ಚೆನ್ನೈ: ಕೌನ್ಸೆಲಿಂಗ್ ನೆಪದಲ್ಲಿ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ, ಶಾಲಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲು

ಶಾಲೆಯಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪನಗರದಲ್ಲಿರುವ ಖಾಸಗಿ ಶಾಲೆಯೊಂದರ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಚೆನ್ನೈ: ಶಾಲೆಯಲ್ಲಿ ಅನೇಕ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಉಪನಗರದಲ್ಲಿರುವ ಖಾಸಗಿ ಶಾಲೆಯೊಂದರ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಬುಧವಾರ ಶಾಲೆಯ ಹೊರಗೆ ಪ್ರತಿಭಟನೆ ನಡೆಸಿದ ನಂತರ ಅವರ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಆವಡಿ ಕಮಿಷನರೇಟ್‌ನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, ಆರೋಪಿಯನ್ನು ವಿಕ್ರಮ್ (ಹೆಸರು ಬದಲಾಯಿಸಲಾಗಿದೆ) ಎಂದು ಗುರುತಿಸಲಾಗಿದೆ. ಅವನು ಹಿಂದಿನ ಶಾಲೆಯ ಕರೆಸ್ಪಾಡೆಂಟ್ ಮಗ. ಆತನ ತಂದೆ ನಿವೃತ್ತರಾದ ನಂತರ ವಿಕ್ರಮ್ ಈ ಕೆಲಸಕ್ಕೆ ಸೇರಿದ್ದನು.

ಕೌನ್ಸೆಲಿಂಗ್ ನೀಡುವ ನೆಪದಲ್ಲಿ 12ನೇ ತರಗತಿಯ ಹಲವು ವಿದ್ಯಾರ್ಥಿನಿಯರಿಗೆ ವಿಕ್ರಮ್ ಲೈಂಗಿಕ ಕಿರುಕುಳ ನೀಡಿದ್ದಾನೆ. ಪರೀಕ್ಷೆಗೆ ತಯಾರಾಗಲು ಸಹಾಯ ಮಾಡುವುದಾಗಿ ಹೇಳಿ ಅವರನ್ನು ಪ್ರತ್ಯೇಕ ಕೋಣೆಗೆ ಕರೆದೊಯ್ದು ಲೈಂಗಿಕ ಕಿರುಕುಳ ನೀಡುತ್ತಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲವು ಹುಡುಗಿಯರು ಈ ಘಟನೆಯನ್ನು ತಮ್ಮ ಪೋಷಕರಿಗೆ ತಿಳಿಸಿದ್ದು, ನಂತರ ಅವರು ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಆದರೂ, ಆಡಳಿತ ಮಂಡಳಿ ವಿಕ್ರಮ್ ವಿರುದ್ಧ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಇದರಿಂದ ಕೋಪಗೊಂಡ ಪೋಷಕರು ಮತ್ತು ವಿದ್ಯಾರ್ಥಿಗಳು ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿ ಬುಧವಾರ ಶಾಲಾ ಆವರಣದ ಹೊರಗೆ ಪ್ರತಿಭಟನೆ ನಡೆಸಿದರು. ಕೆಲ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹ ನಡೆಸಿದರು. ಸಂಜೆ ವೇಳೆಗೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದಾಗ, ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಮೂಲಗಳ ಪ್ರಕಾರ, ಈ ವಾರ ಶಾಲೆಯನ್ನು ಮುಚ್ಚಲಾಗಿದೆ. ಈಗ ನಡೆಯುತ್ತಿರುವ ಮಧ್ಯಂತರ ಪರೀಕ್ಷೆಯನ್ನು ಮುಂದೂಡಲಾಗಿದ್ದು, ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com