ಘಾಜಿಪುರ: ಉತ್ತರ ಪ್ರದೇಶದ ಗ್ಯಾಂಗ್‌ಸ್ಟರ್ ಮತ್ತು ಸಮಾಜ ವಿರೋಧಿ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲಖನೌದಲ್ಲಿ ಗ್ಯಾಂಗ್‌ಸ್ಟರ್ ಹಾಗೂ ರಾಜಕಾರಣಿಯಾಗಿರುವ ಮುಖ್ತಾರ್ ಅನ್ಸಾರಿ ಅವರ ಕುಟುಂಬದ ಸದಸ್ಯರು ಮತ್ತು ಆಪ್ತ ಸಹಾಯಕನ ಹೆಸರಿನಲ್ಲಿ ನೋಂದಾಯಿಸಲಾದ 8 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಲಖನೌನ ದಾಲಿಬಾಗ್ ಪ್ರದೇಶದಲ್ಲಿ ಅನ್ಸಾರಿ ಅವರ ತಾಯಿ ಮತ್ತು ಅವರ ಆಪ್ತ ಸಹಾಯಕ ಎಜಾಜುಲ್ ಅನ್ಸಾರಿ ಅವರ ಪತ್ನಿ ಹೆಸರಿನಲ್ಲಿದ್ದ ಭೂಮಿಯನ್ನು ಶನಿವಾರದಂದು ಮೊಹಮ್ಮದಾಬಾದ್ ಸರ್ಕಲ್ ಆಫೀಸರ್ ಎಸ್ ಬಿ ಸಿಂಗ್ ನೇತೃತ್ವದ ತಂಡ ಜಪ್ತಿ ಮಾಡಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಓಂವೀರ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು.
'ನಿವೇಶನಗಳ ಒಟ್ಟು ಮೌಲ್ಯ ಸುಮಾರು 8 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮುಖ್ತಾರ್ ಅನ್ಸಾರಿ ತನ್ನ ಗ್ಯಾಂಗ್‌ನ ಅಪರಾಧ ಚಟುವಟಿಕೆಗಳಿಂದ ಗಳಿಸಿದ ಹಣವನ್ನು ಬಳಸಿ ಆಸ್ತಿಗಳನ್ನು ಖರೀದಿಸಿದ್ದಾರೆ' ಎಂದು ಎಸ್‌ಪಿ ಹೇಳಿದರು.
ಆಸ್ತಿಯನ್ನು ಜಪ್ತಿ ಮಾಡಿದ ತಂಡವು ಈ ಕಾರ್ಯಾಚರಣೆಗೆ ಲಖನೌ ಪೊಲೀಸ್ ಕಮಿಷನರೇಟ್‌ನ ಸ್ಥಳೀಯ ತಂಡದ ಸಹಾಯವನ್ನು ಕೋರಿತ್ತು.
ಘಾಜಿಪುರ ಜಿಲ್ಲಾ ಮ್ಯಾಜಿಸ್ಟ್ರೇಟ್ ಆರ್ಯಕ ಅಖೌರಿ ಅವರು ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಆದೇಶವನ್ನು ಹೊರಡಿಸಿದ್ದಾರೆ.
Advertisement