ರಾಂಚಿ: ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿರುವ ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮುಗೆ ವಿಪಕ್ಷಗಳಿಂದಲೂ ಭಾರೀ ಬೆಂಬಲ ವ್ಯಕ್ತವಾಗಿದೆ. ಇದೀಗ ಈ ಸಾಲಿಗೆ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಸೇರ್ಪಡೆಯಾಗಿದೆ. ಜುಲೈ 18 ರ ರಾಷ್ಟ್ರಪತಿ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದ ಎನ್‌ಡಿಎಯೇತರ ಪಕ್ಷಗಳ ಪಟ್ಟಿಗೆ ಜೆಎಂಎಂ ಸೇರಿದೆ.
ಕಾಂಗ್ರೆಸ್ ಸಹಭಾಗಿತ್ವದಲ್ಲಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿ ಹೇಮಂತ್ ಸೊರೆನ್ ನೇತೃತ್ವದ ಜೆಎಂಎಂ, ದ್ರೌಪದಿ ಮುರ್ಮು ಅವರ ಬುಡಕಟ್ಟು ಗುರುತನ್ನು ಉಲ್ಲೇಖಿಸಿ ಅವರನ್ನು ಬೆಂಬಲಿಸಿದೆ. ಜಾರ್ಖಂಡ್ ಜನಸಂಖ್ಯೆಯ ಶೇಕಡಾ 26 ರಷ್ಟು ಬುಡಕಟ್ಟು ಜನಾಂಗದವರಿದ್ದಾರೆ.
ಒಡಿಶಾದವರಾದ ಮುರ್ಮು ಅವರು ಜಾರ್ಖಂಡ್‌ನ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಈಗಾಗಲೇ ಸಂಖ್ಯಾಬಲವನ್ನು ಹೊಂದಿರುವುದರಿಂದ ಮುರ್ಮು ಅವರು ಆಯ್ಕೆಯಾಗುವ ಸಾಧ್ಯತೆಯಿದೆ. ಒಂದು ವೇಳೆ ಅವರು ಆಯ್ಕೆಯಾದಲ್ಲಿ ಬುಡಕಟ್ಟು ಸಮುದಾಯದಿಂದ ಭಾರತದ ರಾಷ್ಟ್ರಪತಿಯಾದ ಮೊದಲ ಮಹಿಳೆಯಾಗುತ್ತಾರೆ. ಫಲಿತಾಂಶದ ದಿನವಾದ ಜುಲೈ 21 ರಂದು ಬಿಜೆಪಿ ಈಗಾಗಲೇ ತನ್ನ ಆಚರಣೆಯ ಯೋಜನೆಗಳನ್ನು ಹೊಂದಿದೆ.
ಜಂಟಿ ವಿರೋಧ ಪಕ್ಷದ ಅಭ್ಯರ್ಥಿ ಯಶವಂತ್ ಸಿನ್ಹಾ ಈಗ ಮತ್ತಷ್ಟು ದುರ್ಬಲರಾಗಿದ್ದಾರೆ. ಬಿಜೆಪಿಯು ಮುರ್ಮು ಅವರ ಹೆಸರನ್ನು ಘೋಷಿಸುವ ಮೊದಲು ವಿಪಕ್ಷಗಳ ಜಂಟಿ ಅಭ್ಯರ್ಥಿಯಾಗಿ ಸಿನ್ಹಾ ಘೋಷಿಸಲ್ಪಟ್ಟರು. ಇದು ವಿಶೇಷವಾಗಿ ಗಮನಾರ್ಹ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರುವ ರಾಜ್ಯಗಳಲ್ಲಿ ಸಮೀಕರಣಗಳನ್ನು ಬದಲಾಯಿಸಿತು. ಮಹಾರಾಷ್ಟ್ರದಲ್ಲಿ ಸರ್ಕಾರ ಬದಲಾದ ಮೇಲಂತೂ ಬಿಜೆಪಿಗೆ ಆನೆಬಲ ಬಂದಂತಾಗಿದೆ.
Advertisement