ಕರೀಂಗಂಜ್: ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ 13 ವರ್ಷದ ಬಾಲಕಿ ಮೇಲೆ ಆರು ಅಪ್ರಾಪ್ತ ಬಾಲಕರು ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದ್ದು, ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಎಲ್ಲಾ ಆರು ಮಂದಿ ಬಾಲಕರು 13 ರಿಂದ 15 ವರ್ಷದೊಳಗಿನವರು ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯ ರಾಮಕೃಷ್ಣನಗರ ಪ್ರದೇಶದಲ್ಲಿ ನವೆಂಬರ್ 1 ರಂದು ಈ ಘಟನೆ ನಡೆದಿದೆ ಎಂದು ಕರೀಂಗಂಜ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪಾರ್ಥ ಪ್ರತಿಮ್ ದಾಸ್ ತಿಳಿಸಿದ್ದಾರೆ.
'ಪೋಷಕರ ಪ್ರಕಾರ, ಘಟನೆ ನಡೆದಾಗ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಹುಡುಗರು ಬಲವಂತವಾಗಿ ಮನೆಗೆ ನುಗ್ಗಿ ಒಬ್ಬೊಬ್ಬರಾಗಿ ಅತ್ಯಾಚಾರವೆಸಗಿದರು. ಅವರು ತಮ್ಮ ಫೋನ್‌ಗಳಲ್ಲಿ ಕೃತ್ಯದ ವಿಡಿಯೋಗಳನ್ನು ಸಹ ರೆಕಾರ್ಡ್ ಮಾಡಿದ್ದಾರೆ ಮತ್ತು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ದೂರಿರುವುದಾಗಿ' ಎಎಸ್‌ಪಿ ತಿಳಿಸಿದ್ದಾರೆ.
ಆರಂಭದಲ್ಲಿ, ಹುಡುಗಿ ಆಘಾತಕ್ಕೊಳಗಾದಳು ಮತ್ತು ಭಯಗೊಂಡಿದ್ದರಿಂದ ಕೃತ್ಯದ ಬಗ್ಗೆ ಯಾರಿಗೂ ಹೇಳಿಲ್ಲ. ನಂತರ ಆಕೆ ತನ್ನ ಪೋಷಕರಿಗೆ ತಿಳಿಸಿದ್ದು, ಸೋಮವಾರ ದೂರು ದಾಖಲಿಸಿದ್ದಾರೆ ಎಂದು ದಾಸ್ ತಿಳಿಸಿದ್ದಾರೆ.
ಪೊಲೀಸರು ಐಪಿಸಿಯ ವಿವಿಧ ವಿಭಾಗಗಳು ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ, 2012 (ಪೊಕ್ಸೊ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
13 ವರ್ಷದಿಂದ 15 ವರ್ಷದೊಳಗಿನ ಎಲ್ಲಾ ಆರು ಆರೋಪಿಗಳನ್ನು ನಾವು ಬಂಧಿಸಿದ್ದೇವೆ. ಅವರು ಮೊಬೈಲ್‌ನಲ್ಲಿ ಚಿತ್ರೀಕರಿಸಿದ ವಿಡಿಯೋಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಎಎಸ್‌ಪಿ ತಿಳಿಸಿದ್ದಾರೆ.
ರಕ್ತದ ಮಾದರಿಗಳು ಮತ್ತು ಇತರ ಸಾಕ್ಷ್ಯಗಳನ್ನು ಸಂಗ್ರಹಿಸಿ ಪರೀಕ್ಷೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಸದ್ಯ ಬಾಲಕರನ್ನು ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ' ಎಂದು ದಾಸ್ ಹೇಳಿದರು.
Advertisement