ಮಹಾರಾಷ್ಟ್ರ: ಮಹಾರಾಷ್ಟ್ರ-ಕರ್ನಾಟಕ ಗಡಿ ಸಂಘರ್ಷ ಭುಗಿಲೆದ್ದಿದ್ದು, ನಮ್ಮ ಬೆಳಗಾವಿ ಭೇಟಿ ಮುಂದೂಡಿಕೆಯಾಗಿದೆ. ರದ್ದುಗೊಳಿಸಿಲ್ಲ ಎಂದು ಮಹಾರಾಷ್ಟ್ರ ಸಚಿವ ಸಂಭುರಾಜ್ ದೇಸಾಯಿ ಅವರು ಮಂಗಳವಾರ ಹೇಳಿದ್ದಾರೆ.
ಅಂಬೇಡ್ಕರ್ ಅವರ ಮಹಾಪರಿನಿರ್ವಾಣ ದಿವಸ್ ನಿಮಿತ್ತ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಅವರು, ಇಂದು ಬೆಳಗಾವಿಯ ಗಡಿ ಪ್ರದೇಶಕ್ಕೆ ಭೇಟಿ ನೀಡಬೇಕಾಗಿತ್ತು. ಈ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ತಿಳಿಸಿದ್ದೆವು. ಗಡಿ ಸಮಸ್ಯೆ ಕುರಿತು ಜನರೊಂದಿಗೆ ಚರ್ಚಿಸಲು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಿಷಯದಲ್ಲಿ ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳಬೇಕು ಎಂದು ಹೇಳಿದರು.
"ಆದರೆ ಕರ್ನಾಟಕ ಗಡಿಯಲ್ಲಿ ನಾವು ಹೋಗಲು ಸಾಧ್ಯವಾಗದಂತೆ ಭಾರೀ ಪಡೆಗಳನ್ನು ನಿಯೋಜಿಸಲಾಗಿದೆ. ಕರ್ನಾಟಕ ಸಿಎಂ ಅವರ ಈ ಕ್ರಮ ಸರಿಯಲ್ಲ, ಎಲ್ಲಿಗೆಬೇಕಾದರೂ ಹೋಗಲು ಎಲ್ಲರಿಗೂ ಹಕ್ಕಿದೆ" ಎಂದು ಅವರು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ವಾಗ್ದಾಳಿ ನಡೆಸಿದರು.
‘ಬಾಬಾ ಸಾಹೇಬರ ಮಹಾಪರಿನಿರ್ವಾಣ ದಿವಸ್ ಸಂದರ್ಭದಲ್ಲಿ ಯಾವುದೇ ರೀತಿಯ ಉದ್ವಿಗ್ನತೆ ಉಂಟಾಗಬಾರದು ಎಂದು ನಾವು ಇಂದು ಹೋಗಲಿಲ್ಲ’ ಎಂದು ಹೇಳಿದ ಮಹಾರಾಷ್ಟ್ರ ಸಚಿವರು, ‘ಈ ಕಾರ್ಯಕ್ರಮ ರದ್ದಾಗಿಲ್ಲ, ಮುಂದೂಡಿದ್ದೇವೆ ಅಷ್ಟೆ" ಎಂದರು.
ಏತನ್ಮಧ್ಯೆ, ಎಎನ್‌ಐ ಜೊತೆ ಮಾತನಾಡಿದ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್) ನಾಯಕಿ ಸರಿತಾ ಪಾಟೀಲ್, “ಬೆಳಗಾವಿಗೆ ಹೋಗಬೇಕಿದ್ದ ಮಹಾರಾಷ್ಟ್ರ ಸಚಿವರು, ಮಹಾಪರಿನಿರ್ವಾಣ ದಿವಸ್ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂಬುದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿಕೆಯಿಂದ ನಮಗೆ ತಿಳಿಯಿತು" ಎಂದಿದ್ದಾರೆ.
Advertisement