ಭಾರತದ 15ನೇ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಆಯ್ಕೆ, ಈ ಹುದ್ದೆಗೇರಿದ ಮೊದಲ ಬುಡಕಟ್ಟು ಮಹಿಳೆ!

ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ಈ ಹುದ್ದೆಗೇರಿದ್ದಾರೆ.
ದ್ರೌಪದಿ ಮುರ್ಮು
ದ್ರೌಪದಿ ಮುರ್ಮು

ನವದೆಹಲಿ: ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಯೊಬ್ಬರು ಈ ಹುದ್ದೆಗೇರಿದ್ದಾರೆ.

ತೀವ್ರ ಕುತೂಹಲ ಕೆರಳಿಸಿರುವ ರಾಷ್ಟ್ರಪತಿ ಚುನಾವಣೆಯ ಮತ ಎಣಿಕೆಯಲ್ಲಿ ದ್ರೌಪದಿ ಮುರ್ಮು ಅವರು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ವಿರುದ್ಧ ಗೆಲುವು ಸಾಧಿಸಿದ್ದಾರೆ. ದ್ರೌಪದಿ ಮುರ್ಮು ಅವರಿಗೆ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಸೇರಿದಂತೆ ಹಲವರು ಶುಭಾಶಯ ಕೋರಿದ್ದು ಬಿಜೆಪಿ ಪಾಳಯದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ದ್ರೌಪದಿ ಮುರ್ಮು ಅವರಿಗೆ 5,121 ಮತಗಳು ಬಿದ್ದಿವೆ. ಈ ಮತಗಳ ಒಟ್ಟು ಮೌಲ್ಯ 5,77,777 ಆಗಿದೆ. ಇನ್ನು ವಿಪಕ್ಷ ಅಭ್ಯರ್ಥಿ ಯಶವಂತ್ ಸಿನ್ಹಾ ಅವರಿಗೆ 1,058 ಮತಗಳು ಬಿದ್ದಿದ್ದು ಇದರ ಮೌಲ್ಯ 2,61,062 ಆಗಿದೆ.

ಹಾಲಿ ಚಲಾವಣೆಯಾಗಿರುವ ಮತಗಳ ಪೈಕಿ 15 ಸಂಸದರ ಮತಗಳು ಅಸಿಂಧು ಎಂದು ಘೋಷಿಸಲಾಗಿದೆ ಎಂದು ಪಿಸಿ ಮೋದಿ ತಿಳಿಸಿದ್ದಾರೆ. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದೆ.

ದ್ರೌಪದಿ ಮುರ್ಮು ಅವರ ಬದುಕು, ರಾಜಕೀಯ ಹಾದಿ!
ಒಬ್ಬ ಬುಡಕಟ್ಟು ಜನಾಂಗದ ಸ್ಥಳೀಯ ನಾಯಕಿಯಾಗಿ ತಮ್ಮ ರಾಜಕೀಯ ವೃತ್ತಿ ಜೀವನ ಆರಂಭಿಸಿ ಜಾರ್ಖಂಡ್ ನ ರಾಜ್ಯಪಾಲ ಹುದ್ದೆಗೇರಿ ಇದೀಗ ರಾಷ್ಟ್ರಪತಿ ಆಗುವವರೆಗೂ ದ್ರೌಪದಿ ಮುರ್ಮು ಅವರ ರಾಜಕೀಯ ಬದುಕು ಬಂದು ನಿಂತಿದೆ. 

ಒಡಿಶಾ ರಾಜ್ಯದ ಬುಡಕಟ್ಟು ಜನಾಂಗದ ಸಂತಲ್ ಸಮುದಾಯದಲ್ಲಿ ಜನಿಸಿರುವ ಮುರ್ಮು 1997ರಲ್ಲಿ ರೈರಂಗ್ ಪುರ್ ನಗರ ಪಂಚಾಯತ್ ನಿಂದ ಕೌನ್ಸಿಲರ್ ಆಗಿ ವೃತ್ತಿಜೀವನ ಆರಂಭಿಸಿದರು. 2000ದಲ್ಲಿ ಬಿಜೆಡಿ-ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಸಚಿವೆಯಾಗಿದ್ದರು. ನಂತರ 2015ರಲ್ಲಿ ಜಾರ್ಖಂಡ್ ಸರ್ಕಾರದಲ್ಲಿ ಗವರ್ನರ್ ಆಗಿದ್ದರು. ರೈರಂಗ್ ಪುರ್ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕಿಯಾಗಿದ್ದರು. 2009ರಲ್ಲಿ ಬಿಜೆಪಿ ಮೈತ್ರಿಯಿಂದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಪಕ್ಷವಾದ ಬಿಜೆಡಿ ಹೊರಬಂದಿದ್ದ ವೇಳೆ ಮುರ್ಮು ಶಾಸಕಿಯಾಗಿದ್ದರು.

ಒಡಿಶಾದ ಹಿಂದುಳಿದ ಜಿಲ್ಲೆಯಾದ ಮಯೂರ್‌ಭಂಜ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಬಡ ಬುಡಕಟ್ಟು ಕುಟುಂಬದಿಂದ ಬಂದ ದ್ರೌಪದಿ ಮುರ್ಮು ಸವಾಲುಗಳ ನಡುವೆಯೂ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದರು. ಅವರು ರಾಯರಂಗಪುರದ ಶ್ರೀ ಅರಬಿಂದೋ ಸಮಗ್ರ ಶಿಕ್ಷಣ ಕೇಂದ್ರದಲ್ಲಿ ಅಧ್ಯಯನ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com