ಕೇಜ್ರಿವಾಲ್, ಜೈನ್ ಬಗ್ಗೆ ತುಂಬಾ ವೈಯಕ್ತಿಕ ಮಾಹಿತಿ ನನ್ನ ಬಳಿ ಇದೆ: ಮತ್ತೊಂದು ಪತ್ರದಲ್ಲಿ ವಂಚಕ ಸುಕೇಶ್ ಬೆದರಿಕೆ

ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆಯುವ ಮೂಲಕ ಎಎಪಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಂದು ಪತ್ರ ಬರೆದಿದ್ದಾರೆ.
ಅರವಿಂದ್ ಕೇಜ್ರಿವಾಲ್, ಸುಕೇಶ್ ಚಂದ್ರಶೇಖರ್, ಸತ್ಯೇಂದರ್ ಜೈನ್
ಅರವಿಂದ್ ಕೇಜ್ರಿವಾಲ್, ಸುಕೇಶ್ ಚಂದ್ರಶೇಖರ್, ಸತ್ಯೇಂದರ್ ಜೈನ್

ನವದೆಹಲಿ: ದೆಹಲಿ ಲೆಫ್ಟಿನೆಂಟ್ ಗವರ್ನರ್ ಗೆ ಪತ್ರ ಬರೆಯುವ ಮೂಲಕ ಎಎಪಿ ಸಚಿವರ ವಿರುದ್ಧ ಗಂಭೀರ ಆರೋಪ ಮಾಡುತ್ತಿರುವ ಜೈಲಿನಲ್ಲಿರುವ ವಂಚಕ ಸುಕೇಶ್ ಚಂದ್ರಶೇಖರ್ ಮತ್ತೊಂದು ಪತ್ರ ಬರೆದಿದ್ದಾರೆ. ನಿನ್ನೆ ದಿನ ಬರೆದಿರುವ ಪತ್ರದಲ್ಲಿ ಚಂದ್ರಶೇಖರ್ ಮನಸ್ಸಿನಲ್ಲಿ ತುಂಬಾ ವಿಷಯಗಳಿದ್ದು, ಪ್ರಶ್ನೆಗಳಿಗೆ ಉತ್ತರ ಬಯಸಿದ್ದಾನೆ. ಆದರೆ, ಇಡಿ ಮತ್ತು ಸಿಬಿಐ ವಿಚಾರಣೆ ವೇಳೆ ಯಾಕೆ ಈ ಆರೋಪಗಳನ್ನ ಬಹಿರಂಗಪಡಿಸಲಿಲ್ಲ? ಈಗ ಯಾಕೆ ಬಹಿರಂಗ ಮಾಡುತ್ತಿದ್ದಾನೆ? ಎಂಬುದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. 

ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ಪತ್ರದಲ್ಲಿ ಚಂದ್ರಶೇಖರ್, ಜೈಲು ಆಡಳಿತದಿಂದ ನಿರಂತರ ಬೆದರಿಕೆ ಮತ್ತು ಒತ್ತಡ ಹಾಕಲಾಗುತ್ತಿದೆ. ಪಂಜಾಬ್ ಮತ್ತು ಗೋವಾ ಚುನಾವಣೆ ಸಂದರ್ಭದಲ್ಲಿ ಹಣ ನೀಡುವಂತೆ ಸತ್ಯೇಂದರ್ ಜೈನ್ ನನ್ನನ್ನು ಕೇಳಿದ್ದರು. ಹೀಗಾಗಿ ಕಾನೂನಿನಂತೆ ನಡೆಯಲು ನಿರ್ಧರಿಸಿದ್ದೇನೆ ಎಂದು ಅವರು ಕೇಜ್ರಿವಾಲ್ ಅವರಿಗೆ ಹೇಳಿದ್ದಾರೆ. 

ಯಾರ ಸಹಾಯವನ್ನು ಪಡೆಯುವ ಆಸಕ್ತಿಯಿಲ್ಲ, ನನ್ನ ಕೇಸ್ ನಿರ್ವಹಿಸುವ ಸಾಮರ್ಥ್ಯ ನನಗಿದ್ದು ಅಮಾಯಕ ಎಂದು ಸಾಬೀತುಪಡಿಸುತ್ತೇನೆ. ನನ್ನ ಕೇಸ್ ಗೆ ಸಂಬಂಧಿಸಿದ ಎಲ್ಲಾ ಮೂಲಗಳನ್ನು ಹೊಂದಿದ್ದೇನೆ. ಯಾರ ಸಹಾಯವೂ ಬೇಡ ಎಂದು ಮಾಂಡೊಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಹೇಳಿದ್ದಾನೆ. 

ಕೇಜ್ರಿವಾಲ್ ಮತ್ತು ಜೈನ್ ಅವರಿಗೆ ಸಂಬಂಧಿಸಿದ ಅತ್ಯಂತ ವೈಯಕ್ತಿಕ ವಿಚಾರಗಳು ನನಗೆ ಗೊತ್ತು ಎಂದು ಬೆದರಿಕೆ ಹಾಕಿರುವ ಚಂದ್ರಶೇಖರ್, ಕೇಜ್ರಿವಾಲ್ ಅಥವಾ ಜೈನ್ ಗೆ ಸಂಬಂಧಿಸಿದ ಅತ್ಯಂತ ವೈಯಕ್ತಿಕ ವಿಚಾರಗಳನ್ನು ಬಹಿರಂಗಪಡಿಸಲು ನನಗೆ ಒತ್ತಾಯಿಸಿದರೆ ಅವರು ಯಾವುದೇ ಕಾರಣಕ್ಕೂ ಸಂತೋಷವಾಗಿರಲು ಸಾಧ್ಯವಿಲ್ಲ. ನಾನು ನೀಡುವ ವಿವರಗಳು ದೇಶವನ್ನೆ ಅಲುಗಾಡಿಸಲಿವೆ ಎಂದು ಚಂದ್ರಶೇಖರ್ ಪತ್ರದಲ್ಲಿ ಬೆದರಿಕೆ ಹಾಕಿದ್ದಾನೆ. 

ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರೇ, ನೀವು ಮತ್ತು ನಿಮ್ಮ ಸಹಚರರು ಹೇಳುತ್ತಿರುವಂತೆ,  ದೆಹಲಿ ಲೆಫ್ಟಿನೆಂಟ್  ಗವರ್ನರ್ ಮುಂದೆ ತಾನು ಪ್ರಸ್ತಾಪಿಸಿರುವ ಯಾವುದೇ ವಿಷಯ ತಪ್ಪು ಎಂದು ಪರಿಗಣಿಸಲ್ಪಟ್ಟಲ್ಲಿ ತಾನು ನೇಣಿಗೇರಲು ಸಿದ್ಧನಿದ್ದೇನೆ. ಆದರೆ, ಒಂದು ವೇಳೆ ದೂರು ಸಾಬೀತಾದರೆ, ನೀವು ರಾಜೀನಾಮೆ ನೀಡುತ್ತೀರಾ? ರಾಜಕೀಯದಿಂದ ನಿವೃತ್ತಿ ಹೊಂದುವಿರಾ ಎಂದು ಕೇಳಿದ್ದಾನೆ.

ಗೋವಾ ಮತ್ತು ಪಂಜಾಬ್ ಚುನಾವಣೆಗಾಗಿ ಪಕ್ಷಕ್ಕಾಗಿ ಆಮ್ ಆದ್ಮಿ ಪಕ್ಷದ ಸತ್ಯೇಂದರ್ ಜೈನ್ ನನ್ನ ಬಳಿ ಹಣ ಕೇಳಿದರು ಎಂದು ಆರೋಪಿಸಿದ್ದಾನೆ. ಜೈಲಿನ ಸಿಬ್ಬಂದಿ ಮೂಲಕ ನಿರಂತರ ಒತ್ತಡ, ಬೆದರಿಕೆಯಿಂದಾಗಿ ನನ್ನ ಎಲ್ಲವನ್ನು ನಿರ್ಲಕ್ಷಿಸಿ ಮೌನವಾಗಿದ್ದೆ. ಪಂಜಾಬ್ ಮತ್ತು ಗೋವಾ ಚುನಾವಣೆಯ ಸಂದರ್ಭದಲ್ಲಿ ನಾನು ತನಿಖೆಗೆ ಒಳಪಡುತ್ತಿದ್ದರೂ ಧೈರ್ಯದಿಂದ ಹಣ ನೀಡುವಂತೆ ಜೈನ್ ನನ್ನನ್ನು ಕೇಳಿದರು ಎಂದು ಸುಕೇಶ್ ಬರೆದಿದ್ದಾನೆ.

ಸುಳ್ಳು ಎಂಬ ಎಎಪಿ ಆರೋಪವನ್ನು ತಿರಸ್ಕರಿಸಿದ್ದು, ಸುಳ್ಳು ಹೇಳುತ್ತಿದ್ದರೆ ಜೈಲು ಆಡಳಿತ ತನ್ನ ಮೇಲೆ ಏಕೆ ಒತ್ತಡ ಹೇರುತ್ತಿದೆ ಅಥವಾ ಹಿಂದಿನ ದೂರನ್ನು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ಸುಕೇಶ್ ಚಂದ್ರಶೇಖರ್ ಪ್ರಶ್ನಿಸಿದ್ದಾನೆ. ದೆಹಲಿ ಎಂಸಿಡಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರವಾಗಿ ಪಕ್ಷ ಹಾಗೂ ನಾಯಕರ ವರ್ಚಸ್ಸು ಕುಗ್ಗಿಸುವ ಪ್ರಯತ್ನ ಎಂಬ ಆರೋಪವನ್ನು ಚಂದ್ರಶೇಖರ್ ತಿರಸ್ಕರಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com