ದೆಹಲಿ ಮಹಾನಗರ ಪಾಲಿಕೆ ಚುನಾವಣೆ: ಮತದಾನ ಆರಂಭ, ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಮತ ಚಲಾಯಿಸುವಂತೆ ಜನತೆಗೆ ಸಿಎಂ ಕೇಜ್ರಿವಾಲ್ ಮನವಿ

ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್​ಗಳಿಗೆ ಭಾನುವಾರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾನವು ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದೆ. ಈಗಾಗಲೇ ಅನೇಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಹಕ್ಕು ಚಲಾಯಿಸುತ್ತಿದ್ದಾರೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ.
ದೆಹಲಿ ಮಹಾನಗರ ಪಾಲಿಕೆ ಚುನಾವಣೆ.

ನವದೆಹಲಿ: ದೆಹಲಿ ಮಹಾನಗರ ಪಾಲಿಕೆಯ 250 ವಾರ್ಡ್​ಗಳಿಗೆ ಭಾನುವಾರ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾನವು ಬೆಳಗ್ಗೆ 8ರಿಂದ ಸಂಜೆ 5.30ರವರೆಗೆ ಮತದಾನ ನಡೆಯಲಿದೆ. ಈಗಾಗಲೇ ಅನೇಕರು ಸರತಿ ಸಾಲಿನಲ್ಲಿ ನಿಂತು ತಮ್ಮ ಮತ ಹಕ್ಕು ಚಲಾಯಿಸುತ್ತಿದ್ದಾರೆ.

ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ, ಆಮ್ ಆದ್ಮಿ ಪಾರ್ಟಿ (ಆಪ್)​ ಹಾಗೂ ಕಾಂಗ್ರೆಸ್​ ನಡುವೆ ತ್ರಿಕೋನ ಸ್ಪರ್ಧೆಗೆ ಏರ್ಪಟ್ಟಿದೆ.

ರಾಜಧಾನಿಯಲ್ಲಿ ನಗರ ಸ್ಥಳೀಯ ಸಂಸ್ಥೆಯ ಚುಕ್ಕಾಣಿ ಹಿಡಿಯಲು ವಿವಿಧ ರಾಜಕೀಯ ಪಕ್ಷಗಳ ನಾಯಕರು ಬೀದಿಗಿಳಿದು ಸಭೆ ಮತ್ತು ಅಂತಿಮ ಹಂತದ ಮನೆ ಮನೆ ಪ್ರಚಾರ ಕೈಗೊಂಡು ಮತ ಯಾಚನೆ ಮಾಡಿದ್ದರು. ಡಿಸೆಂಬರ್ 7ರಂದು ಮತ ಎಣಿಕೆ ನಡೆಯಲಿದೆ.

ದೆಹಲಿಯಲ್ಲಿ ಒಟ್ಟು 1,45,05,358 ಮತದಾರರಿದ್ದಾರೆ. ಈ ಪೈಕಿ 78,93,418 ಪುರುಷರು, 66,10,879 ಮಹಿಳೆಯರು ಮತ್ತು 1,061 ತೃತೀಯಲಿಂಗಿಗಳಿದ್ದಾರೆ. ಚುನಾವಣಾ ಆಯೋಗ 13,638 ಮತಗಟ್ಟೆಗಳನ್ನು ಸ್ಥಾಪಿಸಿದೆ. ಇದಕ್ಕೆ ಬೇಕಾಗಿರುವ ಅಗತ್ಯ ಸಿದ್ಧತೆಗಳನ್ನು ಮಾಡಲಾಗಿದೆ.

ಮತದಾರರ ಗುಣಮಟ್ಟದ ಅನುಭವಕ್ಕಾಗಿ 68 ಮಾದರಿ ಮತ್ತು 68 ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 68 ಮಾದರಿ ಮತಗಟ್ಟೆಗಳಲ್ಲಿ ಕಾಯುವ ಪ್ರದೇಶ, ಲೌಂಜ್, ಮತದಾರರಿಗೆ ಮಿಠಾಯಿ, ಟೋಫಿ ವಿತರಣೆ, ಸೆಲ್ಫಿ ಬೂತ್ ಮತ್ತು ಅಂಗವಿಕಲರು, ಹಿರಿಯ ನಾಗರಿಕರಿಗೆ ಸಹಾಯ ಮಾಡಲು ನಾಗರಿಕ ರಕ್ಷಣಾ ಸ್ವಯಂಸೇವಕರು ಸೇರಿದಂತೆ ಸೌಲಭ್ಯಗಳನ್ನೂ ಒದಗಿಸಲಾಗಿದೆ.

68 ಪಿಂಕ್ ಮತಗಟ್ಟೆಗಳಲ್ಲಿ ಮಹಿಳಾ ಸಿಬ್ಬಂದಿ ನಿಯೋಜಿಸಿದ್ದು, ಹಾಲುಣಿಸುವ ತಾಯಂದಿರಿಗೆ ಫೀಡಿಂಗ್​ ರೂಂ, ಮತದಾರರೊಂದಿಗೆ ಬರುವ ಚಿಕ್ಕ ಮಕ್ಕಳಿಗಾಗಿ ಶಿಶುವಿಹಾರ, ಮಕ್ಕಳಿಗೆ ಸ್ವಿಂಗ್, ಸೆಲ್ಫಿ ಬೂತ್ ಸೇರಿದಂತೆ ಇತರ ಸೌಲಭ್ಯವಿದೆ.

ಚುನಾವಣೆ ಹಿನ್ನೆಲೆಯಲ್ಲಿ ದೆಹಲಿ ನಗರದಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ. 40 ಸಾವಿರ ಪೊಲೀಸರನ್ನು, 20 ಸಾವಿರ ಗೃಹರಕ್ಷಕರನ್ನು ಮತ್ತು ಅರೆಸೇನಾ ಪಡೆಯ 108 ಕಂಪನಿಗಳನ್ನು ಹಾಗೂ ರಾಜ್ಯ ಸಶಸ್ತ್ರ ಪೊಲೀಸ್‌ ಪಡೆಯನ್ನೂ ಭದ್ರತೆಗಾಗಿ ನಿಯೋಜಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕಣ್ಗಾವಲಿಗಾಗಿ 60 ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಮತ ಚಲಾಯಿಸುವಂತೆ ಸಿಎಂ ಕೇಜ್ರಿವಾಲ್ ಮನವಿ
ದೆಹಲಿ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಜನತೆಗೆ ಮನವಿ ಮಾಡಿಕೊಂಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ಭ್ರಷ್ಟಾಚಾರ ಮುಕ್ತ ಸರ್ಕಾರಕ್ಕಾಗಿ ಮತ ಚಲಾಯಿಸಿ ಎಂದು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಇಂದು ದೆಹಲಿಯನ್ನು ಸ್ವಚ್ಛ ಮತ್ತು ಸುಂದರವಾಗಿಸಲು ಮತದಾನ ನಡೆಯುತ್ತಿದೆ, ಪಾಲಿಕೆಯಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಮಾಡಲು ಮತದಾನ ನಡೆಯುತ್ತಿದೆ. ಪ್ರಾಮಾಣಿಕ ಮತ್ತು ದುಡಿಯುವ ಸರ್ಕಾರವನ್ನು ರಚಿಸಲು ಇಂದೇ ನಿಮ್ಮ ಮತ ಚಲಾಯಿಸಿ ಎಂದು ಜನತೆಗೆ ಮನವಿ ಮಾಡಿಕೊಳ್ಳುತ್ತೇನೆಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com