ನವದೆಹಲಿ: ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಕಾನ್‌ಸ್ಟೆಬಲ್ ನೇಮಕಾತಿಯಲ್ಲಿ ಅಗ್ನಿವೀರರಿಗೆ ನೀಡಲಾಗುವ ಶೇ. 10 ರಷ್ಟು ಮೀಸಲಾತಿಯು ಸುಪ್ರೀಂ ಕೋರ್ಟ್ ಮಿತಿಗೊಳಿಸಿರುವ ಶೇ. 50 ರಷ್ಟು ಮೀಸಲಾತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಮೀಸಲಾತಿ ಪ್ರಮಾಣ ಶೇ. 50 ರಷ್ಟು ಮೀರಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಸಂಬಂದ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, "ಕಾನ್ಸ್‌ಟೇಬಲ್(ಜನರಲ್ ಡ್ಯೂಟಿ), ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ ರೈಫಲ್‌ಮ್ಯಾನ್ ಮತ್ತು ಅಸ್ಸಾಂ ರೈಫಲ್ಸ್‌ನ ನೇಮಕಾತಿಯಲ್ಲಿ ಮಾಜಿ ಅಗ್ನಿವೀರರಿಗೆ ಶೇ. 10 ರಷ್ಟು ಮೀಸಲಾತಿಗೆ ತಾತ್ವಿಕ ಅನುಮೋದನೆ ನೀಡಲಾಗಿದೆ. ಈ ಮೀಸಲಾತಿಯು ಸಮತಲವಾಗಿರುತ್ತದೆ. ಇದು ಸುಪ್ರೀಂ ಕೋರ್ಟ್ ಮಿತಿಗೊಳಿಸಿರುವ ಶೇ. 50 ರಷ್ಟು ಮೀಸಲಾತಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ” ಎಂದು ಅವರು ಹೇಳಿದರು.
ಮಾಜಿ ಅಗ್ನಿವೀರರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಮತ್ತು ದೈಹಿಕ ಸಾಮರ್ಥ್ಯ ಪರೀಕ್ಷೆಯಿಂದ ವಿನಾಯಿತಿ ನೀಡಲಾಗುವುದು ಎಂದು ರೈ ಹೇಳಿದರು.
ಜೂನ್ 14 ರಂದು ಕೇಂದ್ರ ಸರ್ಕಾರ 17 ರಿಂದ 21 ವರ್ಷ ವಯಸ್ಸಿನ ಯುವಕರನ್ನು ಸೇನೆ, ನೌಕಾಪಡೆ ಮತ್ತು ವಾಯುಪಡೆಗಳಲ್ಲಿ ನಾಲ್ಕು ವರ್ಷಗಳ ಅಲ್ಪಾವಧಿಗೆ ಒಪ್ಪಂದದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುವ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಗೆ ಚಾಲನೆ ನೀಡಿದೆ.
Advertisement