ಗೌತಮ್ ಅದಾನಿಗೆ ರಾಜಸ್ಥಾನ ಸರ್ಕಾರ ಯಾವುದೇ ಆದ್ಯತೆ ನೀಡಿಲ್ಲ: ರಾಹುಲ್ ಗಾಂಧಿ

ರಾಜಸ್ಥಾನದ ಕಾಂಗ್ರೆಸ್ ಸರ್ಕಾರವು ಕೈಗಾರಿಕೋದ್ಯಮಿಗೆ ಯಾವುದೇ ಆದ್ಯತೆ ನೀಡಿಲ್ಲ ಮತ್ತು ನಾನು ಕಾರ್ಪೊರೇಟ್‌ಗಳ ವಿರುದ್ಧ ಅಲ್ಲ. ಆದರೆ, ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.
ರಾಹುಲ್ ಗಾಂಧಿ
ರಾಹುಲ್ ಗಾಂಧಿ
Updated on

ತುರುವೇಕೆರೆ: ಗೌತಮ್ ಅದಾನಿ ಅವರು ರಾಜಸ್ಥಾನದಲ್ಲಿ ಭಾರಿ ಹೂಡಿಕೆ ಮಾಡುವುದಾಗಿ ಹೇಳಿದ ಒಂದು ದಿನದ ನಂತರ, ಕಾಂಗ್ರೆಸ್ ಸರ್ಕಾರವು ಕೈಗಾರಿಕೋದ್ಯಮಿಗೆ ಯಾವುದೇ ಆದ್ಯತೆ ನೀಡಿಲ್ಲ ಮತ್ತು ನಾನು ಕಾರ್ಪೊರೇಟ್‌ಗಳ ವಿರುದ್ಧ ಅಲ್ಲ. ಆದರೆ, ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ ಎಂದು ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಸ್ಥಾನ ಸರ್ಕಾರವು ಅದಾನಿಗೆ ತಪ್ಪಾಗಿ ವ್ಯವಹಾರವನ್ನು ನೀಡಿದರೆ, ಅದನ್ನೂ ವಿರೋಧಿಸುತ್ತೇನೆ ಎಂದು ಹೇಳಿದರು.

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅದಾನಿಯನ್ನು ಹೊಗಳಿದ ನಂತರ ಬಿಜೆಪಿ ಶುಕ್ರವಾರ ಕಾಂಗ್ರೆಸ್ ಅನ್ನು ಲೇವಡಿ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಕೇವಲ ದೊಡ್ಡ ಉದ್ಯಮಿಗಳಿಗೆ ಮಾತ್ರ ಸಹಾಯ ಮಾಡುತ್ತಾರೆ ಎಂದು ರಾಹುಲ್ ಗಾಂಧಿ ಆಗಾಗ್ಗೆ ಆರೋಪಿಸುತ್ತಿರುತ್ತಾರೆ.

ರಾಜಸ್ಥಾನ ಸರ್ಕಾರದ ಕಾರ್ಯಕ್ರಮವೊಂದರಲ್ಲಿ ಅದಾನಿ ಅವರ ಉಪಸ್ಥಿತಿ ಮತ್ತು ರಾಜ್ಯದಲ್ಲಿ ಹೂಡಿಕೆ ಮಾಡುವುದಾಗಿ ಹೇಳಿರುವ ಬಗ್ಗೆ ಕೇಳಿದ್ದಕ್ಕೆ ಉತ್ತರಿಸಿದ ರಾಹುಲ್, 'ಅದಾನಿ ಅವರು ರಾಜಸ್ಥಾನಕ್ಕೆ 60,000 ಕೋಟಿ ರೂ. ಹೂಡಿಕೆ ಮಾಡುವುದಾಗಿ ಹೇಳಿದ್ದಾರೆ. ಅಂತಹ ಪ್ರಸ್ತಾಪವನ್ನು ಯಾವ ಮುಖ್ಯಮಂತ್ರಿಯೂ ನಿರಾಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

'ವಾಸ್ತವವಾಗಿ, ಮುಖ್ಯಮಂತ್ರಿಯೊಬ್ಬರು ಇಂತಹ ಪ್ರಸ್ತಾಪವನ್ನು ನಿರಾಕರಿಸುವುದು ಸರಿಯಲ್ಲ. ಕೆಲವು ಆಯ್ದ ಉದ್ಯಮಿಗಳಿಗಷ್ಟೇ ಸಹಾಯ ಮಾಡಲು ರಾಜಕೀಯ ಅಧಿಕಾರವನ್ನು ಬಳಸುವುದಕ್ಕೆ ನನ್ನ ವಿರೋಧವಿದೆ. ದೇಶದಲ್ಲಿನ ಪ್ರತಿಯೊಂದೂ ಉದ್ಯಮವನ್ನು ಎರಡು-ಮೂರು ಅಥವಾ ನಾಲ್ಕು ದೊಡ್ಡ ಉದ್ಯಮಗಳು ಏಕಸ್ವಾಮ್ಯಗೊಳಿಸಲು ರಾಜಕೀಯವಾಗಿ ಸಹಾಯ ಮಾಡುವುದಕ್ಕೆ ನನ್ನ ವಿರೋಧವಿದೆ' ಎಂದು ಅವರು ಹೇಳಿದರು.

