ಇಡಿ, ಸಿಬಿಐ ಗೆ ಹೆದರಲ್ಲ; ಉದ್ಯೋಗ ಸೃಷ್ಟಿಯ ಭರವಸೆ ಈಡೇರಿಸುತ್ತೇವೆ: ತೇಜಸ್ವಿ ಯಾದವ್
2020ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರ್‌ಜೆಡಿ ಪ್ರಚಾರದ ನೇತೃತ್ವ ವಹಿಸಿದ್ದಾಗ ತಾನು ನೀಡಿದ್ದ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನಮ್ಮ ನೂತನ ಸರ್ಕಾರವು ಈಡೇರಿಸುತ್ತದೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಗುರುವಾರ ತಿಳಿಸಿದ್ದಾರೆ.
Published: 11th August 2022 05:35 PM | Last Updated: 14th November 2022 01:14 PM | A+A A-

ತೇಜಸ್ವಿ ಯಾದವ್
ಪಾಟ್ನಾ: ಕೇಂದ್ರದ ಸಿಬಿಐ ಮತ್ತು ಇ.ಡಿ ಸಂಸ್ಥೆಗಳಿಗೆ ನಾನು ಹೆದರುವುದಿಲ್ಲ. ಅವರಿಗೆ (ಬಿಜೆಪಿ) 'ಶಾಂತಿ' ಸಿಗುತ್ತದೆ ಎಂದಾದರೆ, ನನ್ನ ಮನೆಯಲ್ಲೇ ನಾನು ಎರಡೂ ತನಿಖಾ ಸಂಸ್ಥೆಗಳಿಗೆ ಕಚೇರಿ ತೆರೆಯಲು ಅವಕಾಶ ನೀಡುತ್ತೇನೆ ಎಂದು ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಪ್ರಸಾದ್ ಯಾದವ್ ಗುರುವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯು ರಾಜಕೀಯ ವಿರೋಧಿಗಳನ್ನು ಮಣಿಸಲು ಕೇಂದ್ರದ ತನಿಖಾ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
'2020ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆರ್‌ಜೆಡಿ ಪ್ರಚಾರದ ನೇತೃತ್ವ ವಹಿಸಿದ್ದಾಗ ತಾನು ನೀಡಿದ್ದ 10 ಲಕ್ಷ ಉದ್ಯೋಗಗಳನ್ನು ಒದಗಿಸುವ ಭರವಸೆಯನ್ನು ನಮ್ಮ ನೂತನ ಸರ್ಕಾರವು ಈಡೇರಿಸುತ್ತದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಈಗಾಗಲೇ ಉದ್ಯೋಗ ಸೃಷ್ಟಿಗೆ ಪ್ರಮುಖ ಆದ್ಯತೆ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಆಗಸ್ಟ್ 24 ರಂದು ಬಿಹಾರ ವಿಧಾನಸಭೆಯಲ್ಲಿ ನಿತೀಶ್ ಕುಮಾರ್- ತೇಜಸ್ವಿ ಯಾದವ್ ಬಹುಮತ ಸಾಬೀತು
'ಸರ್ಕಾರಿ ಇಲಾಖೆಗಳಲ್ಲಿ ಹಲವು ಹುದ್ದೆಗಳು ಖಾಲಿ ಇವೆ. ಅವುಗಳನ್ನು ಭರ್ತಿ ಮಾಡುವ ಮೂಲಕವೇ ನಾವು ಉದ್ಯೋಗ ಸೃಷ್ಟಿಯನ್ನು ಪ್ರಾರಂಭಿಸುತ್ತೇವೆ. ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ನಂತರ ನಾವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತೇವೆ. ಇದು ಕೇವಲ ಭರವಸೆಯಾಗಿರದೆ, ಬಿಹಾರದಲ್ಲಿ ಉದ್ಯೋಗಕ್ಕಾಗಿ ಸಂಕಷ್ಟಕ್ಕೀಡಾಗಿರುವವರಿಗೆ ನೀಡುತ್ತಿರುವ ಮನ್ನಣೆಯಾಗಿದೆ' ಎಂದು ಉಪಮುಖ್ಯಮಂತ್ರಿ ಹೇಳಿದರು.
'ಎಲ್ಲಾ 243 ವಿಧಾನಸಭೆ ಕ್ಷೇತ್ರಗಳಲ್ಲಿ ಎನ್‌ಡಿಎಗಿಂತ ಆರ್‌ಜೆಡಿ ನೇತೃತ್ವದ ಮೈತ್ರಿಕೂಟವು ಕೇವಲ 12,000 ಮತಗಳನ್ನು ಮಾತ್ರ ಕಡಿಮೆ ಗಳಿಸಿತ್ತು. ಚುನಾವಣೆಯಲ್ಲಿ ಜನರು ಆಶೀರ್ವಾದ ನೀಡಿದ್ದರಿಂದ ಹಿಂತಿರುಗಿ ನೋಡುವ ಪ್ರಮೇಯವೇ ಇಲ್ಲ' ಎಂದು ಅವರು ನೆನಪಿಸಿಕೊಂಡರು.
'ಸಮಸ್ಯೆಯೆಂದರೆ ನಮ್ಮ ಬಗ್ಗೆ ನಾವೇ ಪ್ರಚಾರ ಮಾಡಿಕೊಳ್ಳುವುದು ಹೇಗೆಂದು ನಮಗೆ ತಿಳಿದಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಪ್ರಚಾರ ಮಾಡುವುದಲ್ಲಿ ಎತ್ತಿದ ಕೈ ಆಗಿದೆ. ಆದರೆ, ಜನರು ನಮ್ಮ ಸರ್ಕಾರದ ಸಾಧನೆಯನ್ನು ನೋಡಿದ ನಂತರ ಅವರ ಆರೋಪಗಳನ್ನು ನೋಡುತ್ತಾರೆ' ಯಾದವ್ ಹೇಳಿದರು.