'ಬಿಜೆಪಿ ಸೇರಲು ಆ ಪಕ್ಷದ ನಾಯಕರು ಆಫರ್ ನೀಡಿದ್ದರು, ಆದರೆ...'; ತೆಲಂಗಾಣ ಸಿಎಂ ಕೆಸಿಆರ್ ಪುತ್ರಿ ಕವಿತಾ

ಬಿಜೆಪಿ ಸೇರಲು ಆ ಪಕ್ಷದ ನಾಯಕರು ಆಫರ್ ನೀಡಿದ್ದು ನಿಜ.. ಆದರೆ ನಾನು ಅವರ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಹೇಳಿದ್ದಾರೆ.
ಟಿಆರ್ ಎಸ್ ನಾಯಕಿ ಕೆ ಕವಿತಾ
ಟಿಆರ್ ಎಸ್ ನಾಯಕಿ ಕೆ ಕವಿತಾ

ಹೈದರಾಬಾದ್: ಬಿಜೆಪಿ ಸೇರಲು ಆ ಪಕ್ಷದ ನಾಯಕರು ಆಫರ್ ನೀಡಿದ್ದು ನಿಜ.. ಆದರೆ ನಾನು ಅವರ ಆಫರ್ ಅನ್ನು ಒಪ್ಪಿಕೊಳ್ಳಲಿಲ್ಲ ಎಂದು ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ ಕವಿತಾ ಹೇಳಿದ್ದಾರೆ.

ಈ ಹಿಂದೆ ತೆಲಂಗಾಣದಲ್ಲಿ ಆಡಳಿತಾರೂಢ TRS ಪಕ್ಷವನ್ನು ಹಾಳು ಮಾಡಲು ಬಿಜೆಪಿ ಪಕ್ಷದ ಮುಖಂಡರು ತಮ್ಮ ಪುತ್ರಿ ಕವಿತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಸಿಎಂ ಕೆಸಿಆರ್ ಗಂಭೀರ ಆರೋಪ ಮಾಡಿದ್ದರು. ಈ ಹೇಳಿಕೆ ತೆಲಂಗಾಣ ರಾಜಕೀಯದಲ್ಲಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದು, ಇದೀಗ ಸ್ವತಃ ಕವಿತಾ ಅವರೇ ಈ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. 'ಬಿಜೆಪಿ ಸೇರುವ ಆಫರ್ ಬಂದಿರುವುದು ನಿಜ...ಆದರೆ ನಾನು ಅವರ ಆಫರ್ ತಿರಸ್ಕರಿಸಿದ್ದೆ ಎಂದು ಹೇಳಿದ್ದಾರೆ.

ಅಂತೆಯೇ ಆಫರ್ ನೀಡಿದವರ ಹೆಸರು ಹೇಳಲು ಇಚ್ಚಿಸದ ಕವಿತಾ ಅವರು, ಈ ರೀತಿ ಮಾಡಿದವರ ಹೆಸರು ಹೇಳುವುದಿಲ್ಲ. ಬಿಜೆಪಿ ಮತ್ತು ಅದರ ಅಂಗಸಂಸ್ಥೆಗಳು ಮತ್ತು ಪಕ್ಷದ ನಿಕಟವರ್ತಿಗಳಿಂದ ತನಗೆ ಅನೇಕ ಆಫರ್‌ಗಳು ಬಂದಿವೆ. ಅದನ್ನು ನಾನು ಬಹಳ ನಯವಾಗಿ ನಿರಾಕರಿಸಿದ್ದೇನೆ. ಮಹಾರಾಷ್ಟ್ರದಂತೆ ತೆಲಂಗಾಣದಲ್ಲೂ ಶಿಂಧೆ ಮಾದರಿ ಜಾರಿಯಾಗಬೇಕು ಎಂಬಂತೆ ಅವರು ಮಾತನಾಡಿದ್ದಾರೆ. ಆದರೆ ಈ ಶಿಂಧೆ ಮಾದರಿ ತೆಲಂಗಾಣದಲ್ಲಿ ಕೆಲಸ ಮಾಡುವುದಿಲ್ಲ ಎಂದು ಕವಿತಾ ಹೇಳಿಕೆ ನೀಡಿದ್ದಾರೆ. 

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆ ಕವಿತಾ ಅವರು, ನಿಜಾಮಾಬಾದ್ ಬಿಜೆಪಿ ಲೋಕಸಭಾ ಸದಸ್ಯ ಧರ್ಮಪುರಿ ಅರವಿಂದ್ ಅವರ ವಿರುದ್ಧ ಕಿಡಿಕಾರಿದರು. 'ತಾವು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದೂರವಾಣಿ ಕರೆ ಮಾಡಿದ್ದಾರೆ ಎಂಬ ವರದಿ ಸತ್ಯಕ್ಕೆ ದೂರವಾದದ್ದು. ನಾನು ಸಭ್ಯ ರಾಜಕಾರಣಿ, ನಾನು ಈ ದೇಶದಲ್ಲಿ ಬಹಳ ದಿನ ರಾಜಕೀಯದಲ್ಲಿ ಉಳಿಯಲು ಬಯಸುತ್ತೇನೆ, ನಾನು ಯಾರ ಹೆಸರನ್ನೂ ಹೇಳಿ ವಿವಾದ ಸೃಷ್ಟಿಸಲು ಹೋಗುವುದಿಲ್ಲ ಎಂದು ಹೇಳಿದರು.

ಶಿವಸೇನೆಯ ನಾಯಕ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಯ ಒಂದು ಬಣವು ಬೆಂಬಲವನ್ನು ಹಿಂತೆಗೆದುಕೊಂಡು ಬಿಜೆಪಿಯೊಂದಿಗೆ ಕೈಜೋಡಿಸಿ ಸರ್ಕಾರ ರಚನೆ ಮಾಡಿದೆ. ನೆರೆಯ ಮಹಾರಾಷ್ಟ್ರದಲ್ಲಿ ಇತ್ತೀಚಿನ ಸರ್ಕಾರದ ಬದಲಾವಣೆಯನ್ನು 'ಶಿಂಧೆ ಮಾದರಿ' ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿದ್ದು, ಶಿಂಧೆ ಈಗ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿದ್ದಾರೆ. ಇದೇ ರೀತಿಯ ಬದಲಾವಣೆ ತೆಲಂಗಾಣದಲ್ಲಿ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಆದರೆ ತೆಲಂಗಾಣ ಜನರು ತಮ್ಮದೇ ಪಕ್ಷಗಳಿಗೆ ಮತ್ತು ತಮ್ಮದೇ ನಾಯಕರಿಗೆ "ಮೋಸ ಮತ್ತು ದ್ರೋಹ" ಮಾಡುವುದಿಲ್ಲ ಎಂದು ಕವಿತಾ ಹೇಳಿದರು.

"ನಾವು ಹಿಂಬಾಗಿಲಿನಿಂದ ಅಲ್ಲ, ನಮ್ಮ ಸ್ವಂತ ಶಕ್ತಿಯಿಂದ ನಾಯಕರಾಗುತ್ತೇವೆ, ನಾನು ಅವರ ಪ್ರಸ್ತಾಪವನ್ನು ಬಹಳ ನಯವಾಗಿ ತಿರಸ್ಕರಿಸಿದ್ದೇನೆ ... ನನಗೆ ತಂದ ಪ್ರಸ್ತಾಪಗಳನ್ನು ನಾನು ಸ್ಪಷ್ಟವಾಗಿ ತಿರಸ್ಕರಿಸಿದ್ದೇನೆ. ಏಕೆಂದರೆ ನನ್ನ ಹೃದಯವು ನನ್ನ ನಾಯಕ ಕೆಸಿಆರ್ ಮತ್ತು ಗೌರವಾನ್ವಿತ ಪಕ್ಷದಲ್ಲಿದೆ ಎಂದು ಹೇಳಿದರು. ಬಿಜೆಪಿ ನಾಯಕರು ತಮ್ಮ ಹೆಸರನ್ನು ಎಳೆದು ತಂದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಟಿಆರ್‌ಎಸ್ ನಾಯಕಿ ಕವಿತಾ, 'ಕೇಂದ್ರ ತನಿಖಾ ಸಂಸ್ಥೆಗಳು ಬಂದರೆ ಅವರು ತಪ್ಪು ಎಂದು ಸಾಬೀತುಪಡಿಸಬಹುದು.. ಕೇಂದ್ರ ಸರ್ಕಾರ ಕೇಂದ್ರೀಯ ಸಂಸ್ಥೆಗಳನ್ನು ತನ್ನ ರಾಜಕೀಯ ದ್ವೇಷಕ್ಕೆ ಬಳಸಿಕೊಳ್ಳುತ್ತಿದೆ ಎಂದು ಹೇಳಿದರು.

'ಬಿಜೆಪಿ ನಾಯಕರು ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸುತ್ತಾರೆ ಮತ್ತು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ತಮ್ಮ ವಿರುದ್ಧ ಸುಳ್ಳು ಪ್ರಚಾರ ಮಾಡುವುದನ್ನು ನಿಲ್ಲಿಸುವಂತೆ ಸಂಸದ ಅರವಿಂದ್ ರನ್ನು ಕೋರಿದ ಕವಿತಾ, ಹಾಗೆ ಮಾಡದಿದ್ದರೆ ನಿಜಾಮಾಬಾದ್‌ನಲ್ಲಿ ಜನರೇ ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಹೇಳಿದರು. 

ಅತ್ತ ಕವಿತಾ ಸುದ್ದಿಗೋಷ್ಠಿಯಾಗುತ್ತಲೇ ಇತ್ತ ನಗರದಲ್ಲಿ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ನಿವಾಸವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿದ್ದಾರೆ. ಘಟನೆಯ ಕುರಿತು ಪ್ರತಿಕ್ರಿಯಿಸಿದ ಅರವಿಂದ್, ತಮ್ಮ ನಿವಾಸದಲ್ಲಿದ್ದ ಕೆಲವು ಮಹಿಳಾ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿದ್ದಾರೆ ಮತ್ತು ಅವರ ತಾಯಿಗೂ ವ್ಯಕ್ತಿಗಳು ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com