ಬಂಧಿತ ಆರೋಪಿ ಅನುಜ್
ಬಂಧಿತ ಆರೋಪಿ ಅನುಜ್

ಸ್ವಂತ ಚಿಕ್ಕಮ್ಮನನ್ನೇ ಕೊಂದು 10 ತುಂಡಾಗಿ ಕತ್ತರಿಸಿ ಬಕೆಟ್ ನಲ್ಲಿ ಹೊತ್ತೊಯ್ದು ಸುರಿದ ಭೂಪ!

ಕ್ಷುಲ್ಲಕ ವಿಚಾರಕ್ಕೆ ಕ್ರೋಧಗೊಂಡ ವ್ಯಕ್ತಿಯೊಬ್ಬ ತನ್ನ ಸ್ವಂತ ಚಿಕ್ಕಮ್ಮನನ್ನೇ ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಹೆದ್ದಾರಿಯಲ್ಲಿ ಎಸೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
Published on

ಜೈಪುರ: ಕ್ಷುಲ್ಲಕ ವಿಚಾರಕ್ಕೆ ಕ್ರೋಧಗೊಂಡ ವ್ಯಕ್ತಿಯೊಬ್ಬ ತನ್ನ ಸ್ವಂತ ಚಿಕ್ಕಮ್ಮನನ್ನೇ ಕೊಂದು ಆಕೆಯ ದೇಹವನ್ನು 10 ತುಂಡುಗಳಾಗಿ ಕತ್ತರಿಸಿ ಹೆದ್ದಾರಿಯಲ್ಲಿ ಎಸೆದಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಅನುಜ್ ಶರ್ಮಾ (32 ವರ್ಷ) ಬಂಧಿತ ಆರೋಪಿಯಾಗಿದ್ದು, ತನ್ನ ಚಿಕ್ಕಮ್ಮ ಸರೋಜಾ (64)ರನ್ನು ಕೊಂದಿದ್ದಾನೆ ಎನ್ನಲಾಗಿದೆ. ಅನುಜ್ ತನ್ನ ತಂದೆ, ಸಹೋದರಿ ಹಾಗೂ ಚಿಕ್ಕಮ್ಮ ಸರೋಜಾ ಅವರೊಂದಿಗೆ ಜೈಪುರದ ವಿದ್ಯಾಧರ್ ನಗರದಲ್ಲಿ ವಾಸಿಸುತ್ತಿದ್ದ. ಸರೋಜಾ ತನ್ನ ಪತಿಯ ಮರಣ ನಂತರ ಅನುಜ್ ಮನೆಯಲ್ಲೇ ವಾಸಿಸುತ್ತಿದ್ದರು. ಅಷ್ಟೇ ಅಲ್ಲದೇ ಅನುಜ್‍ನ ತಾಯಿ ಕಳೆದ ವರ್ಷ ಕೋವಿಡ್‍ನಿಂದಾಗಿ ಮೃತಪಟ್ಟಿದ್ದರು.

ದೆಹಲಿಗೆ ಹೋಗಲು ಬಿಡಲಿಲ್ಲ ಎಂದು ಕೊಲೆ
ಪೊಲೀಸ್ ಮೂಲಗಳ ಪ್ರಕಾರ ಡಿ. 11ರಂದು ಅನುಜ್‍ನ ತಂದೆ, ಸಹೋದರಿ ಇಂದೋರ್‌ಗೆ ಹೊರಟಿದ್ದರು. ಈ ವೇಳೆ ಅನುಜ್ ತಾನೂ ಬರುವುದಾಗಿ ತಿಳಿಸಿದ್ದ. ಆದರೆ ಅನುಜ್‍ನನ್ನು ಸರೋಜಾ ಹೋಗದಂತೆ ತಡೆದಿದ್ದಾಳೆ. ಇದರಿಂದಾಗಿ ಅನುಜ್‍ನ ತಂದೆ ಹಾಗೂ ಸಹೋದರಿ ಇಬ್ಬರೇ ದೆಹಲಿಗೆ ಹೋಗಿದ್ದಾರೆ. ಈ ವೇಳೆ ಮನೆಯಲ್ಲಿ ಸರೋಜಾ ಹಾಗೂ ಅನುಜ್ ಇಬ್ಬರೇ ಇದ್ದರು. ಅನುಜ್‍ಗೆ ಚಿಕ್ಕಮ್ಮ ದೆಹಲಿಗೆ ಹೋಗಲು ಬಿಟ್ಟಿಲ್ಲ ಎಂದು ಕೋಪದಲ್ಲಿದ್ದ. ಅಷ್ಟೇ ಅಲ್ಲದೇ ಈ ವಿಷಯಕ್ಕೆ ಜಗಳ ನಡೆದಿದ್ದು, ಕೋಪದಲ್ಲಿದ್ದ ಅನುಜ್ ಚಹಾ ಮಾಡುತ್ತಿದ್ದ ಸರೋಜಾಳ ತಲೆಗೆ ಸುತ್ತಿಗೆಯಿಂದ ಹೊಡೆದಿದ್ದಾನೆ. ನಂತರ ಆಕೆಯ ದೇಹವನ್ನು ಮಾರ್ಬಲ್ ಕಟರ್‌ನಿಂದ 10 ತುಂಡುಗಳಾಗಿ ಕತ್ತರಿಸಿ ಬಕೆಟ್ ನಲ್ಲಿ ತುಂಬಿಕೊಂಡು ಜೈಪುರ-ಸಿಕರ್ ಹೆದ್ದಾರಿಯಲ್ಲಿ ದೂರದ ಪ್ರದೇಶದಲ್ಲಿ ಎಸೆದಿದ್ದಾನೆ.

ಕೊಂದು ತಾನೇ ಪೊಲೀಸ್ ದೂರು ನೀಡಿದ್ದ ಭೂಪ
ಸರೋಜಾಳ ದೇಹದ ಭಾಗಗಳನ್ನು ಅನುಜ್ ಬಕೆಟ್ (Bucket) ಮತ್ತು ಸೂಟ್‍ಕೇಸ್‍ನಲ್ಲಿ ಸಾಗಿಸಿದ್ದ. ನಂತರ ಪೊಲೀಸ್ ಠಾಣೆಗೆ ಹೋಗಿ ಚಿಕ್ಕಮ್ಮ ಕಾಣೆ ಆಗಿರುವ ಬಗ್ಗೆ ದೂರು ದಾಖಲಿಸಿದ್ದಾನೆ. ಅಷ್ಟೇ ಅಲ್ಲದೇ ಪೊಲೀಸರ ದಾರಿ ತಪ್ಪಿಸಲು ಇತರ ಸಂಬಂಧಿಕರೊಂದಿಗೆ ಅವಳನ್ನು ಅನುಜ್ ಕೂಡ ಹುಡುಕಲು ಪ್ರಾರಂಭಿಸಿದ್ದಾನೆ. ಪೊಲೀಸರಿಗೆ ತನಿಖೆ ಸಮಯದಲ್ಲಿ ಅನುಜ್ ಸುಳ್ಳು ಹೇಳಿಕೆ ನೀಡಿದ್ದಾನೆ ಎಂಬ ವಿಷಯ ಗೊತ್ತಾಗಿದ್ದು, ಈ ಹಿನ್ನೆಲೆಯಲ್ಲಿ ಆತನ ಚಟುವಟಿಕೆಗಳ ಮೇಲೆ ನಿಗಾ ವಹಿಸಿದ್ದಾರೆ. ಅಷ್ಟೇ ಅಲ್ಲದೇ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅನುಜ್ ಸೂಟ್‍ಕೇಸ್ ಮತ್ತು ಬಕೆಟ್‍ನೊಂದಿಗೆ ಮನೆಯಿಂದ ಹೊರಹೋಗಿರುವುದು ಕಂಡುಬಂದಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಅನುಜ್‍ನನ್ನು ವಶಕ್ಕೆ ಪಡೆದು ಮತ್ತೆ ತನಿಖೆ ನಡೆಸಿದ್ದಾರೆ. ಈ ವೇಳೆ ಅನುಜ್ ತನ್ನ ಚಿಕ್ಕಮ್ಮನ ತಲೆಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಶ್ರದ್ಧಾ ವಾಕರ್ ಕೊಲೆ ಪ್ರಕರಣ ಹಸಿರಾಗಿರುವಂತೆಯೇ ಅಂತಹುದೇ ಮಾದರಿಯ ಕೊಲೆಗಳು ದೇಶಾದ್ಯಂತ ಬೆಳಕಿಗೆ ಬರುತ್ತಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com