'ನಾನು ಯಾವುದೇ ರೀತಿಯಲ್ಲಿ ಕಾರ್ಪೊರೇಟ್‌ಗಳ ವಿರುದ್ಧವಾಗಿಲ್ಲ, ನಾನು ಯಾವುದೇ ರೀತಿಯಲ್ಲಿ ಉದ್ಯಮಗಳ ವಿರುದ್ಧವೂ ಇಲ್ಲ. ಆದರೆ, ನಾನು ಭಾರತೀಯ ಉದ್ಯಮದ ಸಂಪೂರ್ಣ ಏಕಸ್ವಾಮ್ಯವನ್ನು ವಿರೋಧಿಸುತ್ತೇನೆ. ಏಕೆಂದರೆ ಅದು ದೇಶವನ್ನು ದುರ್ಬಲಗೊಳಿಸುತ್ತದೆ. ಇಂದು ನಾವು ನೋಡುತ್ತಿರುವ ಬಿಜೆಪಿ ಸರ್ಕಾರವು ಆಯ್ದ ಕೆಲವು ವ್ಯವಹಾರಗಳಿಗೆ ಸಹಾಯ ಮಾಡುವ ಮೂಲಕ ಎಲ್ಲಾ ವ್ಯವಹಾರಗಳ ಸಂಪೂರ್ಣ ಏಕಸ್ವಾಮ್ಯವನ್ನು ಮಾಡುತ್ತಿದೆ' ಎಂದು ಆರೋಪಿಸಿದರು.

ಇದಕ್ಕೂ ಮುನ್ನ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಗೆಹ್ಲೋಟ್-ಅದಾನಿ ಅವರ ಭೇಟಿಯ ಬಗ್ಗೆ ಮಾಧ್ಯಮಗಳಲ್ಲಿ ಹೆಚ್ಚಿನ ಪ್ರಚಾರ ಮಾಡಲಾಗುತ್ತಿದೆ. ಅದಾನಿ ರಾಜಸ್ಥಾನದಲ್ಲಿ ಸರಿಸುಮಾರು 60,000 ಕೋಟಿ ಹೂಡಿಕೆ ಮಾಡಲು ಬಯಸಿದ್ದಾರೆ. ಯಾವುದೇ ಮುಖ್ಯಮಂತ್ರಿ ಹೂಡಿಕೆ ಮಾಡಬೇಡಿ ಎಂದು ಹೇಳುವುದಿಲ್ಲ. ರಾಜಸ್ಥಾನ ಸರ್ಕಾರದಿಂದ ಅದಾನಿಗಾಗಿ ಯಾವುದೇ ವಿಶೇಷ ನಿಯಮಗಳು ಅಥವಾ ನೀತಿಗಳಿಲ್ಲ. ಗೆಹ್ಲೋಟ್ ಅವರು ಮೋದಿ ಅವರ ಸಿದ್ಧಾಂತಕ್ಕೆ ತುಂಬಾ ವಿರುದ್ಧವಾಗಿದ್ದಾರೆ' ಎಂದಿದ್ದಾರೆ.

ಅದಾನಿ ಮುಂದಿನ ಐದರಿಂದ ಏಳು ವರ್ಷಗಳಲ್ಲಿ ರಾಜಸ್ಥಾನದಲ್ಲಿ 65,000 ಕೋಟಿ ರೂಪಾಯಿಗಳ ಬೃಹತ್ ಹೂಡಿಕೆಯನ್ನು ಘೋಷಿಸಿದ್ದು, 10,000 MW ಸೌರ ವಿದ್ಯುತ್ ಸೌಲಭ್ಯ, ಸಿಮೆಂಟ್ ಸ್ಥಾವರ ವಿಸ್ತರಣೆ ಮತ್ತು ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನವೀಕರಿಸುವುದು ಸೇರಿದಂತೆ ವಿವಿಧ ಯೋಜನೆಗಳಲ್ಲಿ ಹಣ ಹೂಡಲಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com