ಬಿಜೆಪಿಯು ಪ್ರಬಲ ಏಳು ಪಕ್ಷಗಳ ಆಡಳಿತ 'ಮಹಾಘಟಬಂಧನ್' ವಿರುದ್ಧ ತನ್ನ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿರುವುದರ ಮಧ್ಯೆ ಸಿಬಿಐ ದಾಳಿ ನಡೆದಿದ್ದು ರಾಜಕೀಯವಾಗಿ ಬಹಳ ಚರ್ಚಿತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